
ಬೆಂಗಳೂರು (ಡಿ.5): ನಗರದ ಪಬ್‌ವೊಂದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಹಿಂದೂ ಮುಖಂಡರೊಬ್ಬರು ಪೊಲೀಸ್ ಆಯುಕ್ತರು ಮತ್ತು ಡಿಜಿಪಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.
ಆರ್ಯನ್ ಖಾನ್ ಅಸಭ್ಯ ವರ್ತನೆ ವಿರುದ್ಧ ಹಿಂದೂ ಮುಖಂಡ ತೇಜಸ್ ಗೌಡ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ಆರ್ಯನ್ ಖಾನ್, ಶಾಸಕರ ಪುತ್ರರಾದ ಮೊಹಮ್ಮದ್ ನಳಪಾಡ್ ಮತ್ತು ಝಾಯಿದ್ ಖಾನ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಆರ್ಯನ್ ಖಾನ್ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಶಾಸಕರ ಪುತ್ರರು ಆರ್ಯನ್ ಖಾನ್ ದುರ್ವರ್ತನೆ ತೋರುತ್ತಿರುವಾಗ ನಗುತ್ತಾ ನಿಂತಿದ್ದರು. ಸಾರ್ವಜನಿಕ ಜವಾಬ್ದಾರಿ ಉಳ್ಳವರಾಗಿದ್ದರೂ, ಅವರು ಈ ಅಸಭ್ಯ ವರ್ತನೆಯನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಲಾಗಿದೆ.
ತೇಜಸ್ ಗೌಡ ಅವರು ಪೊಲೀಸರು ತಕ್ಷಣ ಹೊಟೇಲ್‌ನ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಕೂಲಂಕಷವಾಗಿ ತನಿಖೆ ನಡೆಸಬೇಕು. ಅಲ್ಲದೆ, ನಡೆದಿದ್ದ ಪಾರ್ಟಿ ಕೂಡ ಅನುಮಾನಾಸ್ಪದವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದ್ವಂದ್ವ ಹೇಳಿಕೆ ನೀಡಿರುವ ಯುವಕ:
ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪಾರ್ಟಿಯ ಸಂದರ್ಭದಲ್ಲಿ ಆರ್ಯನ್ ಖಾನ್ ಒಬ್ಬ ಯುವಕನಿಗೆ ಮಧ್ಯದ ಬೆರಳು ತೋರಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಟೆಕ್ನಿಷಿಯನ್ ಯುವಕನನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಕಾರ್ಯಕ್ರಮದ ದಿನ ಟೆಕ್ನಿಷಿಯನ್ ಆಗಿ ಕೆಲಸಕ್ಕೆ ಬಂದಿದ್ದ ಯುವಕನಿಗೆ ಆರ್ಯನ್ ಖಾನ್ ಅಸಭ್ಯ ಸಂಜ್ಞೆ ತೋರಿಸಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಆದರೆ, ವಿಚಾರಣೆ ವೇಳೆ ಯುವಕನು ಘಟನೆಯ ಬಗ್ಗೆ ಗಾಬರಿಗೊಂಡು ದ್ವಂದ್ವ ಹೇಳಿಕೆ ನೀಡಿದ್ದಾನೆ. 'ನಾನು ಪಬ್‌ಗೆ ಹೋಗಿದ್ದು ನಿಜ, ಕೆಲಸ ಮಾಡಿ ಎಂಜಾಯ್ ಮಾಡಿ ಬಂದೆ. ಆದರೆ ಆ ರೀತಿ ಘಟನೆ ನಡೆದ ಬಗ್ಗೆ ನನಗೆ ಗಮನಕ್ಕೆ ಬಂದಿಲ್ಲ. ಮಾಧ್ಯಮದಲ್ಲಿ ನೋಡಿ ನನಗೂ ವಿಷಯ ಗೊತ್ತಾಯಿತು ಎಂದು ಯುವಕ ಹೇಳಿದ್ದಾನೆ.
ಸದ್ಯ ಪೊಲೀಸರು ಘಟನೆಯ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದು, ಸತ್ಯಾಂಶ ಹೊರಬರಲು ಸಿಸಿಟಿವಿ ದೃಶ್ಯಗಳು ಮತ್ತು ಇತರ ಸಾಕ್ಷಿಗಳಿಗಾಗಿ ಹುಡುಕುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳು ಲಭ್ಯವಾದ ನಂತರ ಇನ್ನಷ್ಟುಮಾಹಿತಿ ಬಹಿರಂಗಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ