ಬೆಂಗಳೂರಿಗರೆ ಮೆಟ್ರೋ ಮಾರ್ಗದ ಅಡಿಯ ರಸ್ತೆಗಳಲ್ಲಿ ಹೋಗೋವಾಗ ಹುಷಾರ್‌!

By Santosh Naik  |  First Published Jan 10, 2023, 1:43 PM IST

ನಿಮ್ಮ ಜೀವಕ್ಕೆ ನೀವೇ ಹೊಣೆ. ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ಬರೋದಿಲ್ಲ. ಮೆಟ್ರೋ ಮಾರ್ಗದ ಅಡಿಯ ರಸ್ತೆಯಲ್ಲಿ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು ಅನ್ನೋದು ನಾಗವಾರದಲ್ಲಿ ಆದ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.


ಬೆಂಗಳೂರು (ಜ.10): ನಮ್ಮ ಮೆಟ್ರೋ ಕಾಮಗಾರಿ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಅದಕ್ಕೆ ಕಾರಣವಾಗಿರುವುದು ನಾಗವಾರ ಪ್ರದೇಶದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಉರುಳಿ ತಾಯಿ ಹಾಗೂ ಮಗು ದಾರುಣ ಸಾವು ಕಂಡಿರುವ ಘಟನೆ. ಪಿಲ್ಲರ್‌ ನಿರ್ಮಾಣಕ್ಕಾಗಿ ಹಾಕಿದ್ದ ರಾಡ್‌ಗಳು ಏಕಾಏಕಿ ಬೈಕ್‌ನ ಮೇಲೆ ಪ್ರಯಾಣ ಮಾಡುತ್ತಿದ್ದ ಕುಟುಂಬದ ಮೇಲೆ ಬಿದ್ದಿದ್ದರಿಂದ 35 ವರ್ಷದ ತೇಜಸ್ವಿನಿ ಹಾಗೂ ಆಕೆಯ ಎರಡೂವರೆ ವರ್ಷದ ಮಗ ವಿಹಾನ್‌ ತೀವ್ರ ರಕ್ತಸ್ರಾವದಿಂದ ಸಾವು ಕಂಡಿದ್ದಾರೆ. ಇನ್ನು ತಂದೆ ಲೋಹಿತ್‌ ಕುಮಾರ್‌ ಹಾಗೂ ಇನ್ನೊಬ್ಬ ಮಗ ಎರಡೂವರೆ ವರ್ಷದ ವಿಸ್ಮಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದರ ಬೆನ್ನಲ್ಲಿಯೇ ಮೆಟ್ರೋ ಕಾಮಗಾರಿಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳು ಉದ್ಭವವಾಗಿದೆ. ಪ್ರಸ್ತುತ ಬೆಂಗಳೂರಿನ ಹಲವು ಜನನಿಬಿಡ ಮಾರ್ಗಗಳಲ್ಲಿ ಮೆಟ್ರೋ ಕಾಮಗಾರಿ ಹಗಲು ರಾತ್ರಿ ಎನ್ನದೆ ನಡೆಯುತ್ತಿದೆ. ಸಿಲ್ಕ್‌ಬೋರ್ಡ್‌, ಹೊಸೂರು ರೋಡ್‌, ಏರ್‌ಪೋರ್ಟ್‌ ರೋಡ್‌ಗಳು ಸಾಮಾನ್ಯವಾಗಿ ದೊಡ್ಡ ಮಟ್ಟದ ಜನಸಂದಣಿ ಹೊಂದಿರುತ್ತದೆ. ಆದರೆ, ಯಾವುದೇ ಮುನ್ನೆಚ್ಚರಿಕೆಗಳನ್ನು ವಹಿಸದೇ ಮೆಟ್ರೋ ಕೆಲಸಗಳು ನಡೆಯುತ್ತಿರುವ ಕಾರಣ, ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಯಾಣ ಮಾಡಬೇಕಾಗಿದೆ.

ಪಿಲ್ಲರ್‌ಗಳನ್ನು ಏರಿಸುವ, ಬೀಮ್‌ಗಳನ್ನು ಇರಿಸುವ ಕೆಲಸ ಕಾರ್ಯ ನಡೆಯುತ್ತಿದೆ. ಒಂದು ಸಣ್ಣ ಎಚ್ಚರ ತಪ್ಪಿದರೂ, ಅನಾಹುತ ಹೇಗಾಗಲಿದೆ ಅನ್ನೋದಕ್ಕೆ ನಾಗವಾರದ ಘಟನೆಯೇ ಸಾಕ್ಷಿ. ಒಂದೆಡೆ ಮೆಟ್ರೋ ಕೆಲಸದ ವೇಳೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ವಿಚಾರವಾಗಿದ್ದರೆ, ಇನ್ನೊಂದೆಡೆ ಈಗಾಗಲೇ ಚಾಲ್ತಿಯಲ್ಲಿರುವ ಮೆಟ್ರೋ ಮಾರ್ಗದ ಪಿಲ್ಲರ್‌ಗಳ ಕಳಪೆ ಕಾಮಗಾರಿಗಳು ಕೂಡ ಸಾಕಷ್ಟು ಬಾರಿ ಸುದ್ದಿಯಾಗಿವೆ.

ಗೊರಗುಂಟೆಪಾಳ್ಯ ಮತ್ತು ಪೀಣ್ಯ ಮೆಟ್ರೊ ನಿಲ್ದಾಣಗಳ ನಡುವಿನ ಪಿಯರ್‌ಗಳಲ್ಲಿ ಜೇನುಗೂಡುಗಳು/ದೊಡ್ಡ ಕುಳಿಗಳು ಪತ್ತೆಯಾದ ನಂತರ ಮೆಟ್ರೊ ನಿರ್ಮಾಣ ಕಾಮಗಾರಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ತುಮಕೂರು ರಸ್ತೆಯಲ್ಲಿರುವ ಗೊರಗುಂಟೆಪಾಳ್ಯ ಮತ್ತು ಪೀಣ್ಯ ನಿಲ್ದಾಣಗಳು ನಮ್ಮ ಮೆಟ್ರೋದ ಹಸಿರು ಮಾರ್ಗದ (ನಾಗಸಂದ್ರ-ಸಿಲ್ಕ್ ಸಂಸ್ಥೆ) ಭಾಗವಾಗಿದ್ದು, ಮಾರ್ಚ್ 2014 ರಿಂದ ಕಾರ್ಯನಿರ್ವಹಿಸುತ್ತಿವೆ.

"ಗೊರಗುಂಟೆಪಾಳ್ಯ ನಿಲ್ದಾಣದ ಬಳಿ 377 ಮತ್ತು 384 ರ ನಡುವಿನ ಕೆಲವು ಪಿಲ್ಲರ್‌ಗಳಲ್ಲಿ ಜೇನುಗೂಡು/ಕುಳಿಗಳು ಇರುವುದನ್ನು ನಾವು ಕಂಡುಕೊಂಡಿದ್ದೇವೆ. ಆ ದುರ್ಬಲ ಪಿಯರ್‌ಗಳನ್ನು ಬಲಪಡಿಸಲು ನಾವು ಈಗಾಗಲೇ ಒತ್ತಡದ ಗ್ರೌಟಿಂಗ್ ಕೆಲಸವನ್ನು ಕೈಗೊಂಡಿದ್ದೇವೆ" ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಮೂಲಗಳು ತಿಳಿಸಿವೆ. ಪಿಯರ್‌ಗಳಲ್ಲಿ ಜೇನುಗೂಡುಗಳು ಕಟ್ಟುವುದು ಅದರಲ್ಲಿನ ದೋಷವನ್ನು ತೋರಿಸಿದರೆ, ಕಾಂಕ್ರಿಟ್‌ ಅಪೂರ್ಣವಾಗಿ ಭರ್ತಿಯಾಗಿದ್ದರೆ ಕುಳಿಗಳು ಹಾಗೂ ಟೊಳ್ಳಾದ ಭಾಗಗಳು ರೂಪುಗೊಳ್ಳುತ್ತವೆ. ಇಲ್ಲಿ ಜೇನುಗೂಡು ಕಟ್ಟುತ್ತವೆ ಎಂದು ತಜ್ಞರು ಹೇಳಿದ್ದಾರೆ. 'ತುಮಕೂರು ರಸ್ತೆಯಲ್ಲಿನ ಕಾಂಕ್ರೀಟ್ ರಚನೆಗಳಲ್ಲಿ (ಪೈರ್‌ಗಳು) ಸಾಕಷ್ಟು ಕುಳಿಗಳು ಕಂಡುಬಂದಿವೆ. ಗುತ್ತಿಗೆದಾರರೊಂದಿಗೆ ಬಿಎಂಆರ್‌ಸಿಎಲ್ ಅದನ್ನು ಸರಿಪಡಿಸಲು ಶ್ರಮವಹಿಸಿದೆ. ಕಾಂಕ್ರೀಟ್‌ ಪಿಯರ್‌ಗಳು ದುರಸ್ತಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸಲು ಕೂಡ ತಂಡ ರಚನೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದರು.

Tap to resize

Latest Videos

ಎಂಜಿ ರಸ್ತೆ- ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ನಿತ್ಯ ಸಮಸ್ಯೆ, ಮೆಟ್ರೋ ಕಾಮಗಾರಿಯಲ್ಲಿ ಲೋಪ.?

ಈ ಮಟ್ರೋ ಪಿಲ್ಲರ್‌ಗಳು ಕನಿಷ್ಠ 50 ರಿಂದ 100 ವರ್ಷ ಬರಬೇಕು. ಆದರೆ, 10 ವರ್ಷವಾಗುವ ಮುನ್ನವೇ ಇದರಲ್ಲಿನ ಲೋಪದೋಷಗಳು ಕಾಣುತ್ತಿವೆ. ಈಗಾಗಲೇ ಕೆಲವು ಬಿರುಕುಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಯಾವ ರೀತಿಯಲ್ಲಿ ಕಾಂಕ್ರಿಟ್‌ ಸುರಿಯಲಾಗಿದೆ. ಕಾಮಗಾರಿಯನ್ನು ಹೇಗೆ ನಡೆಸಲಾಗಿದೆ ಎನ್ನುವ ಆಡಿಟ್‌ ನಡೆಯಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

Bengaluru: ಸಾರ್ವಜನಿಕರ ನಿದ್ರೆಗೆ ಭಂಗ: ರಾತ್ರಿ ವೇಳೆ ಮೆಟ್ರೋ ಕಾಮಗಾರಿಗೆ ಬ್ರೇಕ್‌

ಈವರೆಗೂ 15ಕ್ಕೂ ಹೆಚ್ಚು ಸಾವು: ಮೆಟ್ರೋ ಕಾಮಗಾರಿಯ ವೇಳೆ ಈವರೆಗೂ ನಗರದಲ್ಲಿ 15ಕ್ಕೂ ಹೆಚ್ಚು ಸಾವುಗಳಾಗಿರಬಹುದು. ಅದರಲ್ಲಿ ಹೆಚ್ಚಿನವರು ಮೆಟ್ರೋ ಕಾರ್ಮಿಕರೇ ಆಗಿದ್ದಾರೆ. ಬೀಮ್‌ನ ಭಾಗಗಳು ಬಿದ್ದು, ಸೇಫ್ಟಿ ತಂತಿಗಳು ಮುರಿದು ಕಾರ್ಮಿಕರು ಸಾವು ಕಂಡಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಬಿಹಾರ ಮೂಲದ ಕಾರ್ಮಿಕನ ತಲೆಯ ಮೇಲೆ ಕೇಬಲ್‌ ಬಿದ್ದು ಸಾವು ಕಂಡಿದ್ದ. 2020ರಲ್ಲಿಯೇ ಮೆಟ್ರೋ ಕಾಮಗಾರಿಯ ವೇಳೆ ನಾಲ್ವರು ಸಾವು ಕಂಡಿದ್ದರು.

click me!