
ಬೆಂಗಳೂರು (ಫೆ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆನ್‌ಲೈನ್ ಪೇಮೆಂಟ್ ಹೆಸರಿನಲ್ಲಿ ವ್ಯಾಪಾರಿಗಳಿಗೆ ಪಂಗನಾಮ ಹಾಕುವ ಜಾಲವೊಂದು ಸಕ್ರಿಯವಾಗಿದೆ. ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ಸಿದ್ಧರಾಜು ಅವರಿಗೆ ಸೇರಿದ 'ಕಲರ್ಸ್ ಮೊಬೈಲ್' ಶಾಪ್‌ನಲ್ಲಿ ಇಂತಹದ್ದೇ ಒಂದು ಶಾಕಿಂಗ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್ ಖರೀದಿಸುವ ಸೋಗಿನಲ್ಲಿ ಬಂದ ವಂಚಕನೊಬ್ಬ ಮೊಬೈಲ್ ಶಾಪ್ ಮಾಲೀಕನಿಗೆ ಸಾವಿರಾರು ರೂಪಾಯಿ ವಂಚಿಸಿ ಪರಾರಿಯಾಗಿದ್ದಾನೆ.
ಫೆಬ್ರವರಿ 12 ರಂದು ಅಭಿಷೇಕ್ ಎಂಬ ಯುವಕ ರಾಜಾಜಿನಗರದ ಕಲರ್ಸ್ ಮೊಬೈಲ್ ಶಾಪ್‌ಗೆ ಮೊಬೈಲ್ ಖರೀದಿಸುವ ಸೋಗಿನಲ್ಲಿ ಬಂದಿದ್ದಾನೆ. ಎರಡು ದುಬಾರಿ ಬೆಲೆಯ ಮೊಬೈಲ್‌ಗಳನ್ನು ಸೆಲೆಕ್ಟ್ ಮಾಡಿರುವ ವಂಚಕ, ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದಾನೆ. ಸುಮಾರು 76 ಸಾವಿರ ರೂಪಾಯಿ ಬಿಲ್ ಆಗಿದ್ದು, ಅದನ್ನು ಪಾವತಿಸಿದಂತೆ ನಕಲಿ ಸ್ಕ್ರೀನ್ ಶಾಟ್ ಸಿದ್ಧಪಡಿಸಿ ಮಾಲೀಕರಿಗೆ ತೋರಿಸಿದ್ದಾನೆ. ಆದರೆ ವಂಚಕನ ಬಗ್ಗೆ ತಿಳಿಯದೇ ಹಣ ಬಂದಿದೆ ಎಂದು ನಂಬಿದ ಮಾಲೀಕ ಎರಡು ಮೊಬೈಲ್‌ಗಳನ್ನು ವಂಚಕನಿಗೆ ನೀಡಿದ್ದಾರೆ. ಆದರೆ ಆಮೇಲೆ ಅಕೌಂಟ್ ಪರಿಶೀಲಿಸಿದಾಗ ಮಾಲೀಕನಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ವಂಚಕ ಎರಡು ಹೊಸ ಮೊಬೈಲ್‌ಗಳೊಂದಿಗೆ ಅಂಗಡಿಯಿಂದ ಹೋದ ಕೆಲ ಹೊತ್ತಿನ ನಂತರ ಸಿದ್ಧರಾಜು ಅವರು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮೆಯಾಗಿಲ್ಲದಿರುವುದು ಪತ್ತೆಯಾಗಿದೆ. ಆತ ತೋರಿಸಿದ ಪೇಮೆಂಟ್ ಸ್ಕ್ರೀನ್ ಶಾಟ್ ಸಂಪೂರ್ಣವಾಗಿ ನಕಲಿ ಎಂಬುದು ತಿಳಿದು ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಈ ವಂಚನೆಯ ಕುರಿತು ತಕ್ಷಣವೇ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಅಭಿಷೇಕ್ ಪತ್ತೆಗೆ ಜಾಲ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ