
ಬೆಂಗಳೂರು: ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನಪಾಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ವರ್ಷದ ಮುಭಾರಕ್ ದುರ್ಮರಣ ಹೊಂದಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ಮುಭಾರಕ್ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಘೋಷಿಸಿದರು. ಸರ್ಕಾರವು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ, ಸ್ಫೋಟದಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಮರುನಿರ್ಮಿಸಿ ಕೊಡಲಾಗುವುದಾಗಿ ಹಾಗೂ ಅರ್ಧ ಅಥವಾ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಅಗತ್ಯ ರಿಪೇರಿ ಕಾರ್ಯಗಳನ್ನು ಸರ್ಕಾರದಿಂದಲೇ ಮಾಡಿಸಿಕೊಡಲಾಗುವುದಾಗಿ ಸಿಎಂ ತಿಳಿಸಿದರು.
“ಈಗ ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿರಬಹುದು ಎನ್ನುವ ಶಂಕೆ ಇದೆ. ಆದರೆ, ತಜ್ಞರ ಪರಿಶೀಲನೆ ಬಳಿಕ ಘಟನೆಯ ನಿಖರ ಕಾರಣ ಬಹಿರಂಗವಾಗುತ್ತದೆ,” ಎಂದು ಸಿಎಂ ಹೇಳಿದರು.
ಏಷ್ಯಾನೆಟ್ ಸುವರ್ಣನ್ಯೂಸ್ ಗೆ ನೀಡಿದ ಮಾಹಿತಿಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಸಂಜಯ್ ಅವರು ಬೆಳಿಗ್ಗೆ 8.30ರ ಸುಮಾರಿಗೆ ಮಕ್ಕಳನ್ನು ಆಸ್ಪತ್ರೆಗೆ ತರಲಾಯಿತು. ಬರುವಾಗಲೇ ಮುಭಾರಕ್ (10) ಸಂಪೂರ್ಣ ಶಾಕ್‌ನಲ್ಲಿದ್ದ, ಮಾತಾಡುತ್ತಿರಲಿಲ್ಲ. ಗೋಡೆ ಬಿದ್ದು ತೀವ್ರ ಗಾಯಗೊಂಡಿದ್ದ ಅವನಿಗೆ ಭಾರೀ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ತುರ್ತು ಚಿಕಿತ್ಸೆಯನ್ನು ನೀಡಿದರೂ, ಜೀವ ಉಳಿಸಲಾಗಲಿಲ್ಲ.
ಮಗುವಾದ ಖಯಾಲಾ (8)ಗೆ ಮುಖ, ಬಲಗೈ ಹಾಗೂ ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದರಿಂದ ಆರ್ಥೊಪೆಡಿಕ್ ಹಾಗೂ ರೇಡಿಯೋಲಜಿ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವಳನ್ನು ವಿಕ್ಟೋರಿಯಾ ಆಸ್ಪತ್ರೆಯ ‘ಬರ್ನ್ ವಾರ್ಡ್’ ಗೆ ಸ್ಥಳಾಂತರಿಸಲಾಗಿದೆ. ಝೋಹಾ ಫಾತಿಮಾ (8) ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 3-4 ದಿನ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. ಮಗುವಿನ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಬಳಿಕ ಡಿಸ್ಚಾರ್ಜ್ ಮಾಡಲಾಗುತ್ತದೆ.
ಸ್ಫೋಟಕ್ಕೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಮತ್ತು ತಾಂತ್ರಿಕ ತಂಡಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ಇದು ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ