
ಬೆಳಗಾವಿ (ಡಿ.18): 'ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಬೇಡ. ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಕೇವಲ ವದಂತಿ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕುರಿತು ಮಾಹಿತಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, 'ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆತಂಕಕಾರಿ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಪೋಷಕರು ಮತ್ತು ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ನೀಡಬೇಕು' ಎಂದು ಒತ್ತಾಯಿಸಿದರು.
ಸುನಿಲ್ ಕುಮಾರ್ ಅವರ ಕಳವಳಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 'ಒಂದು ನಿರ್ದಿಷ್ಟ ಕಂಪನಿಯ ಮೊಟ್ಟೆಗಳಲ್ಲಿ ಆ್ಯಂಟಿ ಬಯಾಟಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಆತಂಕ ಎದುರಾದ ತಕ್ಷಣ ನಾವು ಮತ್ತು ಕೇಂದ್ರದ ಫುಡ್ ಸೇಫ್ಟಿ ಇಲಾಖೆ (FSSAI) ಜಾಗೃತಗೊಂಡಿದ್ದೇವೆ. ಈಗಾಗಲೇ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದರು.
ಕಳೆದ ವರ್ಷ ರಾಜ್ಯಾದ್ಯಂತ ಸುಮಾರು 147 ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ ಕೇವಲ ಒಂದು ಮಾದರಿ ಮಾತ್ರ ವಿಫಲವಾಗಿದ್ದು, ಉಳಿದ 146 ಮಾದರಿಗಳು ಅತ್ಯುತ್ತಮ ಗುಣಮಟ್ಟದ್ದಾಗಿವೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟೆಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಜನರು ವದಂತಿಗಳಿಗೆ ಕಿವಿಗೊಡಬಾರದು' ಎಂದು ಸಚಿವರು ಸದನಕ್ಕೆ ಭರವಸೆ ನೀಡಿದರು.
ಶಾಲೆಗಳಲ್ಲಿ ಮೊಟ್ಟೆ ವಿತರಣೆ ದರದ ಬಗ್ಗೆ ಶಾಸಕ ಹರೀಶ್ ಪೂಂಜಾ ಪ್ರಸ್ತಾಪ ಮಾಡಿದರು. ಮೊಟ್ಟೆ ದರ ಒಂದೇ ಇರುವಂತೆ ಸ್ಪೀಕರ್ ಸೇರಿ ಶಾಸಕರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೊಟ್ಟೆ ದರದ ಬಗ್ಗೆ ನನಗೆ ಒತ್ತಡ ಬಂದಿದೆ. ಅಜೀಂ ಪ್ರೇಮ್ ಜಿಯವರೇ 1,591 ಕೋಟಿ ರೂ. ಪೌಷ್ಟಿಕ ಆಹಾರಕ್ಕಾಗಿ ಕೊಡ್ತಿದ್ದಾರೆ. ನಾವು ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಎಂದು ಹೇಳೋಕೆ ಆಗಲ್ಲ. ಇದೀಗ 5 ರೂಪಾಯಿ ಒಂದರಂತೆ ಮೊಟ್ಟೆ ಖರೀದಿ ಆಗ್ತಿದೆ ಎಂದು ಹೇಳಿದರು. ಈ ವೇಳೆ ಮೊಟ್ಟೆಯಿಂದ ಶಿಕ್ಷಕರ ಮೇಲೆ ಹೊರೆ ಬರುತ್ತಿದೆ ಎಂದು ಜೆಡಿಎಸ್ ಶಾಸಕ ಬಾಲಕೃಷ್ಣ ವಾದಿಸಿದರು. ಇದಕ್ಕೆ ಧ್ವನಿಗೂಡಿಸಿದ ನಾರಾಯಣಸ್ವಾಮಿ ಮೊಟ್ಟೆ ದರ ಜಾಸ್ತಿ ಆದರೆ ಶಿಕ್ಷಕರು ಮಕ್ಕಳಿಗೆ ಕೊಡಲ್ಲ ಎಂದರು. ಇದಕ್ಕುತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಕ್ಕಳ ಹಾಜರಾತಿ 100 ಪರ್ಸೆಂಟ್ ಆದಾಗ ಮೊಟ್ಟೆ ವಿತರಣೆ ಸ್ವಲ್ಪ ವ್ಯತ್ಯಾಸ ಆಗುತ್ತದೆ. ಮುಂದಿನ ದಿನಗಳಲ್ಲಿ ಮೊಟ್ಟೆ ಒಂದೇ ದರದಲ್ಲಿ ಇರುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ