
ಬೆಂಗಳೂರು / ಆನೇಕಲ್ (ನ.02): ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ಬಳಿಯ ಕೂಡ್ಲು ಗೇಟ್‌ನ ಕೃಷ್ಣಾರೆಡ್ಡಿ ಲೇಔಟ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಆಹಾರವಿಲ್ಲದೇ ಬಳಲಿ ಬೆಂಡಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ, ಚಿರತೆ ತಾನಾಗೇ ಬಲೆಗೆ ಬಿದ್ದಾಗ ಕೇವಲ 2 ಮೀಟರ್ ದೂರದಿಂದ ಬಂದೂಕಿನಿಂದ ಚಿರತೆಯ ಎದೆಗೆ ಗುಂಡಿಟ್ಟು ಹೊಡೆದು ಕೊಲೆ ಮಾಡಿರುವ ಘಟನೆಗೆ ಸಾರ್ವಜನಿಕ ವಲಯದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಕೆಲಸ ಮಾಡುವುದಕ್ಕೆ ಬಾರದ ವೈದ್ಯರು ತಮ್ಮ ವೃತ್ತಿ ತರಬೇತಿಗಾಗಿ ಒಂದು ಪೇಶಂಟ್ ಮೇಲೆ ಪ್ರಯೋಗವನ್ನು ನಡೆಸಿದಾಗ ಹೇಳುವ ಒಂದು ಉತ್ತರ 'ಆಪರೇಶನ್ ಸಕ್ಸಸ್, ಬಟ್ ಪೇಶಂಟ್ ಡೆಡ್' ಎನ್ನುವ ರೀತಿಯಲ್ಲಿ ಅರಣ್ಯ ಇಲಾಖೆಯು ಕಳೆದ ನಾಲ್ಕು ದಿನಗಳಿಂದ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಪ್ರವೃತ್ತವಾದ ನಿಪುಣರಿಲ್ಲದ ತಂಡವು ಚಿರತೆ ಇನ್ನೇನು ಸೆರೆ ಸಿಕ್ಕಿದೆ ಎನ್ನುವಾಗ ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಚಿರತೆಯನ್ನು ಕೊಲೆ ಮಾಡಿದ ಕ್ರೂರಿ ಅರಣ್ಯಾಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾ ಮಾಡಿ, ಆತನಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಆಪರೇಷನ್ ಲೆಪರ್ಡ್ ಸಕ್ಸಸ್, ಆದ್ರೆ ಪೇಶಂಟ್ ಚಿರತೆ ಡೆಡ್
ಸಿಲಿಕಾನ್ ಸಿಟಿಯಲ್ಲಿ ಸೆರೆ ಸಿಕ್ಕ ಚಿರತೆ ಸಾವಿನ ಪ್ರಕರಣದಲ್ಲಿ, ಚಿರತೆಗೆ ಗುಂಡು ಹಾರಿಸಿ ಸಾಯಿಸಲಾಗಿದೆ ಎಂದು ಹೇಳಲಾಗಿದೆ. ಮೂರ್ನಾಲ್ಕು ದಿನಗಳಿಂದ ಕಾಡಿಸಿದ್ದ ಚಿರತೆ ಸೆರೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟು ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ಭಯ ಬಿದ್ದು ಬಲೆ ಬಳಿ ಓಡಿ ಬಂದಿತ್ತು. ಬಲೆಗೆ ಬಂದು ಬಿದ್ದಾಗ ವೈದ್ಯರು ಅರವಳಿಕೆ ನೀಡಬಹುದಿತ್ತು. ಆದರೆ, ಬಲೆಗೆ ಬಿದ್ದ ಬಳಿಕ ಗುಂಡೇಟು ನೀಡಲಾಗಿತ್ತು. ಆಗ ಚಿರತೆಯ ಬೆನ್ನಿನ ಭಾಗದಲ್ಲಿ ಗುಂಡುಹೊಕ್ಕಿ ಸೀದಾ ಎದೆಯ ಗೂಡನ್ನು ಸೇರಿದ ಗುಂಡು ಹೃದಯವನ್ನೇ ಸೀಳಿತ್ತು.
ನೈಪುಣ್ಯರಿಲ್ಲದ ತಂಡದಿಂದ ಕಾರ್ಯಾಚರಣೆ: ಇನ್ನು ಬೆಂಗಳೂರಿನಲ್ಲಿ ನಡೆದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ತಂಡದಲ್ಲಿ ಉತ್ತಮ ತರಬೇತಿ ಪಡೆದಿದ್ದ ವೈದ್ಯರು ಇರಲಿಲ್ಲ ಎನ್ನುವ ಮಾಹಿತಿಯಿದೆ. ಇಷ್ಟು ದೊಡ್ಡ ಕಾರ್ಯಾಚರಣೆ ನಡೆದಿದ್ದರೂ ನುರಿತ ತಂಡ ಕರೆಸಿರಲಿಲ್ಲ. ಆದ್ದರಿಂದಲೇ ಮೈಸೂರಿನ ತಂಡವನ್ನು ಕರೆಸಲಾಗಿದ್ದು, ಒಂದು ದಿನ ಕಾರ್ಯಾಚಣೆ ನಡೆಸಿದ ಮೈಸೂರು ತಂಡ ವಾಪಸ್ ಹೋಗಿತ್ತು. ಇನ್ನು ಬೆಂಗಳೂರಿನ ಬನ್ನೇರುಘಟ್ಟ ವನ್ಯಜೀವಿ ಮೃಗಾಲಯದ ತಂಡವು ಕಾರ್ಯಾಚರಣೆ ಮುಂದುರೆಸಿತ್ತು. ಇದರಲ್ಲಿ ಅರವಳಿಕೆ ನೀಡಲು ಹಲವಾರು ಜನ ವೈದ್ಯರ ತಂಡ ಇತ್ತು. ಕತ್ತು ಅಥವಾ ತೊಡೆ ಬಾಗಕ್ಕೆ ಅರವಳಿಕೆಯನ್ನು ಸಾಮಾನ್ಯವಾಗಿ ಡಾಟ್ ಮಾಡಲಾಗುತ್ತದೆ. ಅಂದರೆ ಮಾಂಸ ಹೆಚ್ಚಾಗಿ ಇರುವ ಕಡೆ ಅರವಳಿಕೆ ನೀಡುವುದು ಸಾಮಾನ್ಯ. ಇನ್ನು ಅರವಳಿಕೆ ನೀಡಿದ ಬಳಿಕ ಕನಿಷ್ಠ ಹತ್ತು ನಿಮಿಷ ಬೇಕು. ಇದು ಸರಿಯಾಗಿ ಆಗದೆ ಇದ್ದರೆ ಚಿರತೆಗಳು ಇನ್ನಷ್ಟು ಕೋಪಗೊಳ್ಳುತ್ತವೆ.
ಮೊದಲನೇ ಬಾರಿ ವಿಫಲವಾಗಿದ್ದ ವೈದ್ಯರನ್ನೇ ನಂಬಿಕೊಂಡ ತಂಡ:
ಚಿರತೆ ಕಾರ್ಯಾಚರಣೆ ವೇಳೆ ಮೊದಲನೇ ಬಾರಿ ಅರವಳಿಕೆ ನೀಡಿದಾಗ ಸರಿಯಾಗಿ ಇಂಜೆಕ್ಟ್ ಆಗಿರಲಿಲ್ಲ. ಇದರಿಂದಾಗಿ ಸಹಜವಾಗಿ ಕಾಡು ಪ್ರಾಣಿ ಚಿರತೆಯು ಹತ್ತಿರದಲ್ಲಿದ್ದ ವೈದ್ಯ ಕಿರಣ್ ಮೇಲೆ ಅಟ್ಯಾಕ್ ಮಾಡಿತ್ತು. ಎರಡನೇ ಬಾರಿಯ ಕಾರ್ಯಾಚರಣೆಯಲ್ಲಿ ಅರವಳಿಕೆ ನೀಡಲು ಎಲ್ಲ ಅವಕಾಶ ಇತ್ತು. ಆದ್ರೆ ಅರವಳಿಕೆ ನೀಡುವ ಮೊದಲೇ ಬಲೆಗೆ ಬಿದ್ದ ಚಿರತೆಯ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಕೊಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಅಜ್ಮಲ್ ಕಸಬ್‌ನನ್ನು ಜೀವಂತ ಹಿಡಿದವರಿಗೆ ಚಿರತೆ ಜೀವಂತ ಸಿಕ್ಕಿಲ್ವಾ?: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ರಣಕಹಳೆ!
ಚಿರತೆ ಕೊಲ್ಲುವುದಕ್ಕಾಗಿ ನಾಟಕವಾಡಿದ್ರಾ?
ಕಳೆದ 15 ದಿನಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿತ್ತು. ಇದಾದ ನಂತರ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಹಲವು ಸಿನಿಮಾ ನಾಯಕರಿಗೆ ನೋಟಿಸ್ ನೀಡಿ ತನಿಖೆ ಮಾಡಲು ಮುಂದಾದ ಅರಣ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಹೀರೋ ಆಗಿತ್ತು. ಈಗ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗದೇ ಕೊಲೆಗೈದ ಅರಣ್ಯ ಇಲಾಖೆ ವಿಲನ್ ಆಗಿ ಕಾಣಿಸುತ್ತಿದೆ. ಕೊಲ್ಲುವ ಸಲುವಾಗಿ ಇಷ್ಟೊಂದು ಕಾರ್ಯತಂತ್ರ ರೂಪಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಮೊದಲನೇ ಬಾರಿ ಅಟ್ಯಾಕ್ ಮಾಡಿದಾಗ ನುರಿತ ತಜ್ಞರನ್ನು ಕೂಡಲೇ ಸ್ಥಳಕ್ಕೆ ಕರೆಸಬಹುದಿತ್ತು. ಮೊದಲೇ ಪೇಲ್ಯೂರ್ ಆಗಿದ್ದ ತಂಡವನ್ನೇ ಮತ್ತೆ ಅರವಳಿಕೆ ನೀಡಲು ಮುಂದೆ ಬಿಡಲಾಗಿತ್ತು. ಅರಣ್ಯ ಇಲಾಖೆಯ ಚಿರತೆ ಕಾರ್ಯಾಚರಣೆ ವಿರುದ್ಧ ಪ್ರಾಣಿಯರ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ