ಬೆಸ್ಕಾಂ ಗುತ್ತಿಗೆ ಆಂಧ್ರ ವ್ಯಕ್ತಿ ಪಾಲು! ಪ್ಯಾಕೇಜ್‌ ಗುತ್ತಿಗೆ ಕೈ ಬಿಡಲು ಆಗ್ರಹ

By Kannadaprabha NewsFirst Published Jan 5, 2020, 8:57 AM IST
Highlights

ವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಒಂದು ಪ್ಯಾಕೇಜ್‌ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿದೆ.

ಶ್ರೀಕಾಂತ ಎನ್‌. ಗೌಡಸಂದ್ರ

ಬೆಂಗಳೂರು [ಜ.05]:  ಸಾಮಾನ್ಯ ಗುತ್ತಿಗೆದಾರರು ಇದುವರೆಗೂ ನಡೆಸುತ್ತಿದ್ದ ಸಣ್ಣ ಪುಟ್ಟವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಒಂದು ಪ್ಯಾಕೇಜ್‌ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಬೆಸ್ಕಾಂನ ಈ ನಿರ್ಧಾರ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳೀಯ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಲಿದೆ ಎಂಬ ಆರೋಪ ಕೇಳಿಬಂದಿದೆ.

ವಿಭಾಗವಾರು ಕಾಮಗಾರಿಗಳನ್ನು ಎಸ್‌.ಆರ್‌. ದರ ಅಥವಾ ಟೆಂಡರ್‌ ಮೂಲಕ ತುಂಡು ಗುತ್ತಿಗೆಗಳನ್ನಾಗಿ ಮಾಡಿ ಅನುಮತಿ ಪಡೆದ ಸ್ಥಳೀಯ ಗುತ್ತಿಗೆದಾರರಿಗೆ ನೀಡಲಾಗುತ್ತಿತ್ತು. ಆದರೆ, ಬೆಸ್ಕಾಂ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ 450 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್‌ ಗುತ್ತಿಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಅನುಮತಿ ಪಡೆದ 6 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಹಾಗೂ ಅವರ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ಕೂಡಲೇ ಪ್ಯಾಕೇಜ್‌ ಗುತ್ತಿಗೆ ಹಿಂಪಡೆದು ತುಂಡು ಗುತ್ತಿಗೆ ವಹಿಸುವಂತೆ ಸ್ಥಳೀಯ ಗುತ್ತಿಗೆದಾರರು ಒತ್ತಾಯ ಮಾಡಿದ್ದಾರೆ.

ಸಿಎಂಗೆ ಮನವಿ:  ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್‌.ಎಂ ಕೃಷ್ಣ, ಕೂಡಲೇ ಪ್ಯಾಕೇಜ್‌ ಗುತ್ತಿಗೆ ರದ್ದು ಪಡಿಸಿ ತುಂಡು ಗುತ್ತಿಗೆ ನೀಡಬೇಕು. ಈ ಮೂಲಕ ಈಗಾಗಲೇ ಕೆಲಸಗಳಿಲ್ಲದೆ ಸಂಕಷ್ಟದಲ್ಲಿರುವ ಸ್ಥಳೀಯ ಗುತ್ತಿಗೆದಾರರ ನೆರವಿಗೆ ಸರ್ಕಾರ ಬರಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕರಿಂದ ಒಗ್ಗಟ್ಟಿನ ಜಪ!...

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ಬೆಸ್ಕಾಂ ಸೇವೆ ಸಲ್ಲಿಸುತ್ತಿದೆ. ಈ ಭಾಗದಲ್ಲಿ ಅಗತ್ಯವಿರುವ ವಿದ್ಯುತ್‌ ಪೂರೈಕೆ ಸುಧಾರಣೆ, ನಿರ್ವಹಣೆ ಕಾಮಗಾರಿಗಳಿಗೆ ಈವರೆಗೆ ತುಂಡು ಗುತ್ತಿಗೆ ಕರೆದು ಎಸ್‌.ಆರ್‌. ದರ ಅಥವಾ ಗುತ್ತಿಗೆ ಮೂಲಕ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡಲಾಗುತ್ತಿತ್ತು.

ಗುತ್ತಿಗೆದಾರರ ಸಂಕಷ್ಟುಮತ್ತಷ್ಟು ಹೆಚ್ಚಳ:

ಇದೀಗ ಬೆಸ್ಕಾಂ ಕಂಪೆನಿಯು ಬೆಂಗಳೂರು ಮಹಾನಗರ, ಗ್ರಾಮೀಣ ಹಾಗೂ ಚಿತ್ರದುರ್ಗ ಗ್ರಾಮೀಣ ವಲಯಗಳಲ್ಲಿ ಕಾಮಗಾರಿಗಳಿಗೆ 450 ಕೋಟಿ ರು. ಮೊತ್ತದ ಪ್ಯಾಕೇಜ್‌ ಟೆಂಡರ್‌ ಕರೆದಿದೆ. ರಾಜ್ಯದಲ್ಲಿ 6,000 ಮಂದಿ ಎಚ್‌ಟಿ, ಎಲ್‌ಟಿ ವಿದ್ಯುತ್‌ ಕಾಮಗಾರಿಗಳ ನಿರ್ವಹಿಸುವ ಅನುಮತಿ ಪಡೆದ ಗುತ್ತಿಗೆದಾರರು ಇದ್ದೇವೆ. ಗುತ್ತಿಗೆದಾರರು ಈಗಾಗಲೇ ವಿದ್ಯುತ್‌ ಕಾಮಗಾರಿಗಳು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರು ಹಾಗೂ ಅವರನ್ನು ನೆಚ್ಚಿಕೊಂಡಿರುವ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದೀಗ ಬೆಸ್ಕಾಂ ಕ್ರಮದಿಂದಾಗಿ ಇನ್ನೂ ಸಮಸ್ಯೆ ಎದುರಿಸುವಂತಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ಯಾಕೇಜ್‌ ಗುತ್ತಿಗೆದಾರರಿಂದ ದೌರ್ಜನ್ಯ:

ಪ್ಯಾಕೇಜ್‌ ಗುತ್ತಿಗೆ ವಿರೋಧಿಸಿ ಮುಖ್ಯಮಂತ್ರಿ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ವಿದ್ಯುತ್‌ ಸರಬರಾಜು ಕಂಪೆನಿಗಳಿಗೂ ಮನವಿ ಪತ್ರ ನೀಡಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಡಿಲ್ಲ. ಪ್ಯಾಕೇಜ್‌ ಗುತ್ತಿಗೆ ಕರೆದು ಕೇವಲ ತುರ್ತು ಸಂಧರ್ಭಗಳಲ್ಲಿ ಮಾತ್ರ ಸ್ಥಳೀಯ ವಿದ್ಯುತ್‌ ಗುತ್ತಿಗೆದಾರರನ್ನು ಬಳಸಿಕೊಳ್ಳುತ್ತಿದ್ದಾರೆ ದೊಡ್ಡ ಮೊತ್ತದ ಗುತ್ತಿಗೆಗಳನ್ನು ತಮಗೆ ಅನುಕೂಲವಾಗುವ ವ್ಯಕ್ತಿಗಳಿಗೆ ನೀಡುತ್ತಿದೆ.

ಪ್ಯಾಕೇಜ್‌ ಟೆಂಡರ್‌ ಪಡೆದ ಗುತ್ತಿಗೆದಾರರು ಸ್ಥಳೀಯ ಗುತ್ತಿಗೆದಾರರಿಗೆ ಎಸ್‌.ಆರ್‌. ದರಕ್ಕಿಂತ ಕಡಿಮೆ ಹಣ ನೀಡಿ ಕಾರ್ಮಿಕರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ರು. ಟೆಂಡರ್‌ ಪಡೆದರೂ ಅವರೂ ಸಹ ಸ್ಥಳೀಯ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಿ ಕೆಲಸ ಮಾಡುತ್ತಾರೆ. ಇದರಿಂದ ಬೆಸ್ಕಾಂ ಹಾಗೂ ಸ್ಥಳೀಯ ಗುತ್ತಿಗೆದಾರರು ಇಬ್ಬರಿಗೂ ಲಾಭವಾಗದೆ ಉಳ್ಳವರಿಗೆ ಲಾಭವಾಗಲಿದೆ ಎಂದು ಎಸ್‌.ಎಂ. ಕೃಷ್ಣ ಆರೋಪಿಸಿದರು.

ಬೆಸ್ಕಾಂ ವ್ಯಾಪ್ತಿಯಲ್ಲಿ 6 ಸಾವಿರ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರು ಇದ್ದು, ಈಗಾಗಲೇ ಕೆಲಸಗಳಿಲ್ಲದೆ ಸಂಕಷ್ಟದಲ್ಲಿದ್ದೇವೆ. ಹೀಗಿರುವಾಗ ಬೆಸ್ಕಾಂ ಸಂಸ್ಥೆಯು 450 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್‌ ಟೆಂಡರ್‌ ಅಡಿ ಬೇಕಾದವರಿಗೆ ಗುತ್ತಿಗೆ ನೀಡಲು ಹೊರಟಿದೆ. ಇದರಿಂದ 6 ಸಾವಿರ ಗುತ್ತಿಗೆದಾರರು ಸೇರಿದಂತೆ ಸಾವಿರಾರು ಜನರನ್ನು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ಪ್ಯಾಕೇಜ್‌ ರದ್ದುಪಡಿಸಿ ತುಂಡು ಗುತ್ತಿಗೆ ನೀಡಬೇಕು.

- ಡಾ.ಎಸ್‌.ಎಂ. ಕೃಷ್ಣ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘ

ಕಾಮಗಾರಿಗಳು ತ್ವರಿತವಾಗಿ ನಡೆಯಲಿ ಹಾಗೂ ಪದೇ ಪದೆ ಗುತ್ತಿಗೆ ಕರೆಯುವ ಗೊಂದಲ ಉಂಟಾಗದಿರಲಿ ಎಂಬ ಉದ್ದೇಶದಿಂದ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದೆ. ಪ್ಯಾಕೇಜ್‌ ಟೆಂಡರ್‌ ಕಳೆದ 8-10 ವರ್ಷಗಳಿಂದಲೂ ಕರೆಯುತ್ತಿದ್ದೇವೆ. ಇದರಿಂದ ಯಾವ ಗುತ್ತಿಗೆದಾರರಿಗೂ ಕೆಲಸ ಕಳೆದಂತೆ ಆಗುವುದಿಲ್ಲ. 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿ ಎಸ್‌.ಆರ್‌. ದರದಂತೆ ನೀಡುತ್ತೇವೆ. ಉಳಿದ ಕಾಮಗಾರಿಗಳ ಟೆಂಡರ್‌ಲ್ಲೂ ಅವರು ಭಾಗವಹಿಸಬಹುದು.

- ಅಶೋಕ್‌ಕುಮಾರ್‌, ತಾಂತ್ರಿಕ ನಿರ್ದೇಶಕರು, ಬೆಸ್ಕಾಂ

click me!