ಭೂಕುಸಿತದಿಂದ ಹಳಿ ಮೇಲೆ ಬಿದ್ದ ಮಣ್ಣು, ಇನ್ನು 15 ದಿನ ಮಂಗಳೂರು-ಬೆಂಗಳೂರು ರೈಲು ಸಂಚಾರ ಡೌಟ್!

By Gowthami K  |  First Published Jul 29, 2024, 4:13 PM IST

ಮೈಸೂರು ರೈಲ್ವೆ ವಿಭಾಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಭೂಕುಸಿತ ಉಂಟಾದ ಕಾರಣ ಎಲ್ಲ ರೈಲು ಸಂಚಾರವನ್ನು ಸದ್ಯದ ಮಟ್ಟಿಗೆ ಆ. 4ರ ವರೆಗೆ  ರದ್ದುಗೊಳಿಸಲಾಗಿದೆ. ಆದರೆ ಇನ್ನೂ 15 ದಿನ ಸಂಚಾರಕ್ಕೆ ತೊಡಕಾಗಬಹುದೆಂದು ರೈಲು ಇಲಾಖೆ ಮೂಲ ತಿಳಿಸಿದೆ.


ಮಂಗಳೂರು : ಶಿರಾಡಿ ಘಾಟ್‌ನ ಎಡಕುಮೇರಿ-ಕಡಗರಳ್ಳಿ ಮಧ್ಯೆ ಗಂಭೀರ ಭೂಕುಸಿತದಿಂದ ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಆ.10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಹಳಿಯ ಕೆಳಭಾಗದಲ್ಲಿ ಭಾರೀ ಆಳಕ್ಕೆ ಮಣ್ಣು ಜರಿದು ಹೋಗಿದ್ದು ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸಿವೆ, ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಹಗಲು ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗ ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ.

ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್‌ ಮೂಲಕವೇ ತರಬೇಕಾಗುತ್ತದೆ. ಅದೂ ಈಗಿನ ಸಂದರ್ಭದಲ್ಲಿ ಅಪಾಯವಿರುವ ಕಾರಣ ಎಚ್ಚರಿಕೆಯಿಂದ ವ್ಯಾಗನ್‌ಗಳ ಮುಂದೆ, ಹಿಂದೆ ಎರಡೆರಡು ಎಂಜಿನ್‌ ಹಾಕಿ ಬಂಡೆ, ಇನ್ನಿತರ ವಸ್ತುಗಳನ್ನು ಸಾಗಿಸಲಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು, ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ. ಸುಮಾರು 750ಕ್ಕೂ ಅಧಿಕ ಮಂದಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

Latest Videos

undefined

ಮಣ್ಣು ಕುಸಿತದಿಂದ ಬೆಂಗಳೂರು-ಮಂಗಳೂರು ಟ್ರೈನ್ ಸಂಚಾರ ಬಂದ್‌, ಪರ್ಯಾಯ ರೈಲು ಮಾರ್ಗ ಸೂಚಿಸಿದ ಇಲಾಖೆ

50 ಮೀಟರ್‌ ಆಳಕ್ಕೆ ಕುಸಿತ: ಆಗಾಗ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಗೆ ಗುಡ್ಡದ ಮಣ್ಣು ಮೆದುವಾಗಿರುವುದೇ ಭೂಕುಸಿತಕ್ಕೆ ಕಾರಣವೆಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿಯ ಪ್ರಪಾತದ ಬದಿಗೆ ಮಣ್ಣು ಸುಮಾರು 50-60 ಮೀಟರ್‌ನಷ್ಟು ಕುಸಿದು ಹೋಗಿದೆ. ಹಳಿಗೇ ಅಪಾಯ ಎದುರಾಗಿದೆ. ಪರ್ವತ ಬದಿಯಿಂದ ಭಾರಿ ಮಳೆಗೆ ನೀರು ಕೂಡಾ ಹರಿದು ಬರುವುದರಿಂದ ನಿರಂತರ ಕಾರ್ಯಾಚರಣೆಗೆ ಸವಾಲಾಗಿದೆ.ಹಳಿಯ ತಳಮಟ್ಟ ಗಟ್ಟಿಗೊಳಿಸಬೇಕಾದರೆ 20 ವ್ಯಾಗನ್‌ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್‌ ಮೆಷ್‌ ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತಾ ಬರಬೇಕಿದೆ. ಆದರೆ ಗುಡ್ಡದ ಮಣ್ಣು ಮೆತ್ತಗಾಗಿರುವುದನ್ನು ನೋಡಿದರೆ ಈ ಮೆಷ್‌ ಹಾಕುವುದೂ ಕಷ್ಟವಾಗಿ ಪರಿಣಮಿಸಿದೆ. ಮಳೆ ತೀವ್ರತೆಗೆ ಹಾಕಿದ ವಸ್ತುಗಳೆಲ್ಲವೂ ಕೊಚ್ಚಿಕೊಂಡು ಹೋಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಎಲ್ಲ ರೈಲುಗಳು ರದ್ದು: ಮೈಸೂರು ರೈಲ್ವೆ ವಿಭಾಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಭೂಕುಸಿತ ಉಂಟಾದ ಕಾರಣ ಎಲ್ಲ ರೈಲು ಸಂಚಾರವನ್ನು ಸದ್ಯದ ಮಟ್ಟಿಗೆ ಆ. 4ರ ವರೆಗೆ ರದ್ದುಗೊಳಿಸಲಾಗಿದೆ.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್ ರೈಲು,-ಕೆಎಸ್‌ಆರ್‌ ಎಕ್ಸ್‌ಪ್ರೆಸ್‌ ರೈಲು, ಮಂಗಳೂರು ಸೆಂಟ್ರಲ್ - ವಿಜಯಪುರ-ಬೆಂಗಳೂರು ಸೆಂಟ್ರಲ್‌ ಸ್ಪೆಷಲ್ ಎಕ್ಸ್‌ಪ್ರೆಸ್, ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರ್ಡೇಶ್ವರ-ಎಸ್‌ಎಂವಿಟಿ ಎಕ್ಸ್‌ಪ್ರೆಸ್, ಕ್ರಾ.ಸಂ.ರಾ ಬೆಂಗಳೂರು - ಕಾರವಾರ ಪಂಚಗಂಗಾ-ಕೆಎಸ್‌ಆರ್‌ ಎಕ್ಸ್‌ಪ್ರೆಸ್, ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್ 4,ಯಶವಂತಪುರ ಜಂಕ್ಷನ್ - ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್, ಯಶವಂತಪುರ ಜಂಕ್ಷನ್ -ಕಾರವಾರ-ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಪಡಿಸಲಾಗಿದೆ.

ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!

ವಿಮಾನ ಸಂಚಾರ ದರ ದುಪ್ಪಟ್ಟು!: ಮಂಗಳೂರು-ಬೆಂಗಳೂರು ನಡುವೆ ವಿಮಾನ ಯಾನ ದರವೂ ದುಬಾರಿಯಾಗಿದೆ. ಮಂಗಳೂರು-ಬೆಂಗಳ‍ೂರು ಮಧ್ಯೆ ಸಾಮಾನ್ಯ ದರಕ್ಕಿಂತ ಎರಡುಪಟ್ಟು ದರ ಹೆಚ್ಚಳವಾಗಿದೆ. ಖಾಸಗಿ ವಿಮಾನಗಳಲ್ಲಿ ವೆಬ್‌ಸೈಟ್‌ಗಳಲ್ಲಿ 7,604 ರು. ವರೆಗೆ (ಸಾಮಾನ್ಯವಾಗಿ 2000-2500 ರು. ಇರುತ್ತದೆ) ದರ ಹೆಚ್ಚಳ ತೋರಿಸಲಾಗಿದೆ.

ಅವಶ್ಯವಾದರೆ ಹೆಚ್ಚುವರಿ ಬಸ್‌: ಪ್ರಸಕ್ತ ಮಂಗಳೂರು-ಬೆಂಗಳೂರು ನಡುವೆ ಮಾಮೂಲಿನಂತೆ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಸದ್ಯಕ್ಕೆ ರೈಲು ಸಂಚಾರ ಇಲ್ಲದೇ ಇರುವುದರಿಂದ ಪ್ರಯಾಣಿಕರ ಬೇಡಿಕೆ ಅನುಸರಿಸಿ ಹೆಚ್ಚುವರಿ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಹಾಗೂ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ಮಂಗಳೂರು-ಬೆಂಗಳೂರಿಗೆ ವಯಾ ಶಿರಾಡಿ ಘಾಟ್‌, ಚಾರ್ಮಾಡಿ ಘಾಟ್‌ ಹಾಗೂ ಸಂಪಾಜೆ ಘಾಟ್‌ ಮೂಲಕ ಸಂಚಾರವಿದೆ.

750ಕ್ಕೂ ಅಧಿಕ ಸಿಬ್ಬಂದಿ, ಅಧಿಕಾರಿಗಳೂ ಮೊಕ್ಕಾಂ: ಸೋಮವಾರ ರಾತ್ರಿ 11 ಗಂಟೆಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ವಿಭಾಗದ ತಂತ್ರಜ್ಞರು ವರದಿ ನೀಡಿದ್ದರು. ಆದರೆ ತಂದು ಹಾಕಿರುವ ಮಣ್ಣು , ಕಲ್ಲುಗಳು ಕೂಡ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ತುರ್ತು ಸಂದರ್ಭ ಉಪಯೋಗಿಸಲು ಸುಮಾರು ವ್ಯಾಗನ್‌ಗಳಲ್ಲಿ ಜೆಲ್ಲಿಕಲ್ಲುಗಳನ್ನು ತುಂಬಿ ಸಕಲೇಶಪುರದಲ್ಲಿ ಸಿದ್ದವಾಗಿಟ್ಟುಕೊಂಡು ಇರುತ್ತೇವೆ. ಆದರೆ ಈ ಸಂಗ್ರಹ ಎಲ್ಲಿಗೂ ಸಾಕಾಗುವುದಿಲ್ಲ. ಬಂಡೆಕಲ್ಲುಗಳನ್ನು ಕೂಡ ಉಪಯೋಗಿಸುತ್ತಿದ್ದೇವೆ. ಭೂಕುಸಿತದಿಂದ ಸುಮಾರು 50 ಮೀಟರ್ ರೈಲ್ವೆ ಹಳಿ ಮಾರ್ಗ ಮಣ್ಣಿನ ಜತೆ ಕುಸಿದಿದ್ದು, ಈ ಭಾಗವನ್ನು ಕೆಳಗಿನಿಂದಲೇ ಮರುನಿರ್ಮಿಸಬೇಕಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಈ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ಒಟ್ಟು 430 ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕಾರ್ಯಪಡೆಯು ಹಗಲು ಪಾಳಿಯಲ್ಲಿ 200 ಸಿಬ್ಬಂದಿ, ರಾತ್ರಿ ಪಾಳಿಯಲ್ಲಿ 120 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 110 ಸಿಬ್ಬಂದಿಯನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಗಾಳಿ ತುಂಬಬಹುದಾದ ಟೆಂಟ್‌ಗಳ ನಿರ್ಮಾಣ, ರೈನ್‌ಕೋಟ್‌ಗಳು, ಸುರಕ್ಷತಾ ಬೂಟುಗಳು, ತಾತ್ಕಾಲಿಕ ಶೌಚಗೃಹ ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗಿದೆ.ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು, ದಾದಿಯರು ಒಳಗೊಂಡಿರುವ ವೈದ್ಯಕೀಯ ತಂಡವು ಸಂಪೂರ್ಣ ಶ್ರೇಣಿಯ ವೈದ್ಯಕೀಯ ಸರಬರಾಜುಗಳೊಂದಿಗೆ ಸೈಟ್‌ನಲ್ಲಿದೆ. ಎಂಟು ಆರೋಗ್ಯ ವೃತ್ತಿಪರರ ಹೆಚ್ಚುವರಿ ತಂಡವು ಸಕಲೇಶಪುರ ರೈಲು ನಿಲ್ದಾಣದಲ್ಲಿ ಬೀಡುಬಿಟ್ಟಿದ್ದು, ಎರಡು ಪಾಳಿಯಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ.ಸಂವಹನ ವ್ಯವಸ್ಥೆಗಳು ನಿರಂತರ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಹುಬ್ಬಳ್ಳಿಯ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ವಾರ್ ರೂಮ್‌ನಿಂದ ಕಾರ್ಯನಿರ್ವಹಿಸುತ್ತಿವೆ.

ಯಂತ್ರೋಪಕರಣಗಳು, ಅಗತ್ಯ ವಸ್ತು:ಆರು ಹಿಟಾಚಿ ಯಂತ್ರ ಹಳಿ ಮರುಸ್ಥಾಪಿಸಲು ತಡೆರಹಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿರುವ 3870 ಕ್ಯೂಬಿಕ್ ಮೀಟರ್ ಬಂಡೆಗಳ ಪೈಕಿ 670 ಕ್ಯೂಬಿಕ್ ಮೀಟರ್ ಪೂರೈಸಲಾಗಿದೆ. ದಕ್ಷಿಣ ರೈಲ್ವೆಯ ಶೋರ್ನೂರ್‌ನಿಂದ 20 ವ್ಯಾಗನ್ ಬಂಡೆಗಳನ್ನು ಪೂರೈಸಲಾಗಿದೆ. ಹೆಚ್ಚುವರಿಯಾಗಿ, ಅಮರಾವತಿ ಕಾಲೋನಿಯಿಂದ ಸೈಟ್‌ಗೆ 50 ಕ್ಯೂಬಿಕ್ ಮೀಟರ್ ಬಂಡೆಗಳು ಲ್ಲಿ ತಲುಪುವ ರಸ್ತೆ ಮಾರ್ಗದಲ್ಲಿದೆ. ಒಟ್ಟು 1 ಲಕ್ಷ ಮರಳಿನ ಚೀಲಗಳು (ತಲಾ 40 ಕೆಜಿ) ಅಗತ್ಯವಿದ್ದು, 15,000 ಚೀಲಗಳನ್ನು ಸೈಟ್‌ನಲ್ಲಿ ಇಳಿಸಲಾಗಿದೆ ಮತ್ತು 35,000 ಖಾಲಿ ಮರಳಿನ ಚೀಲಗಳು ಮಾರ್ಗದಲ್ಲಿವೆ. ಸುಮಾರು 50,000 ಮರಳಿನ ಚೀಲಗಳು (ತುಂಬಿದ ಅಥವಾ ಖಾಲಿಯಾಗಿರುವುದು) ಇನ್ನೂ ಅಗತ್ಯವಿದೆ, ಅದನ್ನು ಅಗತ್ಯವಿರುವಂತೆ ಕಳುಹಿಸಲಾಗುತ್ತದೆ.ಪರ್ಯಾಯ ಮಾರ್ಗ ರೈಲಿಗೆ ಬೇಡಿಕೆ

ಕರ್ನಾಟಕ ಕರಾವಳಿಯ ರೈಲು ಮಾರ್ಗ ಪೂರ್ಣ ವ್ತತ್ಯಯವಾಗಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗ ಸಹಜ ಸ್ಥಿತಿಗೆ ಮರಳುವ ತನಕ ಮಂಗಳೂರು- ವಿಜಯಪುರ ಮತ್ತು ಬೆಂಗಳೂರು- ಮುರ್ಡೇಶ್ವರ ಮಾರ್ಗದ ಪ್ರಯಾಣಿಕರಿಗೆ ಹುಬ್ಬಳ್ಳಿ- ಮಡಗಾಂವ್ ಮೂಲಕ ರಾಜಧಾನಿಗೆ ಪರ್ಯಾಯ ಮಾರ್ಗದಲ್ಲಿ ರೈಲು ಓಡಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ದಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ವಿನಂತಿಸಿ ಕರ್ನಾಟಕ ರೈಲ್ವೆ ಬಳಕೆದಾರರ ಸಂಘ ಟ್ವೀಟ್ ಮಾಡಿದೆ.

click me!