
ರಾಮನಗರ (ಆ.01): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ ವಾಹನ ಸವಾರರಿಗೆ 500 ದಂಡ ಬೀಳಲಿದೆ. ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಜು.12ರಂದೇ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಆ.1ರ ಮಂಗಳವಾರದಿಂದ ಈ ಕುರಿತು ಆದೇಶ ಜಾರಿಗೆ ಬರಲಿದೆ.
ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ನಿಷೇಧಿತ ವಾಹನ ಸವಾರರು ಎಕ್ಸ್‌ಪ್ರೆಸ್ ವೇಗೆ ಇಳಿಯದೆ ಕಡ್ಡಾಯವಾಗಿ ನಿಯಮ ಪಾಲನೆ ಮಾಡಿ, ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡಬೇಕು. ಹಾಗೊಂದು ವೇಳೆ ನಿಯಮ ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಹೆಜ್ಜಾಲ ಸಮೀಪದ ಕಣಿಮಿಣಿಕೆ ಟೋಲ್ ಸಂಗ್ರಹ ಪ್ಲಾಜಾ ಮುಂದೆ ಸೂಚನಾ ಫಲಕಗಳನ್ನು ಹಾಕಲಾಗಿದೆ. ಅಲ್ಲದೆ, ನಿಷೇಧಿತ ವಾಹನಗಳು ಹೆದ್ದಾರಿಗೆ ಪ್ರವೇಶಿಸದಂತೆ ಪೊಲೀಸರು ಕಾವಲು ಕಾಯಲಿದ್ದಾರೆ ಎಂದು ಅವರು ತಿಳಿಸಿದರು.
ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ!
ಸಾರ್ವಜನಿಕರ ಆಕ್ರೋಶ: ಈ ಮಧ್ಯೆ, ಹೆದ್ದಾರಿ ಪ್ರಾಧಿಕಾರದ ಈ ಆದೇಶಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ಪ್ರೆಸ್ ವೇ ನಿರ್ಮಾಣ ಸಮಯದಲ್ಲಿ ನಾಲ್ಕು ಪಥದ ಸರ್ವಿಸ್ ರಸ್ತೆಗಳನ್ನು ಕೇವಲ ಕಾಟಾಚಾರಕ್ಕೆ ಎಂಬಂತೆ ನಿರ್ಮಿಸಲಾಗಿದೆ. ಸರ್ವಿಸ್ ರಸ್ತೆಗಳಲ್ಲಿ ಸುರಕ್ಷತೆ ಕಡೆಗೆ ಸ್ವಲ್ಪವೂ ಗಮನ ಹರಿಸಿಲ್ಲ. ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಿಕೊಂಡಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸಿಲ್ಲ. ಮಳೆಗಾಲದಲ್ಲಿ ಅಂಡರ್‌ಪಾಸ್‌ಗಳು ಜಲಾವೃತ ಆಗುವುದು ತಪ್ಪಿಲ್ಲ. ಹೀಗಾಗಿ, ಇಲ್ಲಿ ವಾಹನಗಳು ಸಂಚಾರ ಮಾಡುವುದು ಕಷ್ಟ. ಅಲ್ಲದೆ, ಬಿಡದಿ ಹಾಗೂ ದೊಡ್ಡಮಳೂರು-ಕೋಟಮಾರನಹಳ್ಳಿ ಸಮೀಪ ರೇಲ್ವೆ ಅಂಡರ್ ಪಾಸ್‌ಗಳಲ್ಲಿ ಸಂಚಾರ ಮುಕ್ತಗೊಳಿಸಿಯೇ ಇಲ್ಲ. ಹಲವೆಡೆ ಸರ್ವಿಸ್ ರಸ್ತೆಯೂ ಪರಿಪೂರ್ಣಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ
ಯಾವ್ಯಾವ ವಾಹನ ನಿಷೇಧ?: ಮೋಟಾರ್ ಸೈಕಲ್, ಸ್ಕೂಟರ್ ಸೇರಿ ದ್ವಿಚಕ್ರ ವಾಹನ. ಆಟೋರಿಕ್ಷಾ ಸೇರಿ ತ್ರಿಚಕ್ರವಾಹನ. ಮೋಟಾರು ಅಲ್ಲದ ವಾಹನಗಳು. ಟ್ರ್ಯಾಕ್ಟರ್ ಸಹಿತ ಕೃಷಿ ಆಧರಿತ ವಾಹನಗಳು. ಮಲ್ಟಿಆ್ಯಕ್ಸೆಲ್ ಹೈಡ್ರಾಲಿಕ್ ವಾಹನಗಳು. ಸೈಕಲ್‌ಗಳು. ಎತ್ತಿನಗಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ