ಅತ್ಯಂತ ಡೈನಾಮಿಕ್‌ ಸಿಟಿ: ವಿಶ್ವದಲ್ಲೇ ಬೆಂಗಳೂರು ನಂ.1 !

By Web DeskFirst Published Jan 16, 2019, 7:56 AM IST
Highlights

ಹೈದ್ರಾಬಾದನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಐಟಿ ಸಿಟಿ| ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜಧಾನಿ| ತಂತ್ರಜ್ಞಾನ, ಪರಿಸರ, ಮೂಲಸೌಕರ್ಯಗಳಲ್ಲಿ ಬೆಂಗಳೂರು ಉಳಿದೆಲ್ಲಕ್ಕಿಂತ ಮುಂದೆ| ಹೈದರಾಬಾದ್‌, ಹನೋಯಿ, ದೆಹಲಿ ಹಾಗೂ ಪುಣೆ ನಗರಗಳಿಗೆ ಅಗ್ರ-5ರಲ್ಲಿ ಸ್ಥಾನ| ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಜೆ.ಎಲ್‌.ಎಲ್‌. ಇಂಡಿಯಾದಿಂದ ಸಮೀಕ್ಷೆ ಪ್ರಕಟ

ಮುಂಬೈ[ಜ.16]: ಸದೃಢ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ನಾವೀನ್ಯ ಪರಿಸರ ವ್ಯವಸ್ಥೆಯನ್ನು ಹೊಂದಿದ್ದಕ್ಕಾಗಿ ಉದ್ಯಾನ ನಗರಿ ಬೆಂಗಳೂರು, ‘ವಿಶ್ವದ ಅತ್ಯಂತ ಚಲನಶೀಲ ನಗರ’ (ಡೈನಾಮಿಕ್‌ ಸಿಟಿ) ಎಂಬ ಖ್ಯಾತಿಗೆ ಪಾತ್ರವಾಗಿದೆ.

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಜೆಎಲ್‌ಎಲ್‌ ಈ ಸಮೀಕ್ಷೆ ನಡೆಸಿದ್ದು, ವಿಶ್ವದ ಅಗ್ರ 10 ಡೈನಾಮಿಕ್‌ ಸಿಟಿಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಹೈದರಾಬಾದ್‌ ಎರಡನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಪುಣೆ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿದ್ದರೆ ಚೆನ್ನೈ 7ನೇ ಹಾಗೂ ಕೋಲ್ಕತಾ 15ನೇ ಸ್ಥಾನ ಪಡೆದಿವೆ.

ಇನ್ನು ಪಟ್ಟಿಯಲ್ಲಿರುವ ವಿದೇಶದ ನಗರಗಳೆಂದರೆ ಹನೋಯಿ (ನಂ.3), ನೈರೋಬಿ (ನಂ.6), ಹೊ ಚಿ ಮಿನ್‌ (ನಂ.8) ಹಾಗೂ ಗುವಾಂಗ್‌ಝೌ (ನಂ.10).

ಅಗ್ರ 20 ಡೈನಾಮಿಕ್‌ ಸಿಟಿಗಳ ಪೈಕಿ 19 ನಗರಗಳು ಏಷ್ಯಾ ಪೆಸಿಫಿಕ್‌ಗೆ ಸೇರಿದ್ದಾಗಿವೆ. 2018ರಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೈದರಾಬಾದ್‌ ಮೊದಲ ಸ್ಥಾನ ಹಾಗೂ ಬೆಂಗಳೂರು 2ನೇ ಸ್ಥಾನದಲ್ಲಿದ್ದವು.

ವಿಶ್ವದ 52 ಪ್ರವಾಸಿ ತಾಣ: ಹಂಪಿ ನಂ.2

ಸಮೀಕ್ಷಾ ಮಾನದಂಡ:

ನಗರಗಳ ಸದೃಢ ತಾಂತ್ರಿಕತೆ ಮತ್ತು ನಾವೀನ್ಯ ಪರಿಸರ ವ್ಯವಸ್ಥೆಯನ್ನು ಆಧರಿಸಿ ಈ ಬಾರಿಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಸ್ಟಾರ್ಟ್‌ಅಪ್‌ ಕಂಪನಿಗಳ ಕೊಡುಗೆಯಿಂದ ಇಲ್ಲಿನ ರಿಯಲ್‌ ಎಸ್ಟೇಟ್‌ ಹಾಗೂ ಅರ್ಥ ವ್ಯವಸ್ಥೆಗಳು ಅಗ್ರ ಶ್ರೇಯಾಂಕ ಪಡೆದಿವೆ ಎಂದು ಜೆ.ಎಲ್‌.ಎಲ್‌ ಇಂಡಿಯಾ ಸಿಇಒ ರಮೇಶ್‌ ನಾಯರ್‌ ಹೇಳಿದ್ದಾರೆ.

ಭಾರತದ ಸಿಲಿಕಾನ್‌ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು ರಿಯಲ್‌ ಎಸ್ಟೇಟ್‌ ವಲಯದಲ್ಲಿ ಮುಂಚೂಣಿಯಲ್ಲಿದೆ. ನಗರದ ಪ್ರಬಲ ವ್ಯಾಪಾರಿ ಉದ್ಯಮ, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ವಸತಿ ವ್ಯವಸ್ಥೆ ಬೆಂಗಳೂರಿಗೆ ಚಲನಶೀಲ ನಗರದ ಪಟ್ಟವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ರಿಯಲ್‌ ಎಸ್ಟೇಟ್‌ (ನಿಯಂತ್ರಣ ಅಭಿವೃದ್ಧಿ- ರೇರಾ) ಕಾಯ್ದೆ, ಜಿಎಸ್‌ಟಿಯಂತಹ ಸುಧಾರಣೆಗಳು, ಮೂಲ ಸೌಕರ್ಯ ಸುಧಾರಣೆ ಹಾಗೂ ಉದ್ಯಮ ಸ್ನೇಹಿ ವಾತಾವರಣಕ್ಕೆ ಹೆಚ್ಚಿನ ಗಮನ ನೀಡಿದ್ದರಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ ಮತ್ತು ರಿಯಲ್‌ ಎಸ್ಟೇಟ್‌ಗೆ ಇನ್ನಷ್ಟುಉತ್ತೇಜನ ದೊರೆಯುತ್ತಿದೆ ಎಂದು ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

click me!