ಸಬ್‌ಅರ್ಬನ್ ರೈಲು ತಕ್ಷಣಕ್ಕೆ ಓಡಲ್ಲ?| ಬಜೆಟ್‌ನಲ್ಲಿ ಅನುದಾನ ಘೋಷಿಸಿದರೂ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಸಿಕ್ಕಿಲ್ಲ| ಯೋಜನೆಯ ಕೆಲಸಗಳು ಶುರುವಾಗಿಲ್ಲ| ಒಂದು ವೇಳೆ ತಕ್ಷಣ ಅನುಮತಿ ಸಿಕ್ಕರೂ ಕಾರ್ಯಾರಂಭಕ್ಕೆ 6 ತಿಂಗಳು ಬೇಕು!
ಬೆಂಗಳೂರು[ಫೆ.02]: ರಾಜಧಾನಿಯ ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಮತ್ತೊಮ್ಮೆ ಘೋಷಣೆ ಮಾಡಲಾಗಿದೆ. ಆದರೆ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ಇನ್ನೂ ಬಾಕಿ ಇದೆ. ಹೀಗಾಗಿ ಬಜೆಟ್‌ನಲ್ಲಿ ಘೋಷಣೆಯಾದರೂ ಇದು ತ್ವರಿತವಾಗಿ ಜಾರಿಯಾಗುವ ಲಕ್ಷಣವಿಲ್ಲ.
ಕೇಂದ್ರ ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲಿ .17 ಸಾವಿರ ಕೋಟಿ ಅಂದಾಜು ವೆಚ್ಚದ ಉಪನಗರ ರೈಲು ಯೋಜನೆ ಘೋಷಿಸಿತ್ತು. ನಂತರ ಕೇಂದ್ರ ಸರ್ಕಾರ ಯೋಜನೆಯ ಡಿಪಿಆರ್ ಪರಿಷ್ಕರಿಸಲು ಸೂಚಿಸಿತ್ತು. ಅದರಂತೆ .18,600 ಕೋಟಿ ವೆಚ್ಚದ 148 ಕಿ.ಮೀ. ಉದ್ದದ ಪರಿಷ್ಕೃತ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಈ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ದೊರೆಯುವುದು ಬಾಕಿಯಿದೆ.
ಈ ಮಧ್ಯೆ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮತ್ತೆ ಉಪ ನಗರ ರೈಲು ಯೋಜನೆ ಘೋಷಿಸಲಾಗಿದೆ. ಆದರೆ, ಸಿಸಿಇಎ ಶೀಘ್ರ ಅನುಮೋದನೆ ಕೊಟ್ಟರಷ್ಟೇ ಯೋಜನೆಗೆ ವೇಗ ದೊರೆಯಲಿದೆ. ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆ-ರೈಡ್) ಮೂಲಕ ಈ ಉಪ ನಗರ ರೈಲು ಯೋಜನೆ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ. ಯೋಜನೆ ಒಟ್ಟು ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟುವೆಚ್ಚ ಮಾಡಲಿವೆ. ಉಳಿದ ಶೇ.60 ರಷ್ಟುಹಣವನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಕೆ-ರೈಡ್ ಸಂಸ್ಥೆಗೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿದೆ. ಆದರೆ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಬಾಕಿಯಿರುವುದರಿಂದ ಯೋಜನೆ ಸಂಬಂಧ ಯಾವುದೇ ಕಾರ್ಯಗಳು ಆರಂಭಗೊಂಡಿಲ್ಲ.
ಶೀಘ್ರದಲ್ಲೇ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಸಿಕ್ಕರೆ ಕೆ-ರೈಡ್‌ಗೆ ಈ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಕೆ-ರೈಡ್‌ಗೆ ಅಗತ್ಯ ಅಧಿಕಾರಿಗಳ ನಿಯೋಜನೆ ಸೇರಿ ಕೆಲ ಸಿದ್ಧತೆ ನಡೆಸಲು ಸಮಯ ಹಿಡಿಯುತ್ತದೆ. ಹಾಗಾಗಿ ಯೋಜನೆಗೆ ತ್ವರಿತವಾಗಿ ಸಿಸಿಇಎ ಅನುಮೋದನೆ ಕೊಡಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.
ನಾಲ್ಕು ಪ್ರಮುಖ ಕಾರಿಡಾರ್
ಉಪನಗರ ರೈಲು ಯೋಜನೆಯ ಡಿಪಿಆರ್ ಪ್ರಕಾರ ನಗರದಲ್ಲಿ 148 ಕಿ.ಮೀ. ಉದ್ದದ ರೈಲು ಸಂಪರ್ಕ ಜಾಲ ನಿರ್ಮಾಣವಾಗಲಿದೆ. ಅದರಲ್ಲಿ 55.57 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ಮಾರ್ಗ ಹಾಗೂ 92.6 ಕಿ.ಮೀ. ಉದ್ದ ನೆಲಮಟ್ಟದ ಮಾರ್ಗ ಇರಲಿದೆ. ಪ್ರಮುಖವಾಗಿ ಕೆಂಗೇರಿ- ವೈಟ್‌ಫೀಲ್ಡ್, ಬೆಂಗಳೂರು ನಗರ ನಿಲ್ದಾಣ- ರಾಜನುಕುಂಟೆ, ನೆಲಮಂಗಲ- ಬೈಯ್ಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ- ದೇವನಹಳ್ಳಿ ಕಾರಿಡಾರ್ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಒಟ್ಟು 355.28 ಹೆಕ್ಟೇರ್ ಭೂಮಿಯ ಅಗತ್ಯವಿದೆ.
ಸಂಚಾರ ಸಮಸ್ಯೆಗೆ ಪರಿಹಾರ
ರಾಜಧಾನಿಯ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಉಪನಗರ ರೈಲು ಯೋಜನೆಗೆ ಭಾರೀ ಬೇಡಿಕೆ ಬಂದಿದೆ. ಈ ಯೋಜನೆ ಅನುಷ್ಠಾನದಿಂದ ಬೆಂಗಳೂರು ನಗರ ಸೇರಿದಂತೆ ನೆರೆಯ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಕೋಲಾರ ಜಿಲ್ಲೆಗಳ ಜನರ ಸಂಚಾರಕ್ಕೂ ಸಹಕಾರಿಯಾಗಲಿದೆ. ಅಲ್ಲದೆ, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸೂರು, ಬಂಗಾರಪೇಟೆಗಳಿಗೆ ರೈಲು ಸೇವೆ ಉತ್ತಮಗೊಳ್ಳಲಿದೆ.