ಬೆಂಗಳೂರು ರಸ್ತೆ ಗುಂಡಿ ವಿವಾದ, ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿ ಇತ್ತು: ಸಚಿವ ರಾಮಲಿಂಗಾರೆಡ್ಡಿ

Published : Sep 26, 2025, 08:39 PM IST
Ramalinga reddy

ಸಾರಾಂಶ

ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಗುಂಡಿ ಮುಚ್ಚಿದರೆ, ಸಚಿವ ರಾಮಲಿಂಗಾರೆಡ್ಡಿ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ, ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರು ತಲೆಗೆ ಪೇಟ ಕಟ್ಟಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ವಿಶೇಷ ರೀತಿಯ ಪ್ರತಿಭಟನೆ ನಡೆಸಿದರು. ಡಿಕೆ ಶಿವಕುಮಾರ್ ಅವರ ನಿವಾಸದ ಮುಂದೆ ಗುಂಡಿ ಮುಚ್ಚುವ ಮೂಲಕ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಅಶೋಕ್ ಸೇರಿದಂತೆ ಹಲವರು ಮಣ್ಣು ಹಾಗೂ ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡಿದರು. ಈ ವೇಳೆ ಅವರು ರಸ್ತೆಗಳ ಪರಿಸ್ಥಿತಿ ದುಸ್ತರವಾಗಿದೆ, ಸರ್ಕಾರ ಜನರ ಜೀವದ ಬಗ್ಗೆ ಗಂಭೀರವಾಗಿಲ್ಲ ಎಂದು ಟೀಕಿಸಿದರು.

ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಗುಂಡಿಗಳು ಇಲ್ಲ ಎಂದು ನಾನು ಹೇಳುವುದಿಲ್ಲ. ಮಳೆಗಾಲದಲ್ಲಿ ಸಹಜವಾಗಿ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತವೆ. ಆದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಪಾಲಿಕೆ ಮತ್ತು ಸರ್ಕಾರದದ್ದೇ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಆಡಳಿತಾವಧಿಯಲ್ಲೇ ಲಕ್ಷಗಟ್ಟಲೆ ಗುಂಡಿಗಳು ನಗರದಲ್ಲಿ ಕಂಡುಬಂದಿದ್ದವು ಎಂದು ಅವರು ನೆನಪಿಸಿದರು.

ಈ ‌ಹಿಂದೆ ಗುಂಡಿಗಳಿಂದ 17 ಜನ ತೀರಿಕೊಂಡಿದ್ರು ಆಗ ನಾವೇ ಟೀಕೆ ಮಾಡಿದ್ವಿ, ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿಗಳು ಇತ್ತು. ಆಗ ಆಯುಕ್ತರು ತುಷಾರ್ ಗಿರಿನಾಥ್ ಇದ್ದರು. ಅವರನ್ನು ಪ್ರತಿನಿತ್ಯ ಕೇಳ್ತಾ ಇದ್ರು ಯಾವಾಗ ಎಷ್ಟು ಗುಂಡಿ ಮುಚ್ಚುತ್ತಿರಾ ಅಂತಾ, ಬಿಜೆಪಿ ಅವಧಿಯಲ್ಲಿ6116 ಕೋಟಿ ಅನುದಾನ ಕೊಡಲಾಗಿತ್ತು. ಅವರು ರಸ್ತೆಗಳಿಗೆ 3346 ಕೋಟಿಗಳನ್ನು ತೆಗೆದುಕೊಂಡಿದ್ರು.ಅಂದು ನಮ್ಮ ಶಾಸಕರಿಗೆ 682 ಕೋಟಿ ಕೊಟ್ಟಿದ್ರು. ಅವರು ಅಷ್ಟೊಂದು ಹಣ ತೆಗೆದುಕೊಂಡಿದ್ರು ಗುಂಡಿಗಳು ಯಾಕೆ ಬಿತ್ತು? ನಮ್ಮ ಸರ್ಕಾರ ಗುಂಡಿಗಳನ್ನು ಮುಚ್ಚಲು ಎಲ್ಲ ಪ್ರಯತ್ನ ಮಾಡ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳು ಬೀಳೋದಕ್ಕೆ ಬಿಜೆಪಿ ನಾಯಕರೇ ಕಾರಣ. ಈಗ ರಸ್ತೆ ಗುಂಡಿಗಳು ಬಿದ್ದಿವೆ ಅದನ್ನು ಮುಚ್ಚೋ ಕೆಲಸ ಮಾಡ್ತೇವೆ. ಗುಂಡಿ ಮುಕ್ತ ಅಂತಹ ಯಾವತ್ತು ಸಾಧ್ಯವಿಲ್ಲ. ರಸ್ತೆ ಕೆಲಸ ಕಾರ್ಯಗಳು ನಡೆಯುತ್ತಲೇ ಆಗ್ತಿರುತ್ತವೆ. 3 ವರ್ಷ ಮೈಂಟೈನಿಂಗ್ ಪೀರಿಯಡ್ ಇರುತ್ತದೆ. ಅವರು ಆ ರಸ್ತೆಯ ಗುಣಮಟ್ಟ ನೋಡಿಕೊಳ್ತಾರೆ. ಆ ನಡುವೆ ಸಣ್ಣಪುಟ್ಟ ಕೆಲಸಗಳು ಆಗಿರುತ್ತವೆ. ಸಿಎಂ ಡಿಸಿಎಂ ಹೇಳಿದ್ದಾರೆ ಆ ವಾರ್ಡ್ನ ಜವಾಬ್ದಾರಿ ಇಂಜಿನಿಯರಿಗೆ ಆಯುಕ್ತರಿಗೆ ಕೊಟ್ಡಿದ್ದಾರೆ. ಯಾರು ಕೆಲಸ‌ ಮಾಡಿರೋದಿಲ್ಲ ಅಂತವರ ಮೇಲೆ ಕ್ರಮ ಆಗಲಿದೆ. ಬಿಜೆಪಿ ಅವರು ಅಧಿಕಾರ ಬಿಟ್ಟು ಹೋದಾಗ 8 ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ತೀರಿಸಬೇಕೋ ಬೇಡವೋ..? ಕ್ಯಾಂಟ್ರಕ್ಟರ್ ಅವರನ್ನ ಇಂತಹವರೇ ಕೊಡಿ ಅಂತಾ ಹೇಳಲು ಆಗಲ್ಲ. ನಾನು ಜಯನಗರ ಕ್ಷೇತ್ರಕ್ಕೆ ಬಂದಾಗ ಒಂದೇ ಒಂದು ಗುಂಡಿ ಇರಲಿಲ್ಲ. ಬಿಜೆಪಿ ಅವರ ಆರೋಪಕ್ಕೆ ನಾವು ಉತ್ತರ ನೀಡಲೇಬೇಕು. ಅವರ ಟೀಕೆಗೆ ಉತ್ತರ ನೀಡಲಿಲ್ಲ ಅಂದ್ರೆ ಅವರು ಹೇಳಿದ್ದೇ ನಿಜ ಅಂದುಕೊಂಡ್ತಾರೆ.

ದೇವಾಲಯಗಳ ಅಭಿವೃದ್ಧಿ ವಿವಾದ

ಧಾರ್ಮಿಕ ದತ್ತಿ ಇಲಾಖೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಧರ್ಮಸ್ಥಳವನ್ನು ಧಾರ್ಮಿಕ ದತ್ತಿ ಇಲಾಖೆಗೆ ಕೊಡಲು ಯಾವುದೇ ಪ್ರಸ್ತಾಪವಿಲ್ಲ. ಸಿ ವರ್ಗದ ದೇವಾಲಯಗಳ ಅಭಿವೃದ್ಧಿ ಮಾಡಲು ಸರ್ಕಾರ ಬದ್ಧವಾಗಿದೆ. ಆದರೆ ಬಿಜೆಪಿ ಇದಕ್ಕೂ ಅಡ್ಡಿ ಮಾಡುತ್ತಿದೆ” ಎಂದು ಆರೋಪಿಸಿದರು.

ವಾಹನ ತೆರಿಗೆ ವಿಚಾರ

ಪುದುಚೇರಿಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಕಾರು ಖರೀದಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, “ಯಾರು ವಾಹನವನ್ನು ಹೊರ ರಾಜ್ಯದಿಂದ ತಂದರೂ, ಒಂದು ವರ್ಷವಾದ ನಂತರ ಸ್ಥಳೀಯ ರಸ್ತೆ ತೆರಿಗೆ ಕಟ್ಟಲೇಬೇಕು. ಅದು ಯಾವುದೇ ವ್ಯಕ್ತಿಯಾಗಿರಲಿ ಕಾನೂನು ಎಲ್ಲರಿಗೂ ಸಮಾನ” ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಜನಜೀವನಕ್ಕೆ ತೊಂದರೆ ನೀಡುತ್ತಿರುವುದರಲ್ಲಿ ಸಂಶಯವಿಲ್ಲ. ಆದರೆ ಈ ವಿಷಯದಲ್ಲಿ ರಾಜಕೀಯ ನಾಯಕರು ಪರಸ್ಪರದ ಮೇಲೆ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಆಡಳಿತದ ವೈಫಲ್ಯವನ್ನು ನೆನಪಿಸಿದರೆ, ಬಿಜೆಪಿ ನಾಯಕರು ಈಗಿನ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಹೀಗಾಗಿ, ರಸ್ತೆ ಗುಂಡಿ ವಿವಾದ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಬಣ್ಣ ತಾಳುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌