
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸಂಭವಿಸಿದ ಮಾರಾಮಾರಿ ಪ್ರಕರಣ ಸಂಬಂಧ ಭಾರತೀಯ ವಾಯುಸೇನೆ (ಐಎಎಫ್) ಯನ್ನು ಪ್ರತಿನಿಧಿಸುವ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ ಮೂಲದ ಶೀಲಾದಿತ್ಯ ಬೋಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕೆಂದು ಮನವಿ ಮಾಡಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠ, ಶೀಲಾದಿತ್ಯ ಬೋಸ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
Bengaluru Road Rage Case: ಹಾರಾಡಿದ ವಿಂಗ್ ಕಮಾಂಡರ್ ವಿರುದ್ಧ ಕನ್ನಡಿಗರು ಕೆಂಡ
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಅವರ ವಾದವನ್ನು ಪರಿಗಣಿಸಿದ ನ್ಯಾಯಪೀಠ, "ಪೋಲೀಸರು ಶೀಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಯಾವುದೇ ವಿಚಾರಣೆಗೆ ಹಾಜರಾಗಲು ಕಾನೂನು ಪ್ರಕ್ರಿಯೆ ಪಾಲಿಸದೆ ಒತ್ತಾಯಿಸಬಾರದು. ಬೋಸ್ ತನಿಖೆಗೆ ಸಹಕರಿಸಬೇಕು. ಅಲ್ಲದೆ, ನ್ಯಾಯಾಲಯದ ಅನುಮತಿ ಇಲ್ಲದೆ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು" ಎಂದು ಕಟ್ಟುನಿಟ್ಟಾದ ಸೂಚನೆ ನೀಡಿದೆ. ಅಲ್ಲದೆ, ನ್ಯಾಯಾಲಯ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ದೂರುದಾರ ವಿಕಾಸ್ ಕುಮಾರ್‌ಗೆ ತುರ್ತು ನೋಟಿಸ್ ನೀಡಿದೆ.
ಪ್ರಕರಣದ ಹಿನ್ನಲೆ:
ಪ್ರಕರಣದ ಹಿನ್ನೆಲೆ: ಏ.21ರಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಸಿ.ವಿ. ರಾಮನ್ ನಗರದಲ್ಲಿ ಶೀಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಇದ್ದ ಕಾರಿಗೆ ಟೆಕ್ಕಿ ವಿಕಾಸ್ ಬೈಕ್ ತಾಕಿತ್ತು. ಇದರಿಂದ ವಿಕಾಸ್ ಮತ್ತು ಶೀಲಾದಿತ್ಯ ಬೋಸ್ ನಡುವೆ ಕಲಹ ಆರಂಭವಾಗಿತ್ತು. ಘಟನೆ ಕುರಿತು ಘಟನೆ ಬಳಿಕ ಬೋಸ್ ಪತ್ನಿ ಠಾಣೆಗೆ ದೂರು ದಾಖಲಿಸಿದ್ದರು. ಶ್ರೀನಿವಾಸ್ ಅವರು ಕನ್ನಡದಲ್ಲಿ ತನ್ನನ್ನು ನಿಂದಿಸಿ ಬೈಕ್ ಕೀ ಮತ್ತು ಕಲ್ಲಿನಿಂದ ಬೋಸ್ ಮೇಲೆ ಹಲ್ಲೆ ನಡೆಸಿದರು ಎಂದು ದೂರು ನೀಡಿದ್ದರು.
ನಡುರಸ್ತೆಯಲ್ಲೇ ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!
ಇದರ ಬೆನ್ನಿಗೇ ವಿಕಾಸ್ ಕುಮಾರ್ ಕೂಡ ಪ್ರತಿ ದೂರು ಸಲ್ಲಿಸಿದ್ದರು. ಅದನ್ನಾಧರಿಸಿ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು, ಶೀಲಾದಿತ್ಯ ಬೋಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109 (ಕೊಲೆ ಯತ್ನ), 115(2) (ಸ್ವಇಚ್ಛೆಯಿಂದ ಹಾನಿ ಮಾಡುವುದು), 304 (ಕಳವು ಮಾಡಲು ಕಿತ್ತುಕೊಳ್ಳುವುದು), 324 (ಕಿರುಕುಳ), 351 (ಬೆದರಿಕೆ), 352 (ಶಾಂತಿಗೆ ಭಂಗ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿ ಎಫ್‌ಐಆರ್ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಶೀಲಾದಿತ್ಯ ಬೋಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಂಗ್‌ಕಮಾಂಡರ್‌ನಿಂದ ಹಲ್ಲೆ: ವಿಕಾಸ್‌ಗೆ ಡಿಕೆಶಿ ಧೈರ್ಯ
ಸಿವಿ ರಾಮನ್‌ನಗರದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರಿಂದ ಹಲ್ಲೆಗೊಳಗಾಗಿರುವ ವಿಕಾಸ್ ಕುಮಾರ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬುಧವಾರ ಕರೆ ಮಾಡಿ ಧೈರ್ಯ ತುಂಬಿದರು. ಬೈಕ್ ತಾಗಿದ್ದಕ್ಕಾಗಿ ಶಿಲಾದಿತ್ಯ, ವಿಕಾಸ್ ಮೇಲೆ ಹಲ್ಲೆ ಮಾಡಿದ್ದರು. ಘಟನೆ ನಂತರ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಶಿಲಾದಿತ್ಯ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ