ಬೆಂಗಳೂರು ನಗರಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಾಳೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಾಳೆ(ಅಕ್ಟೋಬರ್ 23) ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಅ.22): ಬೆಂಗಳೂರು ನಗರಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ನಾಳೆ ಬುಧವಾರ(ಅ.23)ರಂದು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಇಂದು (ಅ.22) ಸಹ ಮಧ್ಯಾಹ್ನದಿಂದ ದಟ್ಟ ಮೋಡ ಆವರಿಸಿ ಗುಡುಗು ಸಿಡಿಲು ಸಮೇತ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದಾಗಿ ಇಂದು ಶಾಲೆಗೆ ಹೋಗಿದ್ದ ಮಕ್ಕಳು ಮನೆ ವಾಪಸ್ ತೆರಳಲು ಪರದಾಡುವಂತಾಯಿತು. ಶಾಲಾ ಮಕ್ಕಳ ಹೊತ್ತ ಆಟೋಗಳು ರಸ್ತೆಯಲ್ಲಿನ ಮಳೆನೀರಲ್ಲಿ ಮುಂದೆ ಚಲಿಸಲಾದ ಪರದಾಡಿದರು. ನಾಳೆಯೂ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆ ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ. ಧಾರಾಕಾರ ಮಳೆಯಿಂದ ಕೆಲವಡೆ ಮರ ಧರೆಗುರುಳಿ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ಸಹ ಮೆಜೆಸ್ಟಿಕ್, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಕೆ.ಆರ್. ಮಾರ್ಕೆಟ್, ಹೆಬ್ಬಗೋಡಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಸಂಪಂಗಿರಾಮನಗರ, ಚಾಲುಕ್ಯ ಸರ್ಕಲ್, ವಿಧಾನಸೌಧ, ಹೆಬ್ಬಾಳ, ಜಕ್ಕೂರು, ಬಾಣಸವಾಡಿ, ವಿದ್ಯಾರಣ್ಯಪುರ, ಮಾರತ್ ಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಜಯನಗರ, ಮಲ್ಲೇಶ್ವರ, ಬಸವೇಶ್ವರನಗರ, ರಾಜಾಜಿನಗರ, ಚಾಮರಾಜಪೇಟೆ, ಸದಾಶಿವನಗರ, ರಾಮಮೂರ್ತಿನಗರ, ಕೆ.ಆರ್. ಪುರ, ರಾಜರಾಜೇಶ್ವರಿನಗರ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಎಡಬಿಡದೇ ಧಾರಾಕಾರವಾಗಿ ಸುರಿದ ಭಾರೀ ಮಳೆ ಪರಿಣಾಮ ನಗರದ ರಸ್ತೆಗಳಿಗೆ ನೀರು ನುಗ್ಗಿ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು.