Bengaluru mysuru expressway: ಹೆದ್ದಾರಿ ಲೋಪ ಗುರುತಿಸಿದ ಎಡಿಜಿಪಿ ಅಲೋಕ್ ಕುಮಾರ್

By Kannadaprabha NewsFirst Published Jul 1, 2023, 1:27 PM IST
Highlights

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಎಡಿಜಿಪಿ ಅಲೋಕ್‌ಕುಮಾರ್‌ ಶುಕ್ರವಾರ ಹೆದ್ದಾರಿ ವೀಕ್ಷಣೆ ನಡೆಸಿದರು.

​​​​​​ಮಂಡ್ಯ (ಜು.1) : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಎಡಿಜಿಪಿ ಅಲೋಕ್‌ಕುಮಾರ್‌ ಶುಕ್ರವಾರ ಹೆದ್ದಾರಿ ವೀಕ್ಷಣೆ ನಡೆಸಿದರು.

ಮದ್ದೂರು ಗಡಿಭಾಗವಾದ ನಿಡಘಟ್ಟದಿಂದ ಪರಿಶೀಲನೆ ಆರಂಭಿಸಿ ಶ್ರೀರಂಗಪಟ್ಟಣದ ಗಡಿಭಾಗ ಕಳಸ್ತವಾಡಿವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿದರು. ಈ ಸಮಯದಲ್ಲಿ ಹೆದ್ದಾರಿಯಲ್ಲಿರುವ ಹಲವಾರು ಲೋಪಗಳನ್ನು ಗುರುತಿಸಿದ ಅವರು, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Latest Videos

ಎಡಿಜಿಪಿ ಅಲೋಕ್‌ಕುಮಾರ್‌ ಹೆದ್ದಾರಿಯನ್ನು ಪರಿವೀಕ್ಷಣೆ ಆರಂಭಿಸಿದ ಸ್ಥಳದಲ್ಲೇ ಸಾರ್ವಜನಿಕರು ದೂರುಗಳನ್ನು ಹೇಳಲಾರಂಭಿಸಿದರು. ಸವೀರ್‍ಸ್‌ ರಸ್ತೆಯಲ್ಲಿ ಫುಟ್‌ಪಾತ್‌ ವ್ಯವಸ್ಥೆ, ಚರಂಡಿ ನಿರ್ಮಾಣ ಸಮರ್ಪಕವಾಗಿಲ್ಲ. ಅರ್ಧಂಬರ್ಧ ಕಾಮಗಾರಿ ಮಾಡಿದ್ದಾರೆ. ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತಿವೆ. ವಿದ್ಯುತ್‌ದ್ದೀಪಗಳ ವ್ಯವಸ್ಥೆ ಕಲ್ಪಿಸಿಲ್ಲ. ಎಷ್ಟುಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಎಡಿಜಿಪಿ ಎದುರು ದೂಷಿಸಿದರು.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಪ್ರಾಧಿಕಾರದ ಅಧಿಕಾರಿಗಳ ಸಬೂಬಿಗೆ ಬೇಸರ:

ಈ ವಿಷಯವಾಗಿ ಪ್ರಾಧಿಕಾರದ ಅಧಿಕಾರಿಗಳನ್ನು ಎಡಿಜಿಪಿ ಅಲೋಕ್‌ಕುಮಾರ್‌ ಪ್ರಶ್ನಿಸಿದಾಗ ಸಬೂಬು ಹೇಳಲಾರಂಭಿಸಿದರು. ಅಧಿಕಾರಿಗಳು ನೀಡಿದ ಉತ್ತರದಿಂದ ಅಸಮಾಧಾನಗೊಂಡ ಅಲೋಕ್‌ಕುಮಾರ್‌, ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಸಬೇಡಿ. ವಾಸ್ತವಾಂಶವನ್ನು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ನಾನು ಹೆದ್ದಾರಿ ವೀಕ್ಷಣೆ ಮಾಡಿಹೋದ ಬಳಿಕವೂ ಅಪಘಾತಗಳು ನಡೆದರೆ ಕೆಟ್ಟಹೆಸರು ಬರುತ್ತದೆ. ಅದಕಕ್ಕೆ ಅವಕಾಶ ನೀಡಬೇಡಿ ಎಂದರು.

ರಾಷ್ಟ್ರೀಯ ಪ್ರಾಧಿಕಾರ ಕಚೇರಿಯ ಪ್ರಾದೇಶಿಕ ವಿಭಾಗದ ವ್ಯವಸ್ಥಾಪಕರ ಉತ್ತರದಿಂದ ಸಮಾಧಾನಗೊಳ್ಳದ ಅಲೋಕ್‌ಕುಮಾರ್‌, ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಮಾತನಾಡಿದರು. ಮಂಗಳವಾರ ಅಥವಾ ಬುಧವಾರ ಬೆಂಗಳೂರಿನಲ್ಲೇ ಸಭೆ ನಡೆಸಿ ಹೆದ್ದಾರಿಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸುಮ್ಮನೆ ಬಂದು ಹೋಗೋ ಕೆಲಸ ಆಗಬಾರದು. ಸಮಸ್ಯೆಗಳು ಬಗೆಹರಿಯಲೇಬೇಕು ಎಂದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌, ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಇ.ತಿಮ್ಮಯ್ಯ, ಮಳವಳ್ಳಿ ಡಿವೈಎಸ್ಪಿ ನವೀನ್‌ಕುಮಾರ್‌, ಮದ್ದೂರು ಇನ್ಸ್‌ಪೆಕ್ಟರ್‌ ಸಂತೋಷ್‌, ಸಂಚಾರಿ ಠಾಣೆ ಪಿಎಸ್‌ಐಗಳಾದ ಸಿದ್ದರಾಜು, ಅಯ್ಯನ್‌ಗೌಡ ಇತರರಿದ್ದರು.

ಸಮಸ್ಯೆಗಳ ದಿವ್ಯ ದರ್ಶನ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಿಡಘಟ್ಟದಿಂದ ಗೆಜ್ಜಲಗೆರೆಗೆ ಬರುವಷ್ಟರಲ್ಲಿ ಐದಾರು ಕಡೆ ಕಾರಿನಿಂದ ಇಳಿದು ಎಡಿಜಿಪಿ ಅಲೋಕ್‌ಕುಮಾರ್‌ ಪರಿಶೀಲನೆ ನಡೆಸಿದ ವೇಳೆ ಹಲವು ಸಮಸ್ಯೆಗಳು ಅನಾವರಣವಾದವು. ಕೆಲವೆಡೆ ಸವೀರ್‍ಸ್‌ ರೋಡ್‌ಗಳಲ್ಲಿ ಫುಟ್‌ಪಾತ್‌ ನಿರ್ಮಿಸಿಲ್ಲ, ಬಸ್‌ ನಿಲ್ಲುವುದಕ್ಕೆ ವೇ-ಆಫ್‌ಗಳನ್ನು ನಿರ್ಮಾಣ ಮಾಡದಿರುವುದು, ಫುಟ್‌ಪಾತ್‌ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟಿಇರುವುದು, ಹಲವೆಡೆ ಅಂಡರ್‌ಪಾಸ್‌ ಮಾಡದೆ ಜನರಿಗಾಗುತ್ತಿರುವ ತೊಂದರೆ, ಕೆಲವು ರಸ್ತೆಗಳಿಗೆಎ ನೀರು ನುಗ್ಗುತ್ತಿರುವುದು, ಸವೀರ್‍ಸ್‌ ರಸ್ತೆಯಲ್ಲಿ ಸರಿಯಾಗಿ ಫೆನ್ಸ್‌ ಹಾಕದಿರುವುದು, ಯಾವ ಯಾವ ವಾಹನಗಳು ಯಾವ ಪಥದಲ್ಲಿ ಸಾಗಬೇಕು ಎಂಬುದನ್ನು ನಿರ್ದಿಷ್ಟವಾಗಿ ಅಳವಡಿಸದಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಅಲೋಕ್‌ಕುಮಾರ್‌ ಅವರ ಗಮನಕ್ಕೆ ಬಂದವು.

Bengaluru-Mysuru Expressway ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್: ಎಡಿಜಿಪಿ ಅಲೋಕ್‌

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹಿರಿಯ ಅಧಿಕಾರಿಗಳೊಂದಿಗೂ ಮಾತನಾಡಲಿದ್ದೇವೆ. ಎಲ್ಲಾ ಕೆಲಸಗಳು ಶೀಘ್ರಗತಿಯಲ್ಲಿ ಪೂರ್ಣಗೊಂಡರೆ ಮಾತ್ರ ಅಪಘಾತವನ್ನು ತಡೆಯಲು ಸಾಧ್ಯ. ಬಹಳಷ್ಟುಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ನಿರ್ದಿಷ್ಟಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಬೇಕಿದೆ. ಈ ಬಗ್ಗೆ ನಾವೂ ಒತ್ತಡ ಹಾಕುವುದಾಗಿ ಹೇಳಿದರು.

click me!