ಸರ್ಕಾರ ನೇಮಿಸಿದ್ದ ಅಧಿಕಾರಿಯನ್ನೇ ವರ್ಗಾಯಿಸಿದ ಕುಲಪತಿ!

By Kannadaprabha News  |  First Published Dec 31, 2020, 6:59 AM IST

ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪಾರ್ವತಿ ವರ್ಗ | ಸರ್ಕಾರ ಮಧ್ಯಪ್ರವೇಶ ವರ್ಗಾವಣೆಗೆ ತಡೆ


ಬೆಂಗಳೂರು(ಡಿ.31): ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ನಡುವಿನ ತಿಕ್ಕಾಟ ಸರಿಪಡಿಸಲು ಮಧ್ಯ ಪ್ರವೇಶಿಸಿರುವ ಸರ್ಕಾರ, ಅನುಮತಿ ಇಲ್ಲದೆ ಕುಲಪತಿಗಳು ಹಣಕಾಸು ಅಧಿಕಾರಿಯ ಬಿಡುಗಡೆ ಮಾಡಿದ ಕ್ರಮಕ್ಕೆ ತಡೆ ನೀಡಿದೆ.

ಈ ಮೂವರು ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ, ತಿಕ್ಕಾಟದಿಂದ ಒಂದೆಡೆ ಕುಲಸಚಿವರೇ ಕುಲಪತಿ ವಿರುದ್ಧ ರಾಜ್ಯಪಾಲರು, ಸರ್ಕಾರ ಮತ್ತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಾಣ ಬೆದರಿಕೆ, ಕರ್ತವ್ಯ ಅಡ್ಡಿಯ ದೂರು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ತಮ್ಮ ವಿರುದ್ಧ ದೂರು ನೀಡಿರುವ ಕುಲಸಚಿವರ ಜೊತೆ ಕುಳಿತು ಸಿಂಡಿಕೇಟ್‌ ಸಭೆ ನಡೆಸಲು ನಿರಾಕರಿಸಿದ್ದರು. ಈ ನಡುವೆ ಕುಲಸಚಿವರು, ಹಣಕಾಸು ಅಧಿಕಾರಿಗಳ ವಿರುದ್ಧ ವಿವಿಯಲ್ಲಿ ಬೋಧಕೇತರ ನೌಕರರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿರುವಾಗಲೇ ಸರ್ಕಾರ ನೇಮಿಸಿರುವ ಹಣಕಾಸು ಅಧಿಕಾರಿ ಎಚ್‌.ಬಿ.ಪಾರ್ವತಿ ಅವರನ್ನು ಕುಲಪತಿಗಳು ಏಕಾಏಕಿ ಆ ಸ್ಥಾನದಿಂದ ಬಿಡುಗಡೆ ಮಾಡಿದ್ದರು.

Tap to resize

Latest Videos

ಕತ್ತಲಾಗುವ ಮುನ್ನ ಮನೆ ಸೇರ್ಕೊಳ್ಳಿ... ಇಲ್ಲಾ!

ಹಣಕಾಸು ಅಧಿಕಾರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣಕಾಸು ದುರುಪಯೋಗದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದೇ ಅವರ ಬಿಡುಗಡೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಮಧ್ಯ ಪ್ರವೇಶಿಸಿರುವ ಸರ್ಕಾರ ವಿತ್ತಾಧಿಕಾರಿ ಬಿಡುಗಡೆಗೆ ತಡೆ ನೀಡಿ ಅದೇ ಸ್ಥಾನದಲ್ಲಿ ಮುಂದುವರೆಸಿದೆ.

ಸರ್ಕಾರ ಅಸಮಾಧಾನ:

ಸರ್ಕಾರ ನೇಮಕ ಮಾಡಿದ ಅಧಿಕಾರಿಯನ್ನು ಬಿಡುಗಡೆ ಮಾಡಿದ ಕುಲಪತಿಯ ಕ್ರಮಕ್ಕೆ ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದಿಂದ ನೇಮಕಗೊಂಡ ಅಧಿಕಾರಿಯನ್ನು ಅನುಮತಿ ಪಡೆಯದೆ ನೀವು ಬಿಡುಗಡೆ ಮಾಡಿರುವುದು ಸ್ವೀಕಾರಾರ್ಹವಲ್ಲ ಮತ್ತು ದುರಾದೃಷ್ಟಕರವಾಗಿದೆ. ಇದು ಸರ್ಕಾರದ ಆದೇಶಗಳ ಸ್ಪಷ್ಟಉಲ್ಲಂಘನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕುಲಪತಿ ಅವರು ಹಣಕಾಸು ಅಧಿಕಾರಿಯನ್ನು ಬಿಡುಗಡೆ ಮಾಡಿರುವ ಆದೇಶವನ್ನು ತಕ್ಷಣ ಹಿಂಪಡೆದು ಮುಂದಿನ ಆದೇಶದವರೆಗೆ ಪಾರ್ವತಿ ಅವರನ್ನು ಹಣಕಾಸು ಅಧಿಕಾರಿಯ ಸೇವೆಗಳನ್ನು ಮುಂದುವರೆಸಿ ಆದೇಶ ಮಾಡಿದ್ದಾರೆ.

ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಘಟನೆಗೆ ಸಂಬಂಧಿಸಿದಂತೆ ಕುಲಪತಿಯಿಂದ ವಿವರಣೆ ಪಡೆಯಲು ನಿರ್ಧರಿಸಿದೆ. ಸರ್ಕಾರ ನೇಮಕ ಮಾಡಿದ ಅಧಿಕಾರಿಯನ್ನು ಬಿಡುಗಡೆ ಮಾಡಲು ಕುಲಪತಿಗೆ ಅಧಿಕಾರವಿಲ್ಲ. ಈ ಸಂಬಂಧ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ರೈತರ ನಾಲ್ಕರಲ್ಲಿ 2 ಬೇಡಿಕೆಗೆ ಕೇಂದ್ರ ಸಮ್ಮತಿ; 7ನೇ ಸುತ್ತಿನ ಸಭೆಗೆ ದಿನಾಂಕ ಫಿಕ್ಸ್!

ಕುಲಪತಿ ಅವರು ಯಾವ ಕಾರಣಕ್ಕೆ ನನ್ನನ್ನು ಹಣಕಾಸು ಅಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಿದರೋ ಗೊತ್ತಿಲ್ಲ. ಆದರೆ, ಸರ್ಕಾರದಿಂದ ನೇಮಕಗೊಂಡ ಅಧಿಕಾರಿಯಾದ ನನ್ನ ಬಿಡುಗಡೆ ವೇಳೆ ಆಗಿರುವ ತಾಂತ್ರಿಕ ಲೋಪವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ನಾನು ಬೇರೆ ಯಾವುದೇ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದಿದ್ದಾರೆ ಬೆಂ.ವಿವಿ ಹಣಕಾಸು ಅಧಿಕಾರಿ ಎಚ್‌.ಪಿ.ಪಾರ್ವತಿ.

click me!