ಕನ್ನಡ ನಾಡಿನ ಕರಿಚಿರತೆ; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋದ ಅಸಲಿಯತ್ತೇನು ಗೊತ್ತೇ?

Published : Feb 13, 2026, 08:59 PM IST
Karnataka Forest Black Panther

ಸಾರಾಂಶ

ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಮಾನ್ಯ ಚಿರತೆ ಮತ್ತು ಅಪರೂಪದ ಕಪ್ಪು ಚಿರತೆ ಒಟ್ಟಿಗೆ ನೀರು ಕುಡಿಯುತ್ತಿರುವ ಅದ್ಭುತ ದೃಶ್ಯವೊಂದು ವೈರಲ್ ಆಗಿದೆ. ವನ್ಯಜೀವಿ ಛಾಯಾಗ್ರಾಹಕರು ಸೆರೆಹಿಡಿದ ಈ ವಿಡಿಯೋ ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಇದರ ಹಿಂದಿನ ಅಸಲಿತ್ತು ಇಲ್ಲಿದೆ ನೋಡಿ..

ಚಿಕ್ಕಮಗಳೂರು: ಪ್ರಕೃತಿಯ ಮಡಿಲಲ್ಲಿ ಅದೆಂತಹ ಅದ್ಭುತಗಳು ಅಡಗಿರುತ್ತವೆ ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ (Bhadra Tiger Reserve) ಈ ಅಪರೂಪದ ದೃಶ್ಯವೇ ಸಾಕ್ಷಿ. ಸಾಮಾನ್ಯವಾಗಿ ಕಾಡಿನ ಪ್ರಾಣಿಗಳು, ಅದರಲ್ಲೂ ವಿಶೇಷವಾಗಿ ಚಿರತೆಗಳು ಏಕಾಂಗಿಯಾಗಿ ಬದುಕಲು ಇಷ್ಟಪಡುತ್ತವೆ. ಆದರೆ, ಭದ್ರಾ ಅರಣ್ಯದ ಕೆರೆಯೊಂದರ ದಡದಲ್ಲಿ ಸಾಮಾನ್ಯ ಚಿರತೆ ಮತ್ತು ಅಪರೂಪದ ಕಪ್ಪು ಚಿರತೆ (Black Panther) ಜೊತೆಯಾಗಿ ಬಂದು ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ದೃಶ್ಯವೊಂದು ಈಗ ಇಡೀ ವಿಶ್ವದ ವನ್ಯಜೀವಿ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ವೈರಲ್ ವಿಡಿಯೋದ ಹಿನ್ನೆಲೆ:

ವನ್ಯಜೀವಿ ಛಾಯಾಗ್ರಾಹಕ ಸೋಹನ್ ಸಿಂಗ್ (@the_wildeye_captures) ಅವರು ಈ ಅದ್ಭುತ ಕ್ಷಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಒಂದು ಚಿರತೆ ಶಾಂತವಾಗಿ ನೀರು ಕುಡಿಯುತ್ತಿರುವುದು ಕಾಣಿಸುತ್ತದೆ. ಅದರ ಬೆನ್ನಲ್ಲೇ ಬಹಳ ಸಮಾಧಾನದಿಂದ ನಡೆದು ಬರುವ ಕಪ್ಪು ಚಿರತೆ, ಯಾವುದೇ ಅಳುಕಿಲ್ಲದೆ ಸಾಮಾನ್ಯ ಚಿರತೆಯ ಪಕ್ಕದಲ್ಲೇ ನಿಂತು ನೀರು ಕುಡಿಯಲು ಆರಂಭಿಸುತ್ತದೆ. ಕಾಡಿನ ಇಬ್ಬರು ಬಲಿಷ್ಠ ಬೇಟೆಗಾರರು ಯಾವುದೇ ಸಂಘರ್ಷವಿಲ್ಲದೆ ಒಂದೇ ಜಾಗದಲ್ಲಿ ಶಾಂತಿಯುತವಾಗಿ ಇರುವುದು ವನ್ಯಜೀವಿ ಜಗತ್ತಿನಲ್ಲಿ ಅತ್ಯಂತ ವಿರಳವಾದ ಘಟನೆಯಾಗಿದೆ.

1 ಕೋಟಿಗೂ ಅಧಿಕ ವೀಕ್ಷಣೆ:

ಫೆಬ್ರವರಿ 11 ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 10.4 ದಶಲಕ್ಷ (1.04 ಕೋಟಿ) ವೀಕ್ಷಣೆಗಳನ್ನು ಕಂಡಿದ್ದು, ಸುಮಾರು 8 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸೋಹನ್ ಸಿಂಗ್ ಈ ವಿಡಿಯೋಗೆ ‘ನಕ್ಷತ್ರಗಳು ಒಂದೆಡೆ ಸೇರಿದಾಗ ಪವಾಡಗಳು ಸಂಭವಿಸುತ್ತವೆ’ ಎಂಬ ಸುಂದರವಾದ ಅಡಿಬರಹ ನೀಡಿದ್ದಾರೆ. ದೃಶ್ಯದ ಸೌಂದರ್ಯವನ್ನು ಕಂಡು ಅನೇಕರು ಇದು ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ವಿಡಿಯೋ ಇರಬಹುದೇ ಎಂದು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಬೆಳಕು ಬಿದ್ದಾಗ ಕಪ್ಪು ಚಿರತೆಯ ದೇಹದ ಮೇಲಿರುವ ವಿಶಿಷ್ಟ ಚುಕ್ಕೆಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಇದೊಂದು ಪಕ್ಕಾ ನೈಜ ದೃಶ್ಯ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

 

ಭದ್ರಾದ ಹಿರಿಮೆ:

ಪಶ್ಚಿಮ ಘಟ್ಟಗಳ ಸುಂದರ ಹಸಿರ ಸಿರಿಯ ನಡುವೆ ಇರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಮಲೆನಾಡಿನ ಜೀವನಾಡಿಯಾಗಿದೆ. ಸುಮಾರು 20 ರಿಂದ 25 ಹುಲಿಗಳಿಗೆ ಆಶ್ರಯ ತಾಣವಾಗಿರುವ ಈ ಅರಣ್ಯದಲ್ಲಿ ಇಂತಹ ಅಪರೂಪದ ಕಪ್ಪು ಚಿರತೆಗಳ ದರ್ಶನ ಪ್ರವಾಸಿಗರಿಗೆ ಹಬ್ಬದ ಊಟದಂತಿದೆ. ಇತ್ತೀಚಿನ ಕೆಲವು ದಿನಗಳಿಂದ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಈ 'ಚಿರತೆ ಜೋಡಿ' ಆಗಾಗ ದರ್ಶನ ನೀಡುತ್ತಿದ್ದು, ವನ್ಯಜೀವಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದಿದೆ.

ವನ್ಯಜೀವಿ ಪ್ರೇಮಿಗಳ ಪ್ರಕಾರ, ಈ ಕಪ್ಪು ಚಿರತೆಯು ತಾಯಿ ಚಿರತೆಯೊಂದಿಗೆ ಕಾಣಿಸಿಕೊಂಡಿರುವುದು ಈ ಭಾಗದ ಪರಿಸರ ವ್ಯವಸ್ಥೆಯ ಸಮತೋಲನವನ್ನು ತೋರಿಸುತ್ತದೆ. ಪ್ರಕೃತಿಯ ಈ ಮಾಂತ್ರಿಕ ಕ್ಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಕರ್ನಾಟಕದ ಅರಣ್ಯ ಸಿರಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ!
ಪಿಎಂ ಕಿಸಾನ್ ಯೋಜನೆಗೆ ಆಧಾರ್ ಲಿಂಕ್ ಮಾಡಿ ₹2000 ಪಡೆಯಿರಿ; 30 ಲಕ್ಷ ರೈತರಿಗೆ ಸೂಚನೆ ಕೊಟ್ಟ ಸರ್ಕಾರ!