
ಬೆಂಗಳೂರು: ರಾಜ್ಯದಲ್ಲಿ ಜೂ.30ರಿಂದ ವಿವಿಧ ಹಂತಗಳಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಅ.22ರಂದು ಅಂತ್ಯಗೊಂಡಿದ್ದು, ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಎಸ್‌ಐಆರ್ ವೇಳೆ ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿ ಸಂಬಂಧ ಸಲ್ಲಿಕೆಯಾಗಿದ್ದ ಹಕ್ಕು, ಆಕ್ಷೇಪಣೆ, ನೋಟಿಸ್ ವಿಲೇವಾರಿ ಅ.22ರಂದು ಪೂರ್ಣಗೊಂಡಿದೆ. ನಿಗದಿತ ವೇಳಾಪಟ್ಟಿಯಂತೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿ, ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಕರಡು ಮತದಾರರ ಪಟ್ಟಿಯ 4.50 ಕೋಟಿ ಮತದಾರರ ಪೈಕಿ ನೋ ಮ್ಯಾಪಿಂಗ್ ಮತ್ತು ತಾರ್ಕಿಕ ವ್ಯತ್ಯಾಸ ಕಾರಣಕ್ಕೆ 43.82 ಲಕ್ಷ ನೋಟಿಸ್ ಸೃಜಿಸಿ ಮತದಾರರಿಗೆ ವಿತರಿಸಲಾಗಿತ್ತು. ಆ ಮತದಾರರನ್ನು ಸಂಪರ್ಕಿಸಿ ನೋಟಿಸ್‌ಗಳ ವಿಚಾರಣೆ ಪೂರ್ಣಗೊಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಮತದಾರರು ಮತ್ತು ಹೊರಗೆ ಉಳಿಯುವ ಮತದಾರರು ಎಷ್ಟು ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ.
ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಎಸ್‌ಐಆರ್ ವೇಳೆ ಮತದಾರರ ಪಟ್ಟಿಗೆ ನೋಂದಣಿಯಾಗದ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಚುನಾವಣಾ ಆಯೋಗ ವಿಶೇಷ ಅಭಿಯಾನ ನಡೆಸಲು ಸೂಚಿಸಿದೆ. ಈ ವಿಶೇಷ ಅಭಿಯಾನ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆಯಿದೆ.
ಮಂಗಳವಾರ ಮಧ್ಯಾಹ್ನ 3 ಗಂಟೆ ನಂತರ ಅಂತಿಮ ಮತದಾರರ ಪಟ್ಟಿಯನ್ನು https//ceo.karnataka.gov.in ಅಥವಾ https//voters.eci.gov.in ಅಥವಾ ಇಸಿಐಎನ್‌ಇಟಿ ಮೊಬೈಲ್ ಆ್ಯಪ್‌ನಲ್ಲಿ ವೀಕ್ಷಿಸಬಹುದು. ತಮ್ಮ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು.
ಮುಂದೇನು?
- ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ನೋಡಿ
- ಹೆಸರು ಇರದೇ ಇದ್ದರೆ ಚಿಂತೆ ಮಾಡಬೇಕಿಲ್ಲ
- ಎಸ್‌ಐಆರ್ ಬಳಿಕವೂ ಹೆಸರು ಸೇರ್ಪಡೆಗೆ ಕ್ರಮ
- ವಿಶೇಷ ಅಭಿಯಾನ ನಡೆಸಲಿರುವ ಚು.ಆಯೋಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ