
ಬೆಂಗಳೂರು (ಅ.10): 'ಬೆಂಗಳೂರು ಟ್ರಾಫಿಕ್ ನಮ್ಮ ಯಶಸ್ಸು ಮತ್ತು ಸವಾಲುಗಳನ್ನೆರಡನ್ನೂ ಪ್ರತಿಬಿಂಬಿಸುತ್ತದೆ' ಎಂದು ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಅಭಿವೃದ್ಧಿ, ಉದ್ಯೋಗಾವಕಾಶ ಮತ್ತು ಆರ್ಥಿಕ ಚಟುವಟಿಕೆಗಳು ಗಗನಕ್ಕೇರಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಇದು ನಗರ ಮೂಲಸೌಕರ್ಯಕ್ಕೆ ಭಾರವಾದ ಒತ್ತಡ ತಂದಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ (ಹಿಂದಿನ ಟ್ವಿಟ್ಟರ್) ಪೋಸ್ಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನ ಬೆಳವಣಿಗೆಯ ಬಗ್ಗೆ ವಿಶ್ಲೇಷಣಾತ್ಮಕವಾಗಿ ಹೇಳಿದ್ದಾರೆ. 'ಬೆಂಗಳೂರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಮುಂದಿನ ದಶಕದಲ್ಲಿ ನಗರದ GDP ವಾರ್ಷಿಕವಾಗಿ 8.5 ಶೇಕಡಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಿದೆ' ಎಂದು ಬರೆದಿದ್ದಾರೆ.
ಇಂದಿನ ಸ್ಥಿತಿಗೆ ಬೆಂಗಳೂರಿನಲ್ಲಿ 1.2 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳಿವೆ. ಅದರಲ್ಲಿ ಸುಮಾರು 82 ಲಕ್ಷ ದ್ವಿಚಕ್ರ ವಾಹನಗಳು ಮತ್ತು 25 ಲಕ್ಷಕ್ಕೂ ಹೆಚ್ಚು ಕಾರುಗಳು ಸೇರಿವೆ. ಕೇವಲ ಕಳೆದ ವರ್ಷವಷ್ಟೇ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿದಿವೆ ಎಂಬ ಅಂಕಿಅಂಶವನ್ನು ಸಚಿವರು ಹಂಚಿಕೊಂಡಿದ್ದಾರೆ. 2025ರ ಆಗಸ್ಟ್ ತಿಂಗಳಲ್ಲೇ 58,913 ಹೊಸ ವಾಹನಗಳು ನೋಂದಾಯಿತವಾಗಿವೆ, ಇದು ನಗರದಲ್ಲಿ ವಾಹನ ಸಂಚಾರದ ವೇಗ ಮತ್ತು ಜನಸಂಖ್ಯೆಯ ವೃದ್ಧಿಯ ನೇರ ಸೂಚಕ ಎಂದು ಖರ್ಗೆ ಹೇಳಿದರು.
ಈ ಸಂಖ್ಯೆಗಳು ಬೆಳೆಯುತ್ತಿರುವ ನಗರದ ಪ್ರತಿಬಿಂಬವಾಗಿದ್ದರೂ, ಇದೇ ಸಮಯದಲ್ಲಿ ನಮ್ಮ ರಸ್ತೆಗಳು ಏಕೆ ಬಿರುಕು (ರಸ್ತೆಗಳು ಗುಂಡಿ ಬೀಳುವುದು) ಬಿಡುತ್ತಿವೆ ಎಂಬುದಕ್ಕೂ ಕಾರಣವಾಗಿವೆ' ಎಂದು ಗಮನಾರ್ಹವಾಗಿ ಸೂಚಿಸಿದ್ದಾರೆ. ಈ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹಲವು ಹೊಸ ತಂತ್ರಜ್ಞಾನಾಧಾರಿತ ಸಂಚಾರ ನಿಯಂತ್ರಣ ಯೋಜನೆಗಳು, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ವಿಸ್ತರಣೆ, ಮತ್ತು ಮೂಲಸೌಕರ್ಯ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. 'ಚಿಂತಕರ ಚಾವಡಿ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ತಜ್ಞರ ಸಹಯೋಗದೊಂದಿಗೆ ಈ ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ' ಎಂದು ಖರ್ಗೆ ಹೇಳಿದರು.
ನಗರದ ವೇಗವಾದ ಬೆಳವಣಿಗೆ, ನೂತನ ಉದ್ಯೋಗಾವಕಾಶಗಳು ಮತ್ತು ಐಟಿ ಕ್ಷೇತ್ರದ ವಿಸ್ತಾರಗಳು ಬೆಂಗಳೂರಿಗೆ ಹೆಮ್ಮೆ ತರುತ್ತಿದ್ದರೂ, ಟ್ರಾಫಿಕ್ ಸಮಸ್ಯೆ ನಗರ ಜೀವನದ ಗಂಭೀರ ಪ್ರಶ್ನೆಯಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಸಂಯುಕ್ತ ಪ್ರಯತ್ನಗಳು ಯಶಸ್ವಿಯಾದರೆ, 'ಸ್ಮಾರ್ಟ್ ಸಿಟಿ' ಕನಸು ನಿಜವಾದ ಅರ್ಥದಲ್ಲಿ ಮೂಡಿ ಬರಬಹುದು ಎಂಬ ನಂಬಿಕೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ