
ಬೆಂಗಳೂರು (ಮಾ.03): ರಾಜ್ಯದಲ್ಲಿ ಬಡತನ ರೇಖೆಗಿಂತ ಕಳೆಗಿರುವ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ 2006ರಲ್ಲಿ 'ಭಾಗ್ಯಲಕ್ಷ್ಮಿ' ಯೋಜನೆಯನ್ನು ಜಾರಿಗೊಳಿಸಲಾಯಿತು. ಇದೀಗ 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಬಾಂಡ್ ಮಾಡಿಸಿದ್ದ ಹೆಣ್ಣು ಮಗುವಿನ ಬಾಂಡ್ ಇದೀಗ ಪಕ್ವತೆಯನ್ನು ಹೊಂದಿದ್ದು (ಮೆಚ್ಯೂರಿಟಿ) ಫಲಾನುಭವಿಗಳಿಗೆ ಹಣ ನೀಡಲಾಗುತ್ತದೆ. ಆದ್ದರಿಂದ ಕೂಡಲೇ ನಿಮಗೆ ಕೊಡಲಾದ ಬಾಂಡ್ ತೆಗೆದುಕೊಂಡು ಅಂಗನವಾಡಿಗೆ ಭೇಟಿ ನೀಡಿ..
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಶಿಶು ಅಭಿವೃದ್ಧಿ ಯೋಜನೆ, ಬೆಂಗಳೂರು ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ಒಟ್ಟು 1,527 ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇದೀಗ ನೋಂದಣಿ ಮಾಡಿಸಿಕೊಂಡಿದ್ದ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್.ಐ.ಸಿ.ಯಿಂದ ಪರಿಪಕ್ವ ಮೊತ್ತ (Maturity amount) ಮಂಜೂರಾಗಿದೆ.
ಎಲ್ಲಾ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಗಳನ್ನು ಹಾಗೂ ಶಿಶು ಅಭಿವೃದ್ಧಿ, ಬೆಂಗಳೂರು ರಾಜ್ಯ ಯೋಜನಾ ಕಚೇರಿ, ಎನ್.ಆರ್ ಕಾಲೋನಿ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅಥವಾ ದೂರವಾಣಿ ಸಂಖ್ಯೆ 080-26601917 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ರಾಜ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಮಹಿಳೆ ಡ್ರೀಮ್ ಜಾಬ್! ಏಕೆ ಗೊತ್ತಾ?
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ ವಿಲೀನ: ಇನ್ನು ಭಾಗ್ಯಲಕ್ಷ್ಮಿ ಯೋಜನೆಯನ್ನು ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಸಂಯೋಜನೆ ಮಾಡಲಾಗಿದೆ. ಹೆಣ್ಣು ಮಗುವಿನ ಸ್ಥಾನ ಉನ್ನತೀಕರಿಸುವ ನಿಟ್ಟಿನಲ್ಲಿ ಈಗಲೂ ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ 'ಭಾಗ್ಯಲಕ್ಷ್ಮಿ' ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಲಾಗಿರುತ್ತದೆ.
ಸದರಿ ಯೋಜನೆಯನ್ನು ಭಾಗ್ಯಲಕ್ಷ್ಮಿ -ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ. ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ 3000 ರೂ.ನಂತೆ 15 ವರ್ಷಗಳವರೆಗೆ ಒಟ್ಟು 45,000 ರೂ.ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. 21 ವರ್ಷ ಅವಧಿ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತ ರೂ.1.27 ಲಕ್ಷ ನೀಡಲಾಗುತ್ತದೆ. 10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಯೋಜನೆಯಡಿ ಅವಕಾಶವಿರುತ್ತದೆ. ಉಳಿದಂತೆ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಅಳವಡಿಸಲಾಗಿರುವ ಇನ್ನಿತರೆ ಕಾರ್ಯ ವಿಧಾನಗಳು ಮುದುವರೆಯುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ