ಬೆಂಗಳೂರು ಉದ್ಯಮಿ ಮನೆಯಲ್ಲಿ 2 ಕೆಜಿ ಚಿನ್ನ, ₹10 ಲಕ್ಷ ನಗದು ಕದ್ದ ನೇಪಾಳ ಸೆಕ್ಯೂರಿಟಿ ಗಾರ್ಡ್!

Published : Jun 01, 2025, 03:33 PM IST
Bengaluru Robbery Case

ಸಾರಾಂಶ

ಬೆಂಗಳೂರಿನ ಶಾಸ್ತ್ರೀನಗರದಲ್ಲಿ ಬಿಜೆಪಿ ಮುಖಂಡ ರಮೇಶ್ ಬಾಬು ಅವರ ಮನೆಯಲ್ಲಿ ನೇಪಾಳಿ ಸೆಕ್ಯೂರಿಟಿ ಗಾರ್ಡ್ ದಂಪತಿ 2 ಕೆಜಿ ಚಿನ್ನ, ₹10 ಲಕ್ಷ ಹಾಗೂ ಲೈಸೆನ್ಸ್ ಗನ್ ಕದ್ದೊಯ್ದಿದ್ದಾರೆ. ಕುಟುಂಬ ತಿರುಪತಿಗೆ ಹೋದಾಗ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜೂ. 1): ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರೀ ನಗರದಲ್ಲಿ ಪ್ರಮುಖ ಉದ್ಯಮಿ ಹಾಗೂ ಬಿಜೆಪಿ ಮುಖಂಡ ರಮೇಶ್ ಬಾಬು ಅವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದೆ. ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ದಂಪತಿ ಮನೆಯ ಮಾಲೀಕರ ನಂಬಿಕೆ ಗಳಿಸಿ, 2 ಕೆಜಿ ಚಿನ್ನಾಭರಣ, ₹10 ಲಕ್ಷ ನಗದು ಹಾಗೂ ಲೈಸೆನ್ಸ್ ಗನ್ ಕದ್ದೊಯ್ದಿದ್ದಾರೆ. ಇದರ ಬೆನ್ನಲ್ಲಿಯೇ ನೇಪಾಳಿಯವರನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.

ತಿರುಪತಿಗೆ ಕುಟುಂಬ ಸಮೇತ ಹೋದ ವೇಳೆ ಕಳ್ಳತನ: ರಮೇಶ್ ಬಾಬು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಕುಟುಂಬ ಇಲ್ಲದ ಸಮಯದ ಲಾಭ ಪಡೆದು, ಮನೆಯ ಬೀಗ ಮುರಿದು ಕಳ್ಳತನ ಎಸಗಲಾಗಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ನೇಪಾಳ ಮೂಲದ ರಾಜ್ ಹಾಗೂ ದೀಪಾ ಎಂಬ ದಂಪತಿಯನ್ನು ಮನೆಯ ಸೆಕ್ಯೂರಿಟಿ ಗಾರ್ಡ್‌ಗಳಾಗಿ ನೇಮಿಸಲಾಗಿತ್ತು. ಈ ದಂಪತಿ ತುಂಬಾ ಆತ್ಮೀಯರಂತೆ, ಸರಳತೆಯಿಂದ ಹಾಗೂ ಶಿಸ್ತಿನಿಂದ ಕೆಲಸ ಮಾಡುವಂತೆ ನಾಟಕ ಮಾಡಿ ಮಾಲೀಕರ ನಂಬಿಕೆ ಗಳಿಸಿದ್ದರು. ಹೀಗಾಗಿ, ಸೆಕ್ಯೂರಿಟಿ ಸಿಬ್ಬಂದಿಗೆ ಮನೆಯ ಒಳಗಡೆ ಯಾವುದೇ ಭಾಗಕ್ಕೂ ಹೋಗಲು ಸಂಪೂರ್ಣ ಪ್ರವೇಶವನ್ನು ನೀಡಲಾಗಿತ್ತು. ಇದೇ ನಂಬಿಕೆಯಿಂದ ಮನೆಯೊಳಗಿನ ಎಲ್ಲ ವಿವರಗಳನ್ನು ಸರಿಯಾಗಿ ತಿಳಿದುಕೊಂಡು, ಮಾಲೀಕರು ಇಲ್ಲದ ಅವಕಾಶವನ್ನು ಬಳಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಇದೀಗ ಮಾಲೀಕರು ನೇಪಾಳಿ ಕಾರ್ಮಿಕರ ಮೇಲೆ ಇಟ್ಟಿದ್ದ ನಂಬಿಕೆಯೇ ಅವರ ಕುಟುಂಬಕ್ಕೆ ಮಾರಕವಾಗಿದೆ.

ಈ ಬಗ್ಗೆ ರಮೇಶ್ ಬಾಬು ಪುತ್ರ ಮಹೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 'ರಾತ್ರಿ 10.30ಕ್ಕೆ ತಂದೆ ಸೆಕ್ಯೂರಿಟಿ ಗಾರ್ಡ್‌ಗೆ ಕರೆ ಮಾಡಿ ಮನೆ ಪರಿಸ್ಥಿತಿ ಚೆನ್ನಾಗಿದೆಯೆ ಎಂದು ವಿಚಾರಿಸಿದರು. ಮೊಬೈಲ್ ಮೂಲಕ ಸಿಸಿಟಿವಿ ಕೂಡ ನೋಡಿದ್ದೆವು. ಬೆಳಗ್ಗೆ ನೋಡಿದಾಗ ಸಿಸಿಟಿವಿ ಆಫ್ ಆಗಿತ್ತು. ಮೊದಲಿಗೆ ಕರೆಂಟ್ ಸಮಸ್ಯೆ ಎಂದುಕೊಂಡೆವು. ಆದರೆ ನಮ್ಮ ಸಂಬಂಧಿಯೊಬ್ಬರು ಮನೆ ಬಳಿ ಬಂದು ನೋಡಿದಾಗ ಡೋರ್ ಓಪನ್ ಆಗಿತ್ತು. ಅವರು ಕರೆ ಮಾಡಿ ನಮಗೆ ವಿಷಯ ತಿಳಿಸಿದ ನಂತರ, ನಿಗಾವಹಿಸುವಂತೆ ಮನವಿ ಮಾಡಿದ್ದೆವು. ನಾವು ಊರಿನಿಂದ ವಾಪಸ್ ಬಂದು ನೋಡಿದಾಗ ಮನೆ ಒಡೆದು ಒಳಗಿನ ಹಣ, ಚಿನ್ನ, ಲೈಸೆನ್ಸ್ ಗನ್ ಎಲ್ಲವನ್ನೂ ಕದ್ದು ಹೋಗಿದ್ದಾರೆ. ನೇಪಾಳ ಮೂಲದ ಜನರನ್ನು ಯಾರು ನಂಬಬೇಡಿ. ನಮ್ಮ ಮನೆಯ ಕೆಲಸಕ್ಕಾಗಿ ನೇಮಿಸಿದ್ದವರು ನಾವು ಇಲ್ಲದಿದ್ದಾಗಲೇ ಕಳ್ಳತನ ಮಾಡಿದ್ದಾರೆ. ಇಂಥವರನ್ನು ಕೆಲಸಕ್ಕೆ ಇಡಬಾರದು' ಎಂದು ಹೇಳಿದ್ದಾರೆ.

ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು:

ಈ ಸಂಬಂಧ ಹೆಚ್‌ಎಎಲ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಇದೀಗ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ನಗರದ ವಿವಿಧ ಭಾಗಗಳು, ಹೊರವಲಯಗಳಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಮನೆ ಬಿಟ್ಟು ಹೊರಡುವ ಮುನ್ನ ಸಿಸಿಟಿವಿ ಪವರ್ ಬ್ಯಾಕ್‌ಅಪ್ ಪರಿಶೀಲನೆ ಮಾಡಿ. ನೆರೆಹೊರೆಯವರನ್ನು ನಂಬಿದರೂ ದೃಢ ಪರಿಶೀಲನೆ ಮಾಡಿಕೊಳ್ಳಬೇಕು. ಸೆಕ್ಯೂರಿಟಿ ಗಾರ್ಡ್ ನೇಮಿಸುವಾಗ ಪೊಲೀಸ್ ವೆರಿಫಿಕೇಶನ್ ಮಾಡಿಕೊಳ್ಳುವುದು ಉತ್ತಮ. ಇನ್ನು ಆಫ್‌ಸೈಟ್ ಬ್ಯಾಕ್‌ಅಪ್ ಸಿಸಿಟಿವಿ ಸ್ಟೋರೇಜ್ ಕೂಡ ಮಾಡಿಕೊಳ್ಳಬೇಕು. ಬಾಡಿಗೆದಾರರು, ಗಾರ್ಡ್‌ಗಳು ಅಥವಾ ಕೆಲಸಗಾರರನ್ನು ನೇಮಿಸುವಾಗ ತೀವ್ರ ಪರಿಶೀಲನೆ ನಡೆಸುವುದು ಅತ್ಯಗತ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ