2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!

Published : Dec 18, 2025, 01:30 PM IST
Bengaluru Creartrip Report 2025

ಸಾರಾಂಶ

ಖ್ಯಾತ ಪ್ರವಾಸೋದ್ಯಮ ಸಂಸ್ಥೆ 'ಕ್ಲಿಯರ್‌ಟ್ರಿಪ್' ವರದಿಯ ಪ್ರಕಾರ, ಬೆಂಗಳೂರು ಈಗ ಬಿಸಿನೆಸ್ ಮತ್ತು ವಿರಾಮ ಪ್ರವಾಸೋದ್ಯಮದಲ್ಲಿ ಭಾರತದ ಅಗ್ರಗಣ್ಯ ನಗರವಾಗಿ ಹೊರಹೊಮ್ಮಿದೆ. ಅತಿ ದೀರ್ಘಾವಧಿಯ ಹೋಟೆಲ್ ವಾಸ್ತವ್ಯ, ಏಕಾಂಗಿ ಪ್ರಯಾಣಿಕರ ನೆಚ್ಚಿನ ತಾಣವಾಗಿದೆ.

ಬೆಂಗಳೂರು (ಡಿ.18): ದೇಶದ ಐಟಿ ಹಬ್ ಬೆಂಗಳೂರು ಈಗ ಕೇವಲ ಉದ್ಯೋಗದ ತಾಣವಾಗಿ ಉಳಿದಿಲ್ಲ, ಬದಲಿಗೆ ಬಿಸಿನೆಸ್ ಮತ್ತು ವಿರಾಮ (Leisure) ಪ್ರವಾಸೋದ್ಯಮ ಎರಡರಲ್ಲೂ ಭಾರತದ ಅಗ್ರಗಣ್ಯ ನಗರವಾಗಿ ಹೊರಹೊಮ್ಮಿದೆ. ಖ್ಯಾತ ಪ್ರವಾಸೋದ್ಯಮ ಸಂಸ್ಥೆ 'ಕ್ಲಿಯರ್‌ಟ್ರಿಪ್' (Cleartrip) ಬಿಡುಗಡೆ ಮಾಡಿರುವ 'ಅನ್‌ಪ್ಯಾಕ್ಡ್ 2025' ವರ್ಷಾಂತ್ಯದ ವರದಿಯಲ್ಲಿ ಬೆಂಗಳೂರು ಹಲವು ದಾಖಲೆಗಳನ್ನು ಬರೆದಿದೆ.

ದೀರ್ಘಕಾಲದ ವಾಸ್ತವ್ಯಕ್ಕೆ ಬೆಂಗಳೂರೇ ಫೇವರೇಟ್

2025ರಲ್ಲಿ ಭಾರತದಲ್ಲಿ ಬುಕ್ ಆದ ಹೋಟೆಲ್‌ಗಳಲ್ಲಿ ಅತಿ ದೀರ್ಘಾವಧಿಯ ವಾಸ್ತವ್ಯಕ್ಕೆ (Longest Stay) ಬೆಂಗಳೂರು ಸಾಕ್ಷಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸತತ 30 ದಿನಗಳ ಕಾಲ ಹೋಟೆಲ್ ಬುಕ್ಕಿಂಗ್ ಮಾಡುವ ಮೂಲಕ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಅಷ್ಟೇ ಅಲ್ಲದೆ, 5ನೇ ಅತಿ ದೀರ್ಘ ವಾಸ್ತವ್ಯದ ದಾಖಲೆ ಕೂಡ ಇದೇ ನಗರದ ಪಾಲಾಗಿದೆ. ಸುಮಾರು 2,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಮನೆಯಾಗಿರುವ ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ಹೋಟೆಲ್ ಬುಕ್ಕಿಂಗ್ ಮಾಡುವವರ ಸಂಖ್ಯೆಯಲ್ಲಿ ಶೇ. 54.74 ರಷ್ಟು ಗಣನೀಯ ಏರಿಕೆ ಕಂಡಿದೆ.

ಸೋಲೋ ಟ್ರಾವೆಲರ್ಸ್ ಮತ್ತು ಸರ್ಚ್ ಟ್ರೆಂಡ್

ಬೆಂಗಳೂರು ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಏಕಾಂಗಿಯಾಗಿ ಪ್ರಯಾಣಿಸುವವರನ್ನೂ (Solo Travelers) ಸೆಳೆಯುತ್ತಿದೆ. ಭಾರತದ ಎರಡನೇ ಅತಿ ಜನಪ್ರಿಯ 'ಸೋಲೋ ಟ್ರಾವೆಲ್' ತಾಣವಾಗಿ ಬೆಂಗಳೂರು ಗುರುತಿಸಿಕೊಂಡಿದೆ. ಇಲ್ಲಿನ ಸ್ವಾಗತಾರ್ಹ ವಾತಾವರಣ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಹತ್ತಿರದ ಗಿರಿಧಾಮಗಳಿಗೆ ಇರುವ ಉತ್ತಮ ಸಂಪರ್ಕವೇ ಇದಕ್ಕೆ ಮುಖ್ಯ ಕಾರಣ. ಇನ್ನು ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನವನ್ನು ಅಲಂಕರಿಸಿದೆ. ಬೆಂಗಳೂರಿನಿಂದ ಕೊಡಗು, ಊಟಿ ಮತ್ತು ಕೊಡೈಕೆನಾಲ್‌ಗಳಿಗೆ ಹಾಗೂ ಅಲ್ಲಿಂದ ವಾಪಸ್ ಬೆಂಗಳೂರಿಗೆ ಅತಿ ಹೆಚ್ಚು ಪ್ರಯಾಣಗಳು ದಾಖಲಾಗಿವೆ.

ಅಚ್ಚರಿಯ ಸಂಗತಿಗಳು

ಇನ್ನು ಈ ವರದಿಯಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಬಯಲಾಗಿವೆ. ವಿಶೇಷವೆಂದರೆ ಗಾಜಿಯಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದ ಒಬ್ಬ ಪ್ರಯಾಣಿಕ ಹೆಚ್ಚುವರಿ ಬ್ಯಾಗೇಜ್ ಶುಲ್ಕವಾಗಿ ₹65,000 ಪಾವತಿಸಿದ್ದಾರೆ, ಇದು ಪ್ಲಾಟ್‌ಫಾರ್ಮ್‌ನಲ್ಲಿ ದಾಖಲಾದ ಅತಿ ದುಬಾರಿ ಶುಲ್ಕ ಪಾವತಿಗಳಲ್ಲಿ ಒಂದಾಗಿದೆ. ಇನ್ನು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಹೋಟೆಲ್ ವಾಸ್ತವ್ಯಕ್ಕಾಗಿ ಪ್ರವಾಸಿಗರೊಬ್ಬರು ಬರೋಬ್ಬರಿ 361 ದಿನಗಳ ಮೊದಲೇ (ಅಂದರೆ ಒಂದು ವರ್ಷ ಮುಂಚಿತವಾಗಿ ಜುಲೈ ತಿಂಗಳಲ್ಲಿ) ಬುಕ್ಕಿಂಗ್ ಮಾಡಿ ದಾಖಲೆ ಬರೆದಿದ್ದಾರೆ. ಈ ಮೂಲಕ ಜನಪ್ರಿಯ ಹಿಲ್ ಸ್ಟೇಷನ್ ಗಳ ಮೇಲಿನ ಪ್ರೀಮಿಯಂ ವಾಸ್ತವ್ಯ ಸೌಲಭ್ಯಕ್ಕೆ ಪ್ರಯಾಣಿಕರು ಬಹಳ ಮುಂಚಿತವಾಗಿ ಯೋಜನೆ ಮಾಡುತ್ತಿರುವುದನ್ನು ಇದು ತೋರಿಸುತ್ತದೆ.

ಒಟ್ಟಾರೆಯಾಗಿ, ಕೊಡಗು, ಊಟಿ ಮತ್ತು ಕೊಡೈಕೆನಾಲ್‌ನಂತಹ ಪ್ರವಾಸಿ ತಾಣಗಳಿಗೆ ಬೆಂಗಳೂರು ಪ್ರವೇಶ ದ್ವಾರವಾಗಿರುವುದರಿಂದ, ವೃತ್ತಿಜೀವನ ಮತ್ತು ವಿರಾಮ ಎರಡನ್ನೂ ಬಯಸುವ ಪ್ರವಾಸಿಗರಿಗೆ ಸಿಲಿಕಾನ್ ಸಿಟಿ ಹಾಟ್ ಫೇವರೆಟ್ ಆಗಿ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?