Pay CM Posters: ಪೇ ಸಿಎಂ ಪೋಸ್ಟರ್‌ ತನಿಖೆಗೆ ಪೊಲೀಸ್‌ ಆಯುಕ್ತ ಆದೇಶ

By Govindaraj S  |  First Published Sep 22, 2022, 2:00 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣದ ಬಗ್ಗೆ ಸಿಸಿಬಿ ತನಿಖೆಗೆ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಬುಧವಾರ ಆದೇಶಿಸಿದ್ದಾರೆ. 


ಬೆಂಗಳೂರು (ಸೆ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣದ ಬಗ್ಗೆ ಸಿಸಿಬಿ ತನಿಖೆಗೆ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಬುಧವಾರ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಪೋಸ್ಟರ್‌ ಹಾಕಿದ ಆರೋಪಿಗಳ ಪತ್ತೆಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳುವ ಮಾರ್ಗದ ಮೇಖ್ರಿ ವೃತ್ತ, ಜಯಮಹಲ್‌ ರಸ್ತೆ, ಶೇಷಾದ್ರಿಪುರ ಹಾಗೂ ಹೈಗ್ರೌಂಡ್‌್ಸ ವ್ಯಾಪ್ತಿಯ ಗೋಡೆಗಳಿಗೆ ‘ಪೇ ಸಿಎಂ’ ಹೆಸರಿನ ಪೋಸ್ಟರ್‌ಗಳನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಎನ್ನಲಾದ ಕೆಲವರು ಹಾಕಿದ್ದರು. 

ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಮುಖ್ಯಮಂತ್ರಿಗಳಿಗೆ ಭಾರಿ ಮುಜುಗರ ತಂದಿದ್ದವು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಜೆ.ಸಿ.ನಗರ, ಸಂಜಯನಗರ, ಶೇಷಾದ್ರಿಪುರ, ಸದಾಶಿವನಗರ ಹಾಗೂ ಹೈಗ್ರೌಂಡ್ಸ್‌ ಠಾಣೆಗಳಲ್ಲಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ಆರೋಪದ ಮೇರೆಗೆ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ಆದೇಶಿಸಿದ್ದಾರೆ.

Tap to resize

Latest Videos

ನೆರೆ ಪರಿಹಾರಕ್ಕೆ 3600 ಕೋಟಿ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

ಪೋಸ್ಟರ್‌ ಬಗ್ಗೆ ಅಧಿಕಾರಿಗಳ ಮೇಲೆ ಸಿಎಂ ಗರಂ: ‘ಪೇ ಸಿಎಂ’ ಪೋಸ್ಟರ್‌ ಅಭಿಯಾನದಿಂದ ಆಕ್ರೋಶಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಬುಧವಾರ ಮುಂಜಾನೆಯೇ ಪೋಸ್ಟರ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸಂಗತಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಪೋಸ್ಟರ್‌ ಅಂಟಿಸಿದವರ ಕಿಡಿಗೇಡಿಗಳನ್ನು ಪತ್ತೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಆಯುಕ್ತರ ಮೇಲೆ ಮುಖ್ಯಮಂತ್ರಿ ತೀವ್ರ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ನ್ಯಾಯಾಂಗ ತನಿಖೆ: ಸಿಎಂ ಬೊಮ್ಮಾಯಿ

ಸ್ಕ್ಯಾನ್‌ ಮಾಡಿದರೆ ‘40%ಸರ್ಕಾರ’ ವೆಬ್‌ಸೈಟ್‌ಗೆ ಭೇಟಿ!: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ‘ಪೇ-ಸಿಎಂ’ ಕ್ಯೂಆರ್‌ ಸ್ಕ್ಯಾನ್‌ ಮಾಡಿದರೆ ‘40 ಪರ್ಸೆಂಟ್‌ ಸರ್ಕಾರ’ ಎಂಬ ಬಿಜೆಪಿಯ ಭ್ರಷ್ಟಾಚಾರದ ಬಗೆಗೆ ಕಾಂಗ್ರೆಸ್‌ ಸೃಷ್ಟಿಸಿರುವ ವೆಬ್‌ಸೈಟ್‌ಗೆ ಲಾಗಿನ್‌ ಆಗುತ್ತದೆ. ವೆಬ್‌ಸೈಟ್‌ನಲ್ಲಿ ಬಿಟ್‌ಕಾಯಿನ್‌ ಹಗರಣ, ಪಿಎಸ್‌ಐ ಹಗರಣ, ರಸ್ತೆ ಹಗರಣ ಹೀಗೆ ವಿವಿಧ ಹಗರಗಣ ಬಗ್ಗೆ ಉಲ್ಲೇಖಿಸಲಾಗಿದೆ. ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಇಲ್ಲಿ ಧ್ವನಿ ಎತ್ತಿ ಎಂದು ಕ್ಲಿಕ್‌ ಆಪ್ಷನ್‌ ನೀಡಿದ್ದು, ಮಂಗಳವಾರ ಸಂಜೆ 5 ಗಂಟೆ ವೇಳೆಗೆ 1.19 ಲಕ್ಷ ಮಂದಿ ಸರ್ಕಾರದ ವಿರುದ್ಧ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ವೆಬ್‌ಸೈಟ್‌ ಅಲ್ಲದೆ ‘8447704040’ ಸಂಖ್ಯೆಗೆ ಕರೆ ಮಾಡುವ ಮೂಲಕ ಕೂಡ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅಭಿಪ್ರಾಯ ಸಲ್ಲಿಸಬಹುದು ಎಂದು ಕಾಂಗ್ರೆಸ್‌ ತಿಳಿಸಿದೆ. ಇದೇ ಸಂಖ್ಯೆಯನ್ನು ‘ಪೇ-ಸಿಎಂ’ ಪೋಸ್ಟರ್‌ನಲ್ಲೂ ಉಲ್ಲೇಖಿಸಲಾಗಿದೆ.

click me!