ರಾಜ್ಯವನ್ನೇ ನಡುಗಿಸಿದೆ ಕೊರೋನಾ| ಹೀಗಿದ್ದರೂ ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿರುವ ಜನ| ಕೊರೋನಾದಿಂದಾಗಿ ಆರೋಗ್ಯ ಸಿಬ್ಬಂದಿ ಪಾಡು ಕೇಳುವವರಿಲ್ಲ| ವಿದೇಶದಲ್ಲಿ ಕಂಡು ಬರುತ್ತಿದ್ದಂತಹ ದೃಶ್ಯ ನಮ್ಮ ಬೆಂಗಳೂರಿನಲ್ಲಿ
ಬೆಂಗಳೂರು(ಏ.24): ಕೊರೋನಾ ಎರಡನೇ ದೇಶ, ರಾಜ್ಯಕ್ಕೆ ಎಂಟ್ರಿ ಕೊಟ್ಟಾಗಿದೆ. ಅಬ್ಬಬ್ಬಾ...! ಮೊದಲನೇ ಅಲೆಯಿಂದ ಇನ್ನೇನು ಚೇತರಿಸಿಕೊಳ್ಳುವ ಸಮಯಕ್ಕೇ ಅದಕ್ಕೂ ಬಲಿಷ್ಟವಾದ ಮತ್ತೊಂದು ಅಲೆ ಜನರನ್ನು ಕಂಗಾಲುಗೊಳಿಸಿದೆ. ಸರ್ಕಾರಗಳು ಅದೆಷ್ಟೇ ಯತ್ನಿಸಿದರೂ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ಈ ಮಹಾಮಾರಿ ತನ್ನ ಹಿಡಿತ ಸಡಿಲಗೊಳಿಸುತ್ತಿಲ್ಲ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಎದುರಾಗುತ್ತಿದೆ. ಅದೆಷ್ಟರ ಮಟ್ಟಿಗೆ ಈ ಮಹಾಮಾರಿ ಜನರ ಜೀವ ಹಿಂಡುತ್ತಿದೆ ಎಂದರೆ, ಉಸಿರಾಡುವ ಗಾಳಿಗೂ ಈಗ ಪರದಾಡುವಂತಾಗಿದೆ. ಸ್ಮಶಾನಗಳೆದುರು ಮೃತದೇಹಗಳನ್ನು ಹೊತ್ತ ಆಂಬುಲೆನ್ಸ್‌ಗಳು ಕ್ಯೂ ನಿಲ್ಲುವಂತಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಕೊರೋನಾ ವಾರಿಯರ್‌ಗಳ ಪರಿಸ್ಥಿತಿ ಬಹಳ ಕೆಟ್ಟದಾಗಿದೆ.
ಇದಕ್ಕೆ ಯಾರು ಹೊಣೆ?
ಅಷ್ಟಕ್ಕೂ ಈ ಎರಡನೇ ಅಲೆ ಇಷ್ಟೊಂದು ಗಂಭಿರ ಸ್ವರೂಪ ತಾಳಲು ಕಾರಣ ಯಾರು? ಒಂದೆರಡು ನಿಮಿಷ ಈ ಬಗ್ಗೆ ಯೋಚಿಸಿದರೆ, ನಮ್ಮ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎನ್ನುವ ಉತ್ತರ ಸಿಗುತ್ತದೆ. ಹೌದು ಮೊದಲ ಅಲೆ ಕಡಿಮೆಯಾಗುವಷ್ಟರಲ್ಲಿ ಸಾಮಾಜಿಕ ಅಂತರ ಎಂಬುವುದೇ ಮರೆತಿದ್ದೆವು. ಮೊದ ಮೊದಲು ಮೂಗಿಗಿಂತ ಕೆಳ ಸರಿದಿದ್ದ ಮಾಸ್ಕ್‌ಗಳು, ಮೂಲೆಯಲ್ಲಿ ಬಿದ್ದು ಧೂಳು ಹಿಡಿದಿದ್ದವು. ಸಾಲದೆಂಬಂತೆ ಸಭೆ, ಸಮಾರಂಭ, ಶುಭ ಕಾರ್ಯಗಳಿಗೂ ಯಾವುದೇ ಅಡೆ ತಡೆ ಇಲ್ಲದೇ ಅದ್ಧೂರಿ ಆಚರಣೆ. ಅತ್ತ ಚುನಾವಣೆಯಲ್ಲಿ ಬ್ಯುಸಿಯಾದ ನಾಯಕರೂ ಮಾಸ್ಕ್, ಸಾಮಾಜಿಕ ಅಂತರ ಮರೆತು ಬೆಂಬಲಿಗರೊಡೆನೆ ಪ್ರಚಾರ ಸಭೆ ಆರಂಭಿಸಿದರು. ಇವೆಲ್ಲದರ ಪರಿಣಾಮವೇ ಇಂದಿನ ಈ ಗಂಭೀರ ಸ್ಥಿತಿಗೆ ಕಾರಣ ಎಂಬುವುದರಲ್ಲಿ ಅನುಮಾನವಿಲ್ಲ.
ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ!
ಹೀಗಿದೆ ವಿಕ್ಟೋರಿಯಾ ಆರೋಗ್ಯ ಸಿಬ್ಬಂದಿ ಸ್ಥಿತಿ
ಆದರೆ ಈ ಒಂದು ನಿರ್ಲಕ್ಷ್ಯದ ನಡೆ ಎಲ್ಲರಿಗಿಂತ ಹೆಚ್ಚು ಜನರ ಪ್ರಾಣ ಕಾಪಾಡುವಲ್ಲಿ ಶ್ರಮಿಸುತ್ತಿರುವ ಕೊರೋನಾ ವಾರಿಯರ್‌ಗಳ ನಿದ್ದೆಗೆಡಿಸಿದೆ. ಹೌದು ಮೊದಲನೇ ಅಲೆ ಬಂದಂತಹ ಸಂದರ್ಭದಲ್ಲಿ ದೂರದ ಬ್ರಿಟನ್, ಚೀನಾದಲ್ಲಿದ್ದ ಪರಿಸ್ಥಿತಿ ಸದ್ಯ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನ ವೈದ್ಯರು ಎದುರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ದುಸ್ಥಿತಿಯ ಈ ಚಿತ್ರವೇ ಇದಕ್ಕೆ ಸಾಕ್ಷಿ. ನೋಡಲು ಇದು ಕೇವಲ ಒಂದು ಚಿತ್ರವಾಗಿದ್ದರೂ, ಬಿಚ್ಚಿಡುತ್ತಿರುವ ನೋವು, ಪರಿಸ್ಥಿತಿ, ವಾಸ್ತವತೆ ವಿಚಾರ ಹಲವು.
ದಿನ ಬೆಳಗಾಗುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮತ್ತೊಂದೆಡೆ ವೈದ್ಯಕೀಯ ಸೌಲಭ್ಯಗಳ ಕೊರತೆ ಹೀಗಿದ್ದರೂ ತಮ್ಮ ಜೀವದ ಹಂಗು ತೊರೆದು ಈ ಫ್ರಂಟ್ ಲೈನ್ ವಾರಿಯರ್ಸ್ ಜನರ ಸೇವೆ ಮಾಡುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ದಾಖಲಾಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ಅವರಿಗೆ ವಿಶ್ರಾಂತಿ ಪಡೆಯಲೂ ಸಮಯವಿಲ್ಲದಂತಾಗಿದೆ. ಸೂಕ್ತ ಸೌಲಭ್ಯದ ಕೊರತೆ ಇರುವ ಹಿನ್ನೆಲೆ ಕಾರಿಡಾರ್‌ನಲ್ಲೇ ಕುಳಿತು ನಿದ್ದೆ ಮಾಡಬೇಕಾದ ಪರಿಸ್ಥಿತಿ. ಹೀಗಿರುವಾಗ ಇವರ ಸೇವೆ ನಾವು ಅದೆಷ್ಟು ಧನ್ಯವಾದ ಎಂದರೂ ಸಾಲದು.
ಕೊರೋನಾ ತಾಂಡವ: ಯಾವ ಮಾಸ್ಕ್ ಎಷ್ಟು ಸೇಫ್? ಇಲ್ಲಿದೆ ವಿವರ
ಬಹುಶಃ ಮೊದಲನೇ ಅಲೆಗಿಂತ ಎರಡನೇ ಅಲೆಯೇ ನಮ್ಮ ಪ್ರೀತಿ ಪಾತ್ರರ ಜೀವ ಪಡೆದುಕೊಂಡಿದ್ದು ಹೆಚ್ಚು. ಬಹುಶಃ ಕಡಿಮೆಯಾಯ್ತು ಎನ್ನುವಷ್ಟರಲ್ಲಿ ನಿರ್ಲಕ್ಷ್ಯ ತೋರದೆ, ಇನ್ನು ಸ್ವಲ್ಪ ದಿನ ಈ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮುಂದುವರೆಸಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೇನೋ. ಉಸಿರಾಡುವ ಗಾಳಿಗಾಗಿ ಈ ಪರಿ ಒದ್ದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೇನೋ. ಅದಕ್ಕೂ ಮಿಗಿಲಾಗಿ ಕೊರೋನಾ ವಾರಿಯರ್ಸ್‌ಗಳು ಈ ತೀತಿ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲವೇನೋ.
ಕೊರೋನಾ ವಾರಿಯರ್ಸ್‌ಗೂ ತಮ್ಮದೇ ಆದ ಬದುಕಿದೆ
ನೆನಪಿಟ್ಟುಕೊಳ್ಳಿ ವೈದ್ಯರು, ದಾದಿಯರು ಆರೋಗ್ಯ ಕಾರ್ಯಕರ್ತರು ನಮ್ಮ-ನಿಮ್ಮಂತೆಯೇ ಒಬ್ಬರು. ಅವರಿಗೂ ತಮ್ಮದೇ ಆದ ಕುಟುಂಬವಿದೆ, ಜೀವನವಿದೆ. ಅಪ್ಪ, ಅಮ್ಮ, ಅಣ್ಣ, ತಂಗಿ, ತಮ್ಮ, ಅಕ್ಕ, ಮಗ, ಮಗಳು ಹೀಗೆ ನಿಭಾಯಿಸಬೇಕಾದ ಅನೇಕ ಸಂಬಂಧಗಳಿವೆ. ನಗು ನಗುತ್ತಲೇ ಬದುಕಬೇಕಾದ ಹಜಕ್ಕು ಅವರಿಗೂ ಇದೆ,. ಡ್ಯೂಟಿಗೆ ಹೋದ ಆಸ್ಪತ್ರೆಯಲ್ಲಿ ಡ್ಯೂಟಿಗೆ ಹೋದವರಿಗಾಗಿ ಯಾವಾಗ ಬರುತ್ತಾರೆಂದು ಕುಟುಂಬ ಸದಸ್ಯರು ಹಾದಿ ನೋಡುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ಅವರ ಚಿಂತೆ ಇಂದು ದುಪ್ಪಟ್ಟಾಗಿದೆ. ಸರ್ಕಾರ ಅದೆಷ್ಟೇ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದರೂ ಅನೇಕರು ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ.
ಮಾಸ್ಕ್ ಧರಿಸೋದು ಕಷ್ಟ ಎನ್ನುವವರು ಒಂದು ಬಾರಿ ಆರೋಗ್ಯ ಕಾರ್ಯಕರ್ತರ ಪರಿಸ್ಥಿತಿ ಹೇಗಿರುತ್ತದೆ ಎಂದು ಯೋಚಿಸಿ. ಕೊರೋನಾ ವಾರ್ಡ್‌ನಲ್ಲಿರುವ ವೈದ್ಯರು ಇಡೀ ದಿನ ಪಿಪಿಇ ಕಿಟ್, ಎರಡು ಮೂರು ಮಾಸ್ಕ್ ತಪ್ಪದೇ ಧರಿಸಬೇಕು. ಹೀಗಿದ್ದರೂ ಸೋಂಕಿತರ ಸೇವೆ ಮಾಡುವ ವೈದ್ಯರಿಗೆ ಕೊರೋನಾ ಸೋಂಕು ತಗುಲುವ ರಿಸ್ಕ್ ಅತೀ ಹೆಚ್ಚಿರುತ್ತದೆ. ಜನರ ಪ್ರಾಣ ಉಳಿಸುವ ಸಲುವಾಗಿ ತುಂಬು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಗರ್ಭಿಣಿ ಸಿಬ್ಬಂದಿಯೂ ಡ್ಯೂಟಿಗೆ ಬರುತ್ತಿದ್ದಾರೆ. ಹೀಗಿರುವಾಗ ಹೊರಗೆ ಓಡಾಡುವಾಗ ಒಂದು ಕ್ಷಣ ಮಾಸ್ಕ್ ಧರಿಸಲು ಸಾಧ್ಯವಿಲ್ಲ ಎನ್ನುವವರಿಗೆ ಕೊರೋನಾ ವಾರಿಯರ್ಸ್‌ನ್ನು ಇಂತಹ ಪರಿಸ್ಥಿತಿಗೆ ತಳ್ಳಲು ಯಾವುದೇ ಹಕ್ಕಿಲ್ಲ.
ಕಾಲ ಮಿಂಚಿಲ್ಲ
ಇನ್ನೂ ಕಾಲ ಮಿಂಚಿಲ್ಲ, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಲು ಮರೆಯಬೇಡಿ. ಈ ಪರಿಸ್ಥಿತಿ ನಿವಾರಣೆಯಾದರೆ, ಮಹಾಮಾರಿ ನಿಯಂತ್ರಣಕ್ಕೆ ಬಂದರೆ ಶುಭ ಕಾರ್ಯಗಳನ್ನು ನಡೆಸಲು ಸಮಯವಿದೆ. ನಮ್ಮ ಒಂದು ನಡೆ ಏನಿಲ್ಲವೆಂದರೂ ಆರೋಗ್ಯವಂತ ಸಮಾಜಕ್ಕಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಕೊಂಚ ವಿಶ್ರಾಂತಿ ಪಡೆಯುವ ಸಮಯ ನೀಡಬಹುದು, ಕುಟುಂಬದೊಂದಿಗೆ ನಕ್ಕು ನಲಿಯುವ, ಸುಂದರ ಕ್ಷಣ ಕಳೆಯುವ ಅವಕಾಶ ನೀಡೀತು.
ಇನ್ನಾದರೂ ಎಚ್ಚೆತ್ತುಕೊಂಡು ಮಾಸ್ಕ್ ಧರಿಸೋಣ, ಇತರರಿಗೂ ಮಾಸ್ಕ್ ಧರಿಸಲು ಹೇಳೋಣ. ಆರೋಗ್ಯಯುತ ಸಮಾಜ ಕಟ್ಟುವಲ್ಲಿ ಒಂದಾಗಿ ಹೋರಾಡೋಣ, ಅಂದ ಹಾಗೆ ನಿಮ್ಮ ಅಕ್ಕ ಪಕ್ಕದಲ್ಲಿ ಸಮಾವೇಶಗಳಾದರೆ, ಸಬೆ- ಸಮಾರಂಭವೇರ್ಪಟ್ಟಿದ್ದರೆ ರಾಜಕಾರಣಿಗಳಾಗಿರಲಿ, ಜನ ಸಾಮಾನ್ಯರಾಗಿರಲಿ ಅವರನ್ನು ಈ ವಿಚಾರವಾಗಿ ಕೊಂಚ ಶಿಕ್ಷಿತರನ್ನಾಗಿಸಲು ಮರೆಯಬೇಡಿ.