
ಬೆಂಗಳೂರು[ಜ.16]: ಆಪರೇಷನ್ ಕಮಲದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೇ ನಿರುಮ್ಮಳವಾಗಿದ್ದ ಕಾಂಗ್ರೆಸ್ ನಾಯಕರು ಇದೀಗ ಕಂಗಾಲಾಗಿದ್ದಾರೆ. ಕಾರಣ- ಅತೃಪ್ತ ಶಾಸಕರ ದಂಡು ಬಿಜೆಪಿಯತ್ತ ವಾಲಿರುವ ಸ್ಪಷ್ಟಸೂಚನೆ ದೊರಕಿದೆ. ಪರಿಣಾಮ- ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಗರಕ್ಕೆ ದೌಡಾಯಿಸಿ ಅತೃಪ್ತರ ಬಂಡಾಯದ ಸರಿಯಾದ ಚಿತ್ರಣ ಪಡೆಯಲು ಪಕ್ಷದ ನಾಯಕರೊಂದಿಗೆ ಇಡೀ ದಿನ ಸರಣಿ ಸಭೆ ನಡೆಸಿದರು.
ಇಡೀ ದಿನದ ಸರಣಿ ಸಭೆಗಳು ಎರಡು ಪ್ರಮುಖ ವಿಷಯಗಳ ಬಗ್ಗೆ ನಡೆದವು.
1- ಅತೃಪ್ತ ಶಾಸಕರನ್ನು ಮತ್ತೆ ಪಕ್ಷದ ತೆಕ್ಕೆಗೆ ತರುವುದು ಹೇಗೆ?
2- ಒಂದು ವೇಳೆ ಅತೃಪ್ತರು ಕೈಕೊಟ್ಟೇ ಬಿಟ್ಟರೆ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಅನುಸರಿಸಬೇಕಾದ ಕಾನೂನಾತ್ಮಕ ಹಾಗೂ ಕಾನೂನೇತರ ಕ್ರಮಗಳು ಏನಿರಬೇಕು?
ರಾಜ್ಯದಲ್ಲಿ ರಾಜಕೀಯ ವಿಪ್ಲವ ನಡೆಯುವ ಸೂಚನೆ ಹಿನ್ನೆಲೆಯಲ್ಲಿ ನಗರಕ್ಕೆ ದೌಡಾಯಿಸಿದ ವೇಣುಗೋಪಾಲ್ ಅವರು ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಸರಣಿ ಸಭೆಗಳನ್ನು ನಡೆಸಿದರು. ಮೊದಲಿಗೆ ಕುಮಾರಕೃಪಾದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಕೆ. ಪಾಟೀಲ್, ಜಮೀರ್ ಅಹ್ಮದ್, ಕೆ.ಜೆ. ಜಾಜ್‌ರ್ ಸೇರಿದಂತೆ ಹಲವು ನಾಯಕರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಪ್ರಿಯಾಂಕ್ ಖರ್ಗೆ ಅವರು ಉಮೇಶ್ ಜಾಧವ್ ಅವರನ್ನು ಬಿಜೆಪಿ ತನ್ನ ಬಲೆಗೆ ಹೇಗೆ ಬೀಳಿಸಿಕೊಂಡಿದೆ ಎಂಬುದನ್ನು ವಿವರಿಸಿದರು. ಜಾಧವ್ ಅವರು ದೂರವಾಣಿಯನ್ನು ತಮ್ಮ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಿದ್ದಲ್ಲದೆ, ಅವರು ಪಕ್ಷ ತೊರೆಯುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಇದೇ ಸಭೆ ವೇಳೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಅವರು ಬಿಜೆಪಿಯ ತೆಕ್ಕೆಯಲ್ಲಿದ್ದಾರೆ ಎನ್ನಲಾದ ಆನಂದಸಿಂಗ್ ಹಾಗೂ ಶ್ರೀಮಂತ ಪಾಟೀಲ್ ಅವರನ್ನು ಕರೆತಂದು ವೇಣುಗೋಪಾಲ್ ಅವರ ಸಮ್ಮುಖ ಹಾಜರುಪಡಿಸಿದರು ಎನ್ನಲಾಗಿದೆ. ಈ ವೇಳೆ ಆನಂದಸಿಂಗ್ ಅವರು ಬಿಜೆಪಿ ತಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ, ತಾವು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಆಪರೇಷನ್ ಕಮಲ ನಡೆದಿದ್ದು ಹೇಗೆ ಹಾಗೂ ಬಿಜೆಪಿ ನಾಯಕರು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಮಾಹಿತಿಯನ್ನು ವೇಣುಗೋಪಾಲ್ ಅವರಿಗೆ ನೀಡಿದರು ಎಂದು ಮೂಲಗಳು ಹೇಳಿವೆ.
ಇದೇ ವೇಳೆ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಧಾವಿಸಿದ್ದಾರೆ ಎನ್ನಲಾದ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಯತ್ನಿಸಿದರು. ಈ ಪೈಕಿ ಸಂಪರ್ಕಕ್ಕೆ ದೊರೆತ ಕೆಲವರು ತಾವು ತಮ್ಮ ಕ್ಷೇತ್ರದಲ್ಲಿದ್ದು, ಬಿಜೆಪಿಗೆ ಹೋಗುವುದಿಲ್ಲ ಎಂದು ಭರವಸೆ ನೀಡಿದರೆ, ಸುಮಾರು ಎಂಟು ಮಂದಿ ಅತೃಪ್ತರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಎಲ್ಲಾ ಶಾಸಕರನ್ನು ಬುಧವಾರ ನಗರಕ್ಕೆ ಆಗಮಿಸುವಂತೆ ಸೂಚಿಸಲು ನಾಯಕರು ತೀರ್ಮಾನಿಸಿದರು.
ಕಾಂಗ್ರೆಸ್ ತಂತ್ರಗಳು
1. ಬಿಜೆಪಿ ನಡೆಸಿರುವ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಜೆಡಿಎಸ್ ಜತೆ ಸೇರಿ ರಿವರ್ಸ್ ಆಪರೇಷನ್ ಮಾಡುವುದು. ತನ್ಮೂಲಕ ಬಿಜೆಪಿಯ ಹಲವು ಶಾಸಕರನ್ನು ರಾಜೀನಾಮೆ ನೀಡುವಂತೆ ಪ್ರೇರೇಪಿಸುವುದು. ಹೀಗೆ ಮಾಡಿ, ಬಿಜೆಪಿ ಸಂಖ್ಯೆಯನ್ನೂ ವಿಧಾನಸಭೆಯಲ್ಲಿ ಕಡಿಮೆ ಮಾಡುವುದು.
2. ಬಿಜೆಪಿಯತ್ತ ವಾಲಿರುವ ಅತೃಪ್ತರನ್ನು ಧೃತಿಗೆಡಿಸಲು ಬಿಜೆಪಿ ಸರ್ಕಾರ ರಚನೆಗೆ ಅವಕಾಶವಿಲ್ಲದಂತೆ ಮಾಡುವುದು. ಒಂದು ವೇಳೆ ಈ ಶಾಸಕರು ಬಿಜೆಪಿಯ ಬಲೆಗೆ ಬಿದ್ದರೂ ಸರ್ಕಾರ ರಚನೆಯಾಗುವುದಿಲ್ಲ. ಬದಲಾಗಿ, ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತದೆಯೇ ಹೊರತು ಬಿಜೆಪಿ ಸರ್ಕಾರ ಬರುವುದಿಲ್ಲ ಎಂದು ಬಿಂಬಿಸುವುದು.
3. ಜತೆಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು, ಎಲ್ಲ ಶಾಸಕರೂ ಹಾಜರಾಗುವಂತೆ ವಿಪ್ ನೀಡುವುದು. ಹಾಜರಾಗದವರ ವಿರುದ್ಧ ವಿಪ್ ಉಲ್ಲಂಘನೆ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಬಿಂಬಿಸುವುದು. ವಾಸ್ತವವಾಗಿ ಇಂತಹ ಕ್ರಮ ಕೈಗೊಂಡರೂ ಅದು ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ. ಇದು ಗೊತ್ತಿದ್ದರೂ ಗೊಂದಲ ಸೃಷ್ಟಿಸಲು ಇಂತಹ ಕ್ರಮಕ್ಕೆ ಮುಂದಾಗುವುದು.
4. ದೇಶಾದ್ಯಂತ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ, ಆಮಿಷವೊಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಿ ಒತ್ತಡ ನಿರ್ಮಿಸುವುದು. ಈ ಬಗ್ಗೆ ರಾಜ್ಯಪಾಲರು ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ