
ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಎಚ್‌ಸಿಜಿ (ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್) ವಿರುದ್ಧ ಭಾರೀ ಅಕ್ರಮದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ಆಸ್ಪತ್ರೆಯ ‘ಕೇಂದ್ರ ನೈತಿಕ ಸಮಿತಿ’ಗೆ ಕೇಂದ್ರ ಸರ್ಕಾರ 2 ವರ್ಷಗಳ ನಿಷೇಧ ಹೇರಿದೆ. ಈ ಮೂಲಕ ಆಸ್ಪತ್ರೆಯು 24 ತಿಂಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ಕಠಿಣ ನಿರ್ಬಂಧ ವಿಧಿಸಿದೆ.ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳಲ್ಲಿ ಭಾರಿ ಹಗರಣ ನಡೆಯುತ್ತಿದೆ. ಇದನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಪ್ರಕರಣವನ್ನು ಮುಚ್ಚಿಹಾಕುವ ಯತ್ನಗಳು ನಡೆದಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
‘ಕನ್ನಡಪ್ರಭ’ ಮೊದಲ ಬಾರಿ ಕಳೆದ ವರ್ಷ ಜುಲೈನಲ್ಲೇ ಈ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರವನ್ನು ಎಚ್ಚರಿಸಿತ್ತು. ಅದರ ಫಲಶ್ರುತಿಯಾಗಿ ಕರ್ನಾಟಕದ ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಇದೀಗ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಹೆಚ್‌ಸಿಜಿ ಕೇಂದ್ರ ನೈತಿಕ ಸಮಿತಿಗೆ 2 ವರ್ಷ ಪೂರ್ತಿ ನಿಷೇಧ ಹೇರಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ಅನುಮತಿಸದಂತೆ ಅಥವಾ ಮೇಲ್ವಿಚಾರಣೆ ನಡೆಸದಂತೆ ಕಠಿಣ ನಿರ್ಬಂಧ ವಿಧಿಸಿದೆ.
ಆಸ್ಪತ್ರೆಯು ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳಲ್ಲಿ ನೀತಿಬಾಹಿರ ಕೃತ್ಯಗಳಲ್ಲಿ ತೊಡಗಿದೆ ಎಂದು ಅದರ ನೈತಿಕ ಸಮಿತಿ ಮುಖ್ಯಸ್ಥ, ನಿವೃತ್ತ ನ್ಯಾ. ಪಿ. ಕೃಷ್ಣ ಭಟ್ ಅವರೇ ಕಳೆದ ವರ್ಷ ಸ್ಫೋಟಕ ಆರೋಪ ಮಾಡಿದ್ದರು. ಈ ವಿಷಯವಾಗಿ ಪತ್ರಮುಖೇನ ಹಾಗೂ ಖುದ್ದು ಹಲವು ಬಾರಿ ಆಸ್ಪತ್ರೆಯ ಆಡಳಿತ ಮಂಡಳಿ ಗಮನಕ್ಕೆ ತಂದರೂ, ಆಸ್ಪತ್ರೆಯಲ್ಲಿ ಆ ವಿಚಾರವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎನ್ನಲಾಗಿತ್ತು. ಇದರಿಂದ ಬೇಸತ್ತು ನ್ಯಾ. ಕೃಷ್ಣ ಭಟ್ ಅವರು ನೈತಿಕ ಸಮಿತಿಯ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಗಂಭೀರ ಆರೋಪಗಳ ಬೆನ್ನಲ್ಲೇ ಆಸ್ಪತ್ರೆಯ ಸಿಇಒ, ನಿರ್ದೇಶಕರು ಪದತ್ಯಾಗ ಮಾಡಿದ್ದರು. ಸಾಲುಸಾಲಾಗಿ ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದರು. ಈ ಮಧ್ಯೆ ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಸಿಡಿಎಸ್‌ಸಿಒಗೆ ಪತ್ರ ಬರೆದಿತ್ತು. ಆಸ್ಪತ್ರೆಯಲ್ಲಿನ ನ್ಯಾಯೋಚಿತವಲ್ಲದ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳ ಕುರಿತು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿತ್ತು.
ಈ ಪ್ರಕರಣವನ್ನು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತನಿಖೆ ನಡೆಸಿದವು. ಅಧಿಕಾರಿಗಳು ಮತ್ತು ತಜ್ಞರ ತಂಡ ಹೆಚ್‌ಸಿಜಿ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ, ತನಿಖೆ ನಡೆಸಿತು. ತನಿಖೆಯಲ್ಲಿ ಆಸ್ಪತ್ರೆಯಲ್ಲಿ ಗಂಭೀರ ನಿಯಮ ಉಲ್ಲಂಘನೆಗಳು ನಡೆದಿವೆ ಎಂದು ಪತ್ತೆಯಾಗಿದೆ. ಅವುಗಳು ಇಂತಿವೆ.
1. 2021ರಿಂದ 2025ರವರೆಗೆ ಕನಿಷ್ಠ 9 ಪ್ರಕರಣಗಳಲ್ಲಿ ರೋಗಿಗಳು ತೀವ್ರವಾಗಿ ನರಳಿ ಸಾವನ್ನಪ್ಪಿದ್ದರೂ, ಆಸ್ಪತ್ರೆಯು ಇದನ್ನು ಸರ್ಕಾರಕ್ಕೆ ಸರಿಯಾದ ಸಮಯದಲ್ಲಿ ವರದಿ ಮಾಡಲಿಲ್ಲ. ಕ್ಲಿನಿಕಲ್ ಟ್ರಯಲ್‌ಗೆ ಒಳಗಾಗಿದ್ದ ರೋಗಿಯೊಬ್ಬರು ಅನಾರೋಗ್ಯದಿಂದ ತೊಂದರೆಗೆ ಸಿಲುಕಿದಾಗ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡದೆ ಹೊರರೋಗಿಗಳ ವಿಭಾಗಕ್ಕೆ ಕಳುಹಿಸಿದರು. ಮರುದಿನವೇ ರೋಗಿ ಸಾವನ್ನಪ್ಪಿದ್ದಾಳೆ. ರೋಗಿ ಆರೈಕೆ ಬಗ್ಗೆ ಎಚ್‌ಸಿಜಿ ಕ್ರಮ ಕೈಗೊಳ್ಳಲು ವಿಫಲವಾಗಿದ್ದಲ್ಲದೆ ಈ ಘಟನೆ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲು 10 ತಿಂಗಳು ತಡ ಮಾಡಿದ್ದಾರೆ.
2. ಮತ್ತೋರ್ವ ರೋಗಿ ಲಿವರ್ ಮತ್ತು ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿದ್ದರೂ, ‘ಗುಣಮುಖರಾಗಿ ಮನೆಗೆ ಹೋದರು’ ಎಂದು ಸುಳ್ಳು ವರದಿ ಬರೆದಿದ್ದಾರೆ. ನಿಜವಾಗಿ, ಆ ರೋಗಿಗೆ ಅಗತ್ಯ ಲಿವರ್ ಪರೀಕ್ಷೆಗಳನ್ನೇ ಮಾಡಿರಲಿಲ್ಲ.
3. 2024ರ ಸೆ.25ರಂದು ನಡೆದ ಒಂದು ಕ್ಲಿನಿಕಲ್ ಟ್ರಯಲ್ ಸಭೆಯಲ್ಲಿ ಡಾ. ಗೋವಿಂದ ಬಾಬು ಅವರು ‘ನನಗೆ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ’ ಎಂದು ಔಪಚಾರಿಕ ಘೋಷಣೆಗೆ ಸಹಿ ಹಾಕಿದ್ದರು. ಆದರೆ ವಾಸ್ತವದಲ್ಲಿ ಅವರೇ ಆ ಟ್ರಯಲ್‌ನ ಪ್ರಧಾನ ತನಿಖಾಧಿಕಾರಿ ಆಗಿದ್ದರು. ಅಂದರೆ ಟ್ರಯಲ್ ನಡೆಸುವ ಮುಖ್ಯ ವೈದ್ಯರೇ ಆಗಿದ್ದರು. ನೈತಿಕ ಸಮಿತಿ ಸದಸ್ಯರಾಗಿ ತಾವೇ ತಮ್ಮದೇ ಟ್ರಯಲ್ ಅನ್ನು ಅನುಮೋದಿಸುವ ಅಥವಾ ಪರಿಶೀಲಿಸುವ ಸ್ಥಾನದಲ್ಲಿದ್ದರು. ಇದು ಸಂಪೂರ್ಣವಾಗಿ ವೈದ್ಯಕೀಯ ನೈತಿಕತೆಯ ಉಲ್ಲಂಘನೆ.
4. ಎಚ್‌ಸಿಜಿ ಆಡಳಿತಾಧಿಕಾರಿಗಳು ತೀರ್ವತರವಾದ ರೋಗಿಗಳ ಗಾಯಗಳು ಮತ್ತು ಸಾವಿನ ಬಗ್ಗೆ ಪರಿಶೀಲನೆ ನಡೆಸಲು ಆಂತರಿಕ ಸಮಿತಿ ರಚಿಸಿರುವುದಾಗಿ ತಿಳಿಸಿದ್ದರು. ಆದರೆ ಇದರ ಕಾನೂನುಬದ್ಧ ರಚನೆ, ನಿರ್ವಹಣೆ ನಿಯಮಗಳು ಅಥವಾ ಸಮಿತಿಯ ಜವಾಬ್ದಾರಿ ಬಗ್ಗೆ ಯಾವುದೇ ಮಾಹಿತಿ ನೀಡಲು ವಿಫಲವಾಗಿದ್ದಾರೆ.
5. 2022ರಲ್ಲಿ ಆಸ್ಪತ್ರೆಯು ಕೆಲವು ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವ ಸಭೆಗಳನ್ನ ನಡೆಸಿದೆ. ಈ ರೀತಿಯ ಸಭೆಗಳನ್ನು ಕಾನೂನುಬದ್ಧವಾಗಿ ಇರಬೇಕಾದ ಕೋರಂ ಇಲ್ಲದೆಯೇ ನಡೆಸಲಾಗಿದೆ. ಇದಕ್ಕೆ ಕೋವಿಡ್ ಕಾರಣಗಳನ್ನು ಆಸ್ಪತ್ರೆ ನೀಡಿದೆ. ಆದರೆ ವರ್ಚುವಲ್ ಸಭೆಯಂತ ಪರ್ಯಾಯ ಮಾರ್ಗಗಳ ಬಗ್ಗೆ ಉದ್ದೇಶಪೂರ್ವಕವಾಗಿ ಮಾಹಿತಿಯನ್ನ ನೀಡಿಲ್ಲ.
6. ಪ್ರತಿ ಸಭೆಯ ನಂತರ ಸಭೆಯ ಕ್ಷಣ ಕ್ಷಣದ ವರದಿ (ಮಿನಿಟ್ಸ್ ಆಫ್ ಮೀಟಿಂಗ್) ತಯಾರಿಸಿ, ಅಧ್ಯಕ್ಷರ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ 2022ರ ಎಲ್ಲಾ ಸಭೆಗಳ ವರದಿಗಳನ್ನು ಸರಿಯಾಗಿ ತಯಾರಿಸಿ ಸಲ್ಲಿಸಿಲ್ಲ. ಇದು ಸಂಪೂರ್ಣವಾಗಿ ಇಂಡಿಯನ್ ಗುಡ್ ಕ್ಲಿನಿಕಲ್ ಪ್ರಾಕ್ಟೀಸ್ (ಜಿಸಿಪಿ) ನಿಯಮಗಳ ಉಲ್ಲಂಘನೆಯಾಗಿದೆ.
7. 2023ರಲ್ಲಿ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಹಲವು ನಿಯಮಗಳ ಉಲ್ಲಂಘನೆಗಳು ನಡೆದಿದ್ದವು. ಇವುಗಳನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಬೇಕಿತ್ತು. ಆದರೆ ಆಸ್ಪತ್ರೆ ಅವುಗಳನ್ನು ಮರೆಮಾಚಿತು. ರೋಗಿಗಳ ಸಾವು ಮತ್ತು ತೀವ್ರ ಸಮಸ್ಯೆಗಳನ್ನು ಪರಿಶೀಲಿಸಲು ಒಂದು ಉಪ ಸಮಿತಿ ರಚಿಸಲಾಗಿದೆ ಎಂದು ಹೆಚ್‌ಸಿಜಿ ಅಧಿಕಾರಿಗಳು ಹೇಳಿದ್ದರು. ಆದರೆ ಈ ಉಪ ಸಮಿತಿಯನ್ನು ಯಾವಾಗ ರಚಿಸಲಾಯಿತು, ಯಾರು ಸದಸ್ಯರು, ಅದರ ನಿಯಮಗಳು ಏನು, ಅದು ಎಷ್ಟು ಸಭೆಗಳನ್ನು ನಡೆಸಿತು ಎಂಬ ಯಾವುದೇ ದಾಖಲೆ ಅಥವಾ ವಿವರಗಳನ್ನು ನೀಡಲಿಲ್ಲ.
8. ಎಚ್‌ಸಿಜಿ ಆಸ್ಪತ್ರೆಯು ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸುವ ಮಾನವರ ರಕ್ಷಣೆ ಬಗ್ಗೆ ಕಾನೂನುಬದ್ದವಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿದೆ. ಇದು ‘ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು-2019’ ರ ಉಲ್ಲಂಘನೆಯಾಗಿದೆ
ತನಿಖೆ ವೇಳೆ ಹಲವು ನಿಯಮಗಳ ಉಲ್ಲಂಘನೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್‌ಸಿಜಿ ಆಸ್ಪತ್ರೆಯ ನೈತಿಕ ಸಮಿತಿಯ ವಿರುದ್ಧ ಬಹಳ ಕಠಿಣ ಮತ್ತು ದೊಡ್ಡ ಕ್ರಮ ಕೈಗೊಂಡು ಸಮಿತಿಗೆ 2 ವರ್ಷ ಪೂರ್ತಿ ನಿಷೇಧ ಹೇರಿದೆ. ಈ ಅವಧಿಯಲ್ಲಿ ಸಮಿತಿ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ಅನುಮತಿಸಲು ಅಥವಾ ನೋಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಮರೆಮಾಡಿದ ರೋಗಿಗಳ ಸಾವು ಮತ್ತು ತೀವ್ರ ಅನಾರೋಗ್ಯ ವರದಿಗಳನ್ನು ಸರಿಯಾಗಿ ಮತ್ತು ತಕ್ಷಣ ಸಲ್ಲಿಸಬೇಕು. ತಪ್ಪುಗಳನ್ನು ಸರಿಪಡಿಸಲು ಮತ್ತು ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ತಿದ್ದುಪಡಿ ಮತ್ತು ತಡೆಗಟ್ಟುವ ಯೋಜನೆ (ಸಿಎಪಿಎ) ಸಲ್ಲಿಸಬೇಕು ಎಂದು ಆದೇಶಿಸಿದೆ.
ಆಸ್ಪತ್ರೆಯು ರೋಗಿಗಳ ಕುಟುಂಬಗಳಿಗೆ ನಷ್ಟ ಪರಿಹಾರ ನೀಡಬೇಕು. ಈಗಾಗಲೇ ನಡೆಯುತ್ತಿರುವ ಟ್ರಯಲ್‌ಗಳಲ್ಲಿರುವ ರೋಗಿಗಳನ್ನು ತೀವ್ರವಾಗಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ತಿಂಗಳೂ ರೋಗಿಗಳ ಸುರಕ್ಷತಾ ವರದಿಯನ್ನು ಬೆಂಗಳೂರಿನ ಸಿಡಿಸ್‌ಸಿಒ ಝೋನಲ್ ಕಚೇರಿಗೆ ಸಲ್ಲಿಸಬೇಕು ಎಂದು ಮಹತ್ವದ ಆದೇಶ ನೀಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಡಾ. ರಾಜೀವ್ ಸಿಂಗ್ ರಘುವಂಶಿ ಅವರು ಈ ಆದೇಶಕ್ಕೆ ಸಹಿ ಹಾಕಿ ಹೊರಡಿಸಿದ್ದಾರೆ.
- ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಹಗರಣವಾಗಿದೆ ಎಂದು ಆ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ನ್ಯಾ. ಪಿ. ಕೃಷ್ಣ ಭಟ್ ಗಂಭೀರ ಆರೋಪ ಮಾಡಿದ್ದರು
- ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸಂಸ್ಥೆಯ ಉನ್ನತ ಆಡಳಿತ ವರ್ಗಕ್ಕೆ ಖುದ್ದು ಮನವಿ ಮಾಡಿದ್ದರು. ಆದರೆ ಆಡಳಿತ ಮಂಡಳಿ ಅಕ್ರಮವನ್ನೇ ಮುಚ್ಚಿ ಹಾಕಲು ಪ್ರಯತ್ನಿಸಿತ್ತು
- ತಮ್ಮ ಪ್ರಯತ್ನ ವಿಫಲ ಬೆನ್ನಲ್ಲೇ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ನ್ಯಾ. ಪಿ. ಕೃಷ್ಣ ಭಟ್ ರಾಜೀನಾಮೆ ನೀಡಿದ್ದರು. ಆ ಬೆನ್ನಲ್ಲೇ ಸಂಸ್ಥೆಯ ಸಿಇಒ, ನಿರ್ದೇಶಕರು, ವೈದ್ಯರು ಕೂಡಾ ಪದತ್ಯಾಗ ಮಾಡಿದ್ದರು.
- ವಿಚಾರ ಗಂಭೀರ ಸ್ವರೂಪದ್ದಾದ ಕಾರಣ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿತ್ತು.
- ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಬಗ್ಗೆ ಕೇಂದ್ರ ಸರ್ಕಾರದಿಂದ ತನಿಖೆ. ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ವರದಿ ಸಲ್ಲಿಕೆ, ಸಭೆ ನಿರ್ವಹಣೆ, ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಸೇರಿ ಹಲವು ಅಕ್ರಮ ಬೆಳಕಿಗೆ
- ಹೀಗಾಗಿ ಆಸ್ಪತ್ರೆಯ ನೈತಿಕ ಸಮಿತಿಯ ವಿರುದ್ಧ 2 ವರ್ಷ ಸರ್ಕಾರ ನಿಷೇಧ ಹೇರಿದೆ. ಈ ಅವಧಿಯಲ್ಲಿ ಆಸ್ಪತ್ರೆ ಯಾವುದೇ ಕ್ಲಿನಿಕಲ್ ಟ್ರಯಲ್ ನಡೆಸುವಂತಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ