ಲಾಕ್‌ಡೌನ್‌ ಗೊಂದಲ : ಸರ್ಕಾರಕ್ಕೆ ಎಚ್‌ಡಿಕೆ ಮಹತ್ವದ ಸಲಹೆ

By Suvarna News  |  First Published Jun 3, 2021, 4:34 PM IST

* ಲಾಕ್‌ಡೌನ್‌ ಬಗ್ಗೆ ಅಭಿಪ್ರಾಯ ತಿಳಿಸಿದ ಕುಮಾರಸ್ವಾಮಿ 
* ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಎಚ್‌ಡಿಕೆ
* ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಮಾಜಿ ಮುಖ್ಯಮಂತ್ರಿ


ಬೆಂಗಳೂರು, (ಜೂನ್.03): ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ನ್ನು ಇನ್ನೂ ಒಂದು ವಾರ ಕಾಲ ವಿಸ್ತರಣೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಲಹೆ ಕೊಟ್ಟಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಕೋವಿಡ್ ಸೋಂಕು, ಬೆಂಗಳೂರಿನಲ್ಲಿ ಸ್ವಲ್ಪ ತಗ್ಗಿದ್ದರೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಲ್ಲ. ಆದ್ದರಿಂದ ಸರ್ಕಾರ, ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದಿದ್ದಾರೆ.

Latest Videos

undefined

ಸಿಎಂ ಸಭೆ ಅಂತ್ಯ: ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರ, ಎಷ್ಟು ದಿನ..?

ಕೋವಿಡ್ ಸೋಂಕಿನ ಮೊದಲ ಅಲೆಯ ಕಳೆದ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರದ ಆದಾಯ ತೆರಿಗೆ ಕುಗ್ಗಿತ್ತು. ಆದರೆ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಕ್ಕೆ ತೆರಿಗೆ ಹೆಚ್ಚು ಬಂದಿದೆ. ಅಬಕಾರಿ ಇಲಾಖೆಯೊಂದರಲ್ಲೇ ಶೇ.150ರಷ್ಟು ಕಳೆದ ವರ್ಷಕ್ಕಿಂತ ಹೆಚ್ಚಿನ ಆದಾಯ ಬಂದಿದೆ.

ಸರ್ಕಾರ ಈ ಬಾರಿ ಘೋಷಿಸಿರುವ 1,250 ಕೋಟಿ ರೂಪಾಯಿಗಳ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಸುಮಾರು ಒಂದು ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ಕೊಡುವಂತೆ ಅವರು ಆಗ್ರಹಿಸಿದ್ದಾರೆ.

ರೈತರು, ಶ್ರಮಿಕ ವರ್ಗ, ಕಾರ್ಮಿಕರಿಗೆ ತಲಾ 10 ಸಾವಿರ ರೂಪಾಯಿ ಏಕರೂಪ ಪರಿಹಾರ ಘೋಷಣೆ ಮಾಡಿದರೆ, 10 ಸಾವಿರ ಕೋಟಿ ರೂಪಾಯಿಗಳ ಹೊರೆಯನ್ನು ಭರಿಸಬೇಕಾಗುತ್ತದೆ. ವರ್ಷಕ್ಕೆ ಲಕ್ಷಾಂತರ ಕೋಟಿಗಳ ಬಜೆಟ್ ಘೋಷಣೆ ಮಾಡುವ ರಾಜ್ಯ ಸರ್ಕಾರಕ್ಕೆ ಇದೇನು ಭರಿಸಲಾಗದ ಹೊರೆಯಾಗದು ಎಂದು ಸಲಹೆ ನೀಡಿದ್ದಾರೆ.

ಕೆಲವು ಅನಗತ್ಯ ಕಾಮಗಾರಿಗಳಿಗೆ 1500 ಕೋಟಿ ರೂ ಅಥವಾ 2 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮಂಜೂರು ಮಾಡುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಒಳಿತು. ಇಂತಹ ಕಾಮಗಾರಿಗಳ ಶೇ.30 ರಿಂದ 40ರಷ್ಟು ಹಣ ಉಪಯೋಗವಾಗುತ್ತಿಲ್ಲ. ತೋರ್ಪಡಿಕೆಗೆ ಪರಿಹಾರ ಘೋಷಣೆ ಮಾಡುವುದನ್ನು ಬಿಟ್ಟು, ಧರ್ಮ ಸಂಕಟಕ್ಕೆ ಸಿಲುಕಿರುವ ಜನತೆಗೆ ಬದ್ಧತೆಯ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಪ್ಯಾಕೇಜ್ ಘೋಷಣೆ ಮಾಡುವಂತೆ ಎಚ್‌ಡಿಕೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

click me!