ಆದಾಯ ತೆರಿಗೆ(ಐಟಿ) ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕುಟುಂಬಗಳ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕಾರ್ಡ್‌ಗಳು ರದ್ದಾಗಿವೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ನ.07): ಆದಾಯ ತೆರಿಗೆ(ಐಟಿ) ಹಾಗೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕುಟುಂಬಗಳ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕಾರ್ಡ್‌ಗಳು ರದ್ದಾಗಿವೆ. ಈ ಕುಟುಂಬಗಳು ಈಗಾಗಲೇ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳೂ ₹2000 ನೀಡುವ ‘ಭಾಗ್ಯಲಕ್ಷ್ಮೀ’ ಯೋಜನೆಯಿಂದಲೂ ವಂಚಿತವಾಗಿದ್ದವು. ಅದರ ಬೆನ್ನಲ್ಲೇ ಇದೀಗ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಬಿಪಿಎಲ್ ಕಾರ್ಡ್ ಸಹ ರದ್ದಾದ ಕಾರಣ 10 ಸಾವಿರಕ್ಕೂ ಅಧಿಕ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ.
undefined
‘ತಾವು ಐಟಿ/ಜಿಎಸ್‌ಟಿ ಪಾವತಿದಾರರಲ್ಲ. ಆದರೂ ನಾವು ಐಟಿ/ಜಿಎಸ್‌ಟಿ ಪಾವತಿದಾರರು ಎಂದು ಭಾಗ್ಯಲಕ್ಷ್ಮೀ ಹಣ ಪಾವತಿಯಾಗುತ್ತಿಲ್ಲ’ ಎಂದು ಅರ್ಹ ಸಾವಿರಾರು ಮಹಿಳೆಯರು ಆಯಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗೆ ಮನವಿ ಸಲ್ಲಿಸಿ ಏಳೆಂಟು ತಿಂಗಳಾಗಿದೆ. ಇಷ್ಟಕ್ಕೂ ಸುಮ್ಮನಾಗದೆ ಕೆಲವರು, ಆಯಾ ಜಿಲ್ಲೆಗಳ ಆದಾಯ ತೆರಿಗೆ ಇಲಾಖೆ ಕಚೇರಿಗಳಿಂದ ತಾವು ‘ಐಟಿ/ಜಿಎಸ್‌ಟಿ ಪಾವತಿದಾರರಲ್ಲ’ ಎಂದು ಪ್ರಮಾಣ ಪತ್ರ ಪಡೆದು ಸಲ್ಲಿಸಿದ್ದರೂ ಭಾಗ್ಯಲಕ್ಷ್ಮೀ ಹಣ ಪಾವತಿಯಾಗಿಲ್ಲ.
ಮನೆಯಲ್ಲಿ ಅಲಂಕಾರಕ್ಕೆ ಗಾಂಜಾ ಬೆಳೆದ ದಂಪತಿ ಬಂಧನ, ಬಿಡುಗಡೆ
1.78 ಲಕ್ಷ ಅನರ್ಹರ ಪತ್ತೆ: ರಾಜ್ಯದಲ್ಲಿ ಒಟ್ಟಾರೆ 1.78 ಲಕ್ಷ ಕುಟುಂಬದವರು ಐಟಿ/ಜಿಎಸ್‌ಟಿ ಪಾವತಿದಾರರು ಎಂಬ ಕಾರಣ ನೀಡಿ ಅವರಿಗೆ ಭಾಗ್ಯಲಕ್ಷ್ಮೀ ಯೋಜನೆಯಡಿ ಹಣ ಪಾವತಿಗೆ ತಡೆ ಹಾಕಲಾಗಿದೆ. ಆದರೆ ಸಾವಿರಾರು ಮಹಿಳೆಯರು ತಾವು ಅರ್ಹರಾಗಿದ್ದು ಪರಿಗಣಿಸುವಂತೆ ಸಿಡಿಪಿಒ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಕಚೇರಿಗೆ ರವಾನೆಯಾಗಿವೆ. ಇದನ್ನು ಪರಿಹರಿಸಲು ಆದಾಯ ತೆರಿಗೆ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದರೂ ಇಲ್ಲಿಯವರೆಗೂ ಸಮಸ್ಯೆ ಪರಿಹಾರವಾಗಿಲ್ಲ.
ಸೌಲಭ್ಯಗಳಿಗೆ ಕತ್ತರಿ: ಅದರ ಬೆನ್ನಲ್ಲೇ ಇದೀಗ ಅಂಥ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿವೆ. ಬಿಪಿಎಲ್ ಕಾರ್ಡ್ ರದ್ದಾದರೆ, ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆಯ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ, ಮಕ್ಕಳಿಗೆ ಕೆಲವೊಂದು ವಿದ್ಯಾರ್ಥಿ ವೇತನ ಬರುವುದಿಲ್ಲ, ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಗಂಭೀರ ಚಿಕಿತ್ಸೆಗಳಿಗೆ ಸಹಾಯ ಸಿಗುವುದಿಲ್ಲ, ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲೂ ಬರುವುದಿಲ್ಲ ಎಂಬುದು ಸೇರಿದಂತೆ ಸರಣಿ ಸಮಸ್ಯೆಗಳನ್ನೇ ಎದುರಿಸಬೇಕಾಗುತ್ತದೆ.
ಹಾಸನ ಜಿಲ್ಲೆಯಲ್ಲಿ ಐಟಿ/ಜಿಎಸ್‌ಟಿ ಪಾವತಿದಾರರು ಎಂಬ ಕಾರಣಕ್ಕಾಗಿ 5265 ಮಹಿಳೆಯರನ್ನು ಭಾಗ್ಯಲಕ್ಷ್ಮೀ ಯೋಜನೆಯಡಿ ತಡೆ ಹಿಡಿಯಲಾಗಿತ್ತು. ಇದರಲ್ಲಿ 705 ಮಹಿಳೆಯರು ಆದಾಯ ತೆರಿಗೆ ಇಲಾಖೆ ಕಚೇರಿಯಿಂದ ತಾವು ‘ತೆರಿಗೆ ಪಾವತಿದಾರರಲ್ಲ’ ಎಂದು ಪ್ರಮಾಣ ಪತ್ರ ಪಡೆದು ನಮಗೆ ಸಲ್ಲಿಸಿದ್ದಾರೆ. ಇದನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ .
- ಕುಮಾರ್ ಎನ್, ಜಿಲ್ಲಾ ನಿರೂಪಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ.
ರಾಮನಗರಕ್ಕೆ ಏರ್‌ಪೋರ್ಟ್, ಕನಕಪುರ ರಸ್ತೆಗೆ ಸ್ಕೈಡೆಕ್?
ನಮ್ಮ ಯಜಮಾನರು ಮೃತಪಟ್ಟಿದ್ದು ಅವರ ಹೆಸರಿನಲ್ಲಿ ಯಾವುದೇ ಜಮೀನಿಲ್ಲ. ನಾನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಐಟಿ/ಜಿಎಸ್‌ಟಿ ಪಾವತಿ ಮಾಡುತ್ತೇವೆ ಎಂದು ನನಗೆ ಭಾಗ್ಯಲಕ್ಷ್ಮೀ ಯೋಜನೆಯ ಹಣ ಬಂದಿರಲಿಲ್ಲ. ಇದೀಗ ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ಸಹ ರದ್ದಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪನ್ನು ಸರಿಪಡಿಸಬೇಕು.
- ಎಂ.ಬಿ.ರೂಪಾ, ಬೆಂಗಳೂರು.