
ಮುಖಾಮುಖಿ- ಪಿ.ಸಿ. ರಾವ್, ಗೌರವಾಧ್ಯಕ್ಷರು, ಬೆಂಗಳೂರು ಹೊಟೇಲ್ ಮಾಲೀಕರ ಸಂಘ
- ಮಂಜುನಾಥ ನಾಗಲೀಕರ್
ಇಸ್ರೇಲ್- ಇರಾನ್ ಯುದ್ಧದಿಂದಾಗಿ ಇಡೀ ವಿಶ್ವವನ್ನು ಇದೀಗ ‘ಗ್ಯಾಸ್ ಟ್ರಬಲ್’ ಕಾಡುತ್ತಿದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ನಗರದ ಬಹುತೇಕ ಉದ್ಯಮಗಳು ಎಲ್‌ಪಿಜಿ ಪೂರೈಕೆ ಕೊರತೆಯಿಂದ ಬಾಧಿತವಾಗಿದ್ದರೂ ಅತಿ ಹೆಚ್ಚಿನ ಹೊಡೆತ ತಿನ್ನುತ್ತಿರುವುದು ಹೋಟೆಲ್ ಉದ್ಯಮ. ರಾಜ್ಯದಲ್ಲಿ ಸುಮಾರು 1.18 ಲಕ್ಷ ಹೋಟೆಲ್‌ಗಳಿದ್ದು, ಈ ಹೋಟೆಲ್‌ಗಳಿಗೆ ಅಗತ್ಯವಿರುವ ಗ್ಯಾಸ್ ಪೈಕಿ ಶೇ.20ಕ್ಕಿಂತ ಕಡಿಮೆ ಪೂರೈಕೆಯಾಗುತ್ತಿದೆ. ಈ ಕೊರತೆಯಿಂದಾಗಿ ಹಲವು ಹೋಟೆಲ್‌ಗಳು ಮುಚ್ಚಿದ್ದರೆ, ಬಹುತೇಕ ಹೋಟೆಲ್‌ಗಳಲ್ಲಿ ಮೆನು ಕಡಿತ ಉಂಟಾಗಿದೆ. ಹೋಟೆಲ್ ಉದ್ಯಮಕ್ಕೆ ಈಗಾಗಲೇ 100 ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಹೋಟೆಲ್ ಊಟದ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿದೆ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು. ಇದು ನಿಜವೇ? ಗ್ಯಾಸ್ ಟ್ರಬಲ್ ಹೋಟೆಲ್ ಉದ್ಯಮವನ್ನು ಎಷ್ಟು ಕಾಡಿದೆ? ಹೋಟೆಲ್ ಮಾಲೀಕರು, ಲಕ್ಷಾಂತರ ಕಾರ್ಮಿಕರು ಮತ್ತು ಗಿಗ್ ವರ್ಕರ್ಸ್ ಮೇಲೆ ಆಗುತ್ತಿರುವ ಪರಿಣಾಮವೇನು ಎಂಬುದರ ಜತೆಗೆ ಹೋಟೆಲ್ ಉದ್ಯಮಿಗಳು ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರಂತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್.
ಸ್ಟಾರ್ ಹೋಟೆಲ್‌ಗಳು ಸೇರಿ ಸುಮಾರು 35,000 ದಿಂದ 40,000 ಹೋಟೆಲ್‌ಗಳು ಬೆಂಗಳೂರಿನಲ್ಲಿವೆ. ಸುಮಾರು 6.50 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಸುಮಾರು 1.18 ಲಕ್ಷ ಹೋಟೆಲ್‌ಗಳಿವೆ ಎಂಬ ಮಾಹಿತಿ ಇದೆ. ನಿಖರವಾದ ಮಾಹಿತಿ ಇಲ್ಲ. ಸಾಕಷ್ಟು ಹೋಟೆಲ್‌ಗಳು ನಮ್ಮ ಸಂಘದ ಸದಸ್ಯರೂಆಗಿಲ್ಲ. ಈ ಎಲ್ಲಾ ಹೋಟೆಲ್‌ಗಳಲ್ಲಿ ಶೇ.50ರಷ್ಟು ವ್ಯಾಪಾರ ಕುಸಿದಿದೆ. ಅನೇಕ ಹೋಟೆಲ್‌ಗಳು ಈಗಾಗಲೇ ಬಂದ್ ಆಗಿವೆ.
ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ ಒಟ್ಟಾರೆ ಗ್ಯಾಸ್‌ನಲ್ಲಿ ಶೇ.20ರಷ್ಟು ಮಾತ್ರ ಅನಿಲ ಕಂಪನಿಗಳು ನೀಡುತ್ತಿವೆ. ಅದರಲ್ಲಿ ಶೇ.2ರಷ್ಟನ್ನು ಮಾತ್ರ ಹೋಟೆಲ್‌ಗಳಿಗೆ ಪೂರೈಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅಂದರೆ ದಿನವೊಂದಕ್ಕೆ ಇಡೀ ರಾಜ್ಯಕ್ಕೆ 1,000 ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ. ಈ ಲೆಕ್ಕದಲ್ಲಿ ನೋಡಿದರೆ ಒಂದು ಹೋಟೆಲ್‌ಗೆ ತಿಂಗಳಿಗೆ 1 ಸಿಲಿಂಡರ್ ನೀಡಿದಂತಾಗುತ್ತದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕಾರ್ಮಿಕರಿಗೆ ಊಟ ತಯಾರಿಸಲು ಸಾಕಾಗುವುದಿಲ್ಲ.
ಈವರೆಗೆ 100 ಕೋಟಿ ರು.ಗೂ ಹೆಚ್ಚು ನಷ್ಟ ಹೋಟೆಲ್‌ಗಳಿಗೆ ಆಗಿದೆ. ಎಲ್ಲಾ ಹೋಟೆಲ್‌ಗಳು ಬಂದ್ ಆಗದೇ ಇದ್ದರೂ ಮೆನು ಕಡಿತವಾಗಿರುವುದರಿಂದ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಸರ್ಕಾರಗಳಿಗೆ ಸಂಗ್ರಹವಾಗುವ ಆದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?
ಹೋಟೆಲ್ ಗ್ರಾಹಕರಿಗೆ ವಿಧಿಸುವ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿಯಿಂದ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರು. ಆದಾಯ ಕೊರತೆಯಾಗಲಿದೆ. ಅಲ್ಲದೇ, ವಾಣಿಜ್ಯ ಸಿಲಿಂಡರ್‌ಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ಇದೆ. ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಗಳ ಕೆಲಸಗಳ ಮೇಲೂ ಪರಿಣಾಮ ಬೀರುತ್ತದೆ.
ಹೋಟೆಲ್ ನಡೆಸುವವರಿಗೆ ಯಾವೆಲ್ಲಾ ಸಮಸ್ಯೆಗಳು ಆಗುತ್ತಿವೆ?
ಗ್ಯಾಸ್ ಪೂರೈಕೆ ಕೊರತೆಯಿಂದ ಮೊದಲು ತೊಂದರೆ ಮಾಲೀಕರಿಗೆ ಆಗುತ್ತಿದೆ. ಎಂದಿನಂತೆ ಬಾಡಿಗೆ ಕಟ್ಟಬೇಕು. ಅದನ್ನು ಯಾರೂ ಬಿಟ್ಟು ಕೊಡುವುದಿಲ್ಲ, ಸ್ವಲ್ಪ ವಿನಾಯಿತಿ ನೀಡುವುದಿಲ್ಲ. ನಿಶ್ಚಿತ ವಿದ್ಯುತ್ ಶುಲ್ಕ ಕಟ್ಟಲೇಬೇಕು. ಕಾರ್ಮಿಕರಿಗೆ ಸಂಬಳ, ಇಎಸ್‌ಐ, ಪಿಎಫ್ ನೀಡಬೇಕು. ಎಂದಿನಂತೆ ಉಳಿದುಕೊಳ್ಳಲು ಕೊಠಡಿ, ಮನೆ, ಪಿ.ಜಿ ಸೌಲಭ್ಯ ನೀಡುವುದನ್ನು ಮುಂದುವರೆಸಬೇಕು. ಊಟ, ತಿಂಡಿ ವ್ಯವಸ್ಥೆ ಮಾಡಬೇಕು. ಟ್ರೇಡ್ ಲೈಸನ್ಸ್ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳನ್ನು ಎಂದಿನಂತೆ ಕಟ್ಟಬೇಕು.
ಕಾರ್ಮಿಕರಿಗೆ ಯಾವ ರೀತಿ ತೊಂದರೆ ಆಗುತ್ತಿದೆ?
ಕೆಲಸ ಮಾಡುವ ಕಾರ್ಮಿಕರಿಗೆ ಒಂದಷ್ಟು ಟಿಪ್ಸ್ ಸಿಗುತ್ತಿತ್ತು. ಈಗ ಅದು ಇಲ್ಲವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕೆಲಸ ಇಲ್ಲದಂತಾಗುತ್ತದೆ. ಇನ್ನು ಹೆಚ್ಚು ದಿನ ಕೆಲಸವಿಲ್ಲದೇ ಇದ್ದಾಗ ಕಾರ್ಮಿಕರು ನಗರಗಳಲ್ಲಿ ಇರಲು ಬಯಸುವುದಿಲ್ಲ. ತಮ್ಮ ಊರುಗಳಿಗೆ ಮರಳುತ್ತಾರೆ. ಕೆಲವರು ಬಾರದೇ ಇರಬಹುದು. ಹೀಗಾಗಿ, ಹೋಟೆಲ್ ಉದ್ಯಮದಲ್ಲಿ ಕಾರ್ಮಿಕರನ್ನು ಕಳೆದುಕೊಂಡರೆ ನಷ್ಟ. ಮೊದಲೇ ಕಾರ್ಮಿಕರ ಕೊರತೆಯಿದೆ. ಇರುವವರೂ ಕೂಡ ಹೋದರೆ ಮಾಲೀಕರಿಗೆ ಬಹಳ ಕಷ್ಟವಾಗುತ್ತದೆ.
ನಿಯಮಿತವಾಗಿ ಬರುವ ಗ್ರಾಹಕರ ಕತೆ ಏನು?
ಹೋಟೆಲ್ ಉದ್ಯಮ ನಿಂತಿರುವುದು ಮಾಲೀಕ, ಕಾರ್ಮಿಕರು ಮತ್ತು ನೆಚ್ಚಿನ ಗ್ರಾಹಕರ ಮೇಲೆ. ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಬ್ಯಾಚುಲರ್‌ಗಳಿಗೆ ತೊಂದರೆಯಾಗುತ್ತಿದೆ. ನಮ್ಮ ಹೋಟೆಲ್‌ಗಳಲ್ಲಿ ವಿಧ ವಿಧವಾದ ತಿಂಡಿಗಳನ್ನು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದ್ದೇವೆ. ಈ ಕಾರಣಕ್ಕೆ ನಮ್ಮಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗಳಿವೆ. ಆಹಾರ ಲಭ್ಯವಾಗದೆ ಗ್ರಾಹಕರು ಹೋಟೆಲ್‌ಗಳಿಂದ ವಿಮುಖರಾಗುವುದು ಬಹಳಷ್ಟು ರೀತಿಯಲ್ಲಿ ನಷ್ಟವಾಗುತ್ತದೆ.
ಬೆಂಗಳೂರಿನಲ್ಲಿ ಎಷ್ಟು ಜನ ಗ್ರಾಹಕರು ಹೊಟೇಲ್ ಮೇಲೆ ಅವಲಂಬಿತರಾಗಿದ್ದಾರೆ?
ಉದ್ಯೋಗ, ಸ್ವಂತ ವ್ಯಾಪಾರ ಸೇರಿದಂತೆ ಅನೇಕ ಕಾರಣಗಳಿಗೆ ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಲಕ್ಷಾಂತರ ಜನ ಬಂದಿದ್ದಾರೆ. ಬೆಂಗಳೂರು ಒಂದು ಕುಟುಂಬ ಇದ್ದಂತೆ. ಇವರೆಲ್ಲರೂ ಒಂದಲ್ಲಾ ಒಂದು ರೀತಿ, ಒಂದು ದಿನದಲ್ಲಿ ಒಂದು ಹೊತ್ತಿಗಾದರೂ ಹೋಟೆಲ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮ ಲೆಕ್ಕಾಚಾರದ ಪ್ರಕಾರ, ನಗರದ ಶೇ.50ಕ್ಕಿಂತ ಹೆಚ್ಚು ಜನ ಹೋಟೆಲ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಒಂದು ಸಮಯದಲ್ಲಿ ಚಹಾ ಕುಡಿಯುವವರಿಂದ ಹಿಡಿದು, ಪ್ರತಿನಿತ್ಯ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಎರಡು ಹೊತ್ತಿನ ಊಟ ಮಾಡುವವರೂ ಇದ್ದಾರೆ.
ಹೋಟೆಲ್‌ಗಳ ಪರಿಸ್ಥಿತಿ ಈಗ ಹೇಗಿದೆ?
ಒಂದೊಂದಾಗಿ ಹೋಟೆಲ್‌ಗಳು ಮುಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಗ್ಯಾಸ್ ಪೂರೈಸದಿದ್ದರೆ ಇನ್ನಷ್ಟು ಕಷ್ಟವಾಗುತ್ತದೆ. ಸಾಕಷ್ಟು ಪಿಜಿಗಳು, ಕಂಪನಿ, ಕಚೇರಿಗಳು, ಕಾರ್ಯಕ್ರಮಗಳಿಗೆ ಸಮೀಪದ ಹೋಟೆಲ್‌ಗಳಿಂದ ಆಹಾರ ಪೂರೈಕೆಯಾಗುತ್ತಿತ್ತು. ಅದಕ್ಕೆಲ್ಲ ಸಮಸ್ಯೆಯಾಗಿದೆ. ಅವರಿಗೆ ಈಗ ತಿಂಡಿ, ಊಟ ಸಿಗದಂತಾಗಿದೆ.
ಹೋಟೆಲ್ ಉದ್ಯಮ ಅವಲಂಬಿತ ಬೇರೆ ವ್ಯಾಪಾರಗಳ ಮೇಲೆ ಬೀರಿರುವ ಪರಿಣಾಮ ಏನು?
ಹೋಟೆಲ್ ಅವಲಂಬಿತ ಅನೇಕ ಉದ್ಯಮಗಳಿಗೆ ತೊಂದರೆಯಾಗುತ್ತಿದೆ. ಕಿರಾಣಿ ಅಂಗಡಿಗಳು, ಸೊಪ್ಪು, ತರಕಾರಿ ಮತ್ತು ಹಣ್ಣುಗಳು, ಎಣ್ಣೆ, ಮಾಂಸ, ಕುಕ್ಕುಟೋದ್ಯಮ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಬ್ರೆಡ್ ಸೇರಿದಂತೆ ಬೇಕರಿ ಉತ್ಪನ್ನಗಳು, ಕುಡಿಯುವ ನೀರಿನ ಬಾಟಲಿ, ನೀರಿನ ಟ್ಯಾಂಕರ್, ಪ್ಯಾಕಿಂಗ್ ಮೆಟಿರಿಯಲ್, ನ್ಯಾಪ್ಕಿನ್, ಲಾಂಡ್ರಿ, ಬೀಡ ಅಂಗಡಿ ಸೇರಿದಂತೆ ಇನ್ನಿತರ ಅನೇಕ ಅವಲಂಬಿತರ ವ್ಯಾಪಾರ ಕುಂಠಿತವಾಗಿದೆ. ಅವರು ಗೋಳಾಡುತ್ತಿದ್ದಾರೆ.
ಹೋಟೆಲ್ ಸಿಬ್ಬಂದಿಯಲ್ಲಿ ಕನ್ನಡದವರು ಗಣನೀಯವಾಗಿ ಕಡಿಮೆಯಾಗುತ್ತಿದ್ದಾರಲ್ಲ, ಏಕೆ?
ಹೋಟೆಲ್‌ಗಳಲ್ಲಿ ಕನ್ನಡಿಗರ ಸಂಖ್ಯೆ ಶೇ.50ರಷ್ಟು ಕಡಿಮೆ ಆಗಿದೆ.ಹೋಟೆಲ್ ಕೆಲಸಗಳಿಗೆ ಕನ್ನಡದವರು ಬರುತ್ತಿಲ್ಲ. ಅವರಿಗೆ ಇನ್ನೂ ಒಳ್ಳೆಯ ಉದ್ಯೋಗಗಳು ಸಿಗುತ್ತಿದ್ದು, ಅವಕಾಶಗಳು ಇವೆ. ಮೊದಲಿನಂತೆ ಹೆಚ್ಚಿನ ಸಂಖ್ಯೆಯ ಜನ ಬರುತ್ತಿಲ್ಲ. ಆದರೆ, ಉಡುಪಿ, ಕುಂದಾಪುರ ಕಡೆಯವರು ಸಾಕಷ್ಟು ಇದ್ದಾರೆ. ಮೇಲ್ವಿಚಾರಣೆ, ಮ್ಯಾನೇಜರ್ ಉದ್ಯೋಗಗಳಿಗೆ ಬರುತ್ತಿದ್ದಾರೆ. ಉದ್ಯೋಗವಕಾಶಗಳು ಸಾಕಷ್ಟು ಇವೆ.
ಕಡಿಮೆ ವೇತನಕ್ಕೆ ದುಡಿಯುತ್ತಾರೆ ಎನ್ನುವ ಕಾರಣಕ್ಕೆ ಉತ್ತರ ಭಾರತೀಯರನ್ನೇ ಹೋಟೆಲ್‌ಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ ಎಂಬ ಆರೋಪವಿದೆ
ಹಾಗೇನೂ ಇಲ್ಲ. ಕನ್ನಡಿಗರಿಗೆ ನೀಡುವ ವೇತನವನ್ನೇ ಉತ್ತರ ಭಾರತೀಯರಿಗೆ ನೀಡಲಾಗುತ್ತದೆ. ಕೆಲವು ಕಡೆ ಉತ್ತರ ಭಾರತೀಯರೇ ಹೆಚ್ಚು ವೇತನ ಡಿಮ್ಯಾಂಡ್ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ಒಂದೇ ಮಾದರಿಯ ವೇತನ ನೀಡಲಾಗುತ್ತದೆ. ಆದರೂ, ಸ್ವಚ್ಛತೆ, ಸಪ್ಲೈ ಹುದ್ದೆಗಳಿಗೆ ಕನ್ನಡಿಗರು ಬರುವುದು ಕಡಿಮೆಯಾಗಿದೆ. ಮೇಲಿನ ಹಂತದ ಹುದ್ದೆಗಳಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಇನ್ನು ಬೆಂಗಳೂರು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಬಹುತೇಕ ಕನ್ನಡಿಗರೇ ಬಹುತೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಹೋಟೆಲ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಳ್ಳುವುದರಿಂದ ಕನ್ನಡದ ವಾತಾವರಣ ಕಡಿಮೆಯಾಗುತ್ತಿದೆ.
ಹೋಟೆಲ್ ನಡೆಸುತ್ತಿರುವವರಲ್ಲಿ ಅರ್ಧದಷ್ಟು ಜನರು ಹೋಟೆಲ್‌ಗಳಲ್ಲಿ ಬೇರೆ ಬೇರೆ ರೀತಿಯ ಕೆಲಸ ಮಾಡಿದವರಾಗಿದ್ದಾರೆ. ಕೆಲವು ವರ್ಷಗಳ ಅನುಭವ ಪಡೆದು ಸ್ವಂತ ಹೋಟೆಲ್, ಬೇಕರಿ ನಡೆಸಿ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇವರಿಂದ ಖಂಡಿತ ಕನ್ನಡದ ಬೆಳವಣಿಗೆ ಆಗುತ್ತದೆ. ಕನ್ನಡ ವಾತಾವರಣಕ್ಕೆ ಧಕ್ಕೆ ಆಗುವುದಿಲ್ಲ.\B\B
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತರ ಭಾರತೀಯರೇ ಹೋಟೆಲ್ ನಡೆಸಲು ಆರಂಭಿಸಿದರೆ ಕನ್ನಡಿಗರ ಕೈಯಿಂದ ಹೋಟೆಲ್ ಉದ್ಯಮ ಜಾರಿ ಹೋಗುವುದಿಲ್ಲವೇ?
ಹೋಟೆಲ್ ಉದ್ಯಮವೂ ಬಹುತೇಕ ಕನ್ನಡಿಗರೇ ಇದ್ದಾರೆ. ಕಾರ್ಮಿಕರಲ್ಲಿ ಮೇಲಿನ ಹಂತದ ಹುದ್ದೆಗಳಲ್ಲಿ ಬಹುತೇಕರು ಕನ್ನಡಿಗರೇ ಇದ್ದಾರೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಹೋಟೆಲ್‌ಗಳಲ್ಲಿ ಅನುಭವ ಹೊಂದಿದವರು ಸ್ವಂತ ಹೊಟೇಲ್, ಬೇಕರಿ, ಕೆಫೆಟೇರಿಯಾ, ಕೇಟರಿಂಗ್ ಮಾಡುತ್ತಿದ್ದಾರೆ. ಸಾಕಷ್ಟು ಜನರು ಬೇರೆ ಬೇರೆ ವ್ಯಾಪಾರ, ಉದ್ಯಮ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇವರಿಂದ ಕನ್ನಡ ಇನ್ನಷ್ಟು ಬೆಳೆಯುತ್ತದೆ.
ಗಿಗ್ ವರ್ಕರ್ಸ್‌ಗಳಿಗೆ ಸಮಸ್ಯೆ ಆಗುತ್ತಿದೆಯೇ?
ಬೆಂಗಳೂರಿನಲ್ಲಿ ಸ್ವಿಗ್ಗಿ, ಜೊಮ್ಯಾಟೋ ಸೇರಿದಂತೆ ಮನೆಗಳು, ಕಚೇರಿಗೆ ಆಹಾರವನ್ನು ಸಾಗಿಸುವ ಸುಮಾರು 40,000 ಗಿಗ್ ಕಾರ್ಮಿಕರಿದ್ದಾರೆ. ಸಂಪೂರ್ಣವಾಗಿ ಇದನ್ನೇ ನಂಬಿಕೊಂಡವರು ಮತ್ತು ಪಾರ್ಟ್ ಟೈಮ್ ಕೆಲಸ ಮಾಡುವವರು ಇದ್ದಾರೆ. ಹೋಟೆಲ್‌ಗಳು ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಅವರ ಆದಾಯವೂ ಕುಸಿತವಾಗಿದೆ.
ಹೋಟೆಲ್‌ಗಳಲ್ಲಿ ಸೌದೆ ಒಲೆ ಮತ್ತು ಎಲೆಕ್ಟ್ರಿಕ್ ಸ್ಟೌ ಮತ್ತು ಬಯೋಗ್ಯಾಸ್ ಬಳಕೆ ಅಳವಡಿಸಿಕೊಳ್ಳಬಹುದಲ್ಲವೇ?
ಸೌದೆ ಒಲೆ ಬಳಸಲು ಅನೇಕ ಹೋಟೆಲ್‌ಗಳಲ್ಲಿ ಅವಕಾಶ ಇಲ್ಲ. ಅವಕಾಶ ಇರುವ ಕಡೆ ಹೊಗೆ ತುಂಬಿಕೊಳ್ಳುತ್ತದೆ, ಆಗ ಗ್ರಾಹಕರು ಕುಳಿತುಕೊಳ್ಳುವುದಿಲ್ಲ. ಅನೇಕ ಸಿಬ್ಬಂದಿಗೆ ಸೌದೆ ಬಳಕೆಯ ಅನುಭವ ಇಲ್ಲ. ಎಲೆಕ್ಟ್ರಿಕ್ ಸ್ಟೌಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲು ಆಗುವುದಿಲ್ಲ. ಬಯೋಗ್ಯಾಸ್ ನಿರ್ವಹಣೆ ಸವಾಲಿನದ್ದಾಗಿದೆ. ಹೆಚ್ಚು ಜಾಗ, ನಿರಂತರವಾಗಿ ತ್ಯಾಜ್ಯ ಬೇಕು. ಅಲ್ಲದೇ, ಅದರಿಂದ ವಾಸನೆ ಸೃಷ್ಟಿಯಾಗುತ್ತದೆ. ಸಾಕಷ್ಟು ಸ್ಥಳಾವಕಾಶ ಬೇಕು. ಮುಂಬರುವ ದಿನಗಳಲ್ಲಿ ಈ ಕುರಿತು ಚಿಂತಿಸಬಹುದಾಗಿದೆ.
ಸರ್ಕಾರದಿಂದ ನಿರೀಕ್ಷೆಗಳು ಏನು?
ಗ್ಯಾಸ್ ಪೂರೈಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಮುಖ್ಯ ಬೇಡಿಕೆ. ರಾಜ್ಯಕ್ಕೆ ಪೂರೈಕೆಯಾಗುತ್ತಿರುವ ಗ್ಯಾಸ್‌ನಲ್ಲಿ ಶೇ.6.50ರಷ್ಟಾದರೂ ನೀಡಿ ಎನ್ನುವುದು ನಮ್ಮ ಬೇಡಿಕೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ನೆರೆ ರಾಜ್ಯ ತಮಿಳುನಾಡಿನಲ್ಲಿ ಪ್ರತಿ ಯುನಿಟ್ ವಿದ್ಯುತ್‌ಗೆ 2 ರು. ಸಬ್ಸಿಡಿ, ವಿನಾಯಿತಿಯನ್ನು ಸರ್ಕಾರ ಘೋಷಿಸಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ವಿನಾಯಿತಿ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ