ಎಳನೀರು ವ್ಯಾಪಾರಿಯೊಬ್ಬರು ರಸ್ತೆ ಬದಿ ಇರಿಸಿದ್ದ 1,300 ಎಳನೀರು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.3) : ಎಳನೀರು ವ್ಯಾಪಾರಿಯೊಬ್ಬರು ರಸ್ತೆ ಬದಿ ಇರಿಸಿದ್ದ 1,300 ಎಳನೀರು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾವರೆಕೆರೆಯ ಮೋಹನ್ (23) ಬಂಧಿತ. ಆರೋಪಿಯಿಂದ ಟಾಟಾ ಏಸ್ ವಾಹನ, .10 ಸಾವಿರ ನಗದು ಜಪ್ತಿ ಮಾಡಲಾಗಿದೆ. ಆರೋಪಿಯು ಜೂ.28ರಂದು ರಾತ್ರಿ ಜಯನಗರ ನಾಲ್ಕನೇ ಟಿ ಬ್ಲಾಕ್‌ನ ಸುದರ್ಶನ್ ಪಾರ್ಕ್ ಬಳಿ 300 ಎಳನೀರು ಕದ್ದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಯನಗರ 3ನೇ ಬ್ಲಾಕ್‌ನ ನಾಕಲು ಬಂಡೆ ನಿವಾಸಿ ಚಿಕ್ಕಮರಿಗೌಡ ಎಳನೀರು ವ್ಯಾಪಾರಿಯಾಗಿದ್ದಾರೆ. ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಎಳನೀರು ಖರೀದಿಸಿ ಸುದರ್ಶನ ಪಾರ್ಕ್ ಬಳಿ ಇರಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಹದಿನೈದು ದಿನಗಳ ಹಿಂದೆ ಚಾಮರಾಜನಗರದಿಂದ 1 ಸಾವಿರ ಎಳನೀರು ಖರೀದಿಸಿ ತಂದಿದ್ದರು. ಈ ವೇಳೆ ದುಷ್ಕರ್ಮಿಗಳು ಅವುಗಳನ್ನು ಕದ್ದು ಪರಾರಿಯಾಗಿದ್ದರು.
ಬೆಂಗಳೂರು: ಜೂಮ್ ಕಾರನ್ನೇ ಅಡ ಇಟ್ಟು ಸಾಲ ಪಡೆದ ಭೂಪ..!
ಜೂ.28ರಂದು 300 ಎಳನೀರು ಖರೀದಿಸಿ ತಂದಿದ್ದ ಚಿಕ್ಕಮರಿಗೌಡ, ಅನಾರೋಗ್ಯದ ಹಿನ್ನೆಲೆಯಲ್ಲಿ ಆ ಎಳನೀರನ್ನು ಸುದರ್ಶನ ಪಾರ್ಕ್ ಬಳಿ ಇಳಿಸಿ ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಮಾರನೇ ದಿನ ಬೆಳಗ್ಗೆ ವ್ಯಾಪಾರ ಮಾಡಲು ಪಾರ್ಕ್ ಬಳಿ ಬಂದಾಗ ಎಳನೀರು ಇರಲಿಲ್ಲ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಾಲ ತೀರಿಸಲು ಎಳನೀರು ಕಳವು:
ಆರೋಪಿ ಮೋಹನ್ ಈ ಹಿಂದೆ ರಸ್ತೆ ಬದಿ ಎಳನೀರು ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ಟಾಟಾ ಏಸ್ ವಾಹನ ಖರೀದಿಸಿದ್ದ. ಕೆಲ ಕಡೆ ಸಾಲ ಮಾಡಿಕೊಂಡಿದ್ದ. ಒಂದು ಕಡೆ ವಾಹನದ ಇಎಂಐ ಮತ್ತೊಂದು ಕಡೆ ಕೈ ಸಾಲ ತೀರಿಸಬೇಕಿತ್ತು. ಹೀಗಾಗಿ ರಸ್ತೆ ಬದಿ, ಪಾರ್ಕ್ಗಳ ಬಳಿ ಎಳನೀರು ಕದಿಯಲು ಪ್ಲಾನ್ ಮಾಡಿದ್ದ. ಅದರಂತೆ ರಾತ್ರಿ ವೇಳೆ ಸುದರ್ಶನ ಪಾರ್ಕ್ ಬಳಿಗೆ ತನ್ನ ವಾಹನ ತಂದು ಎಳನೀರು ತುಂಬಿಕೊಂಡು ಪರಾರಿಯಾಗಿದ್ದ. ಆ ಎಳನೀರನ್ನು ಮುಂಜಾನೆ ಜಯನಗರದ ವಿವಿಧ ಪಾರ್ಕ್ಗಳ ಬಳಿ ತೆರಳಿ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸಾಲ ತೀರಿಸಲು ಎಳನೀರು ಕಳ್ಳತನಕ್ಕೆ ಇಳಿದಿದ್ದ ಆರೋಪಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಹಣ ಡ್ರಾ ಮಾಡುವಾಗ ಎಚ್ಚರ...ಎಚ್ಚರ !: ಮಹಿಳೆ ಬಳಿ ಇದ್ದ 1 ಲಕ್ಷ ಲೂಟಿ, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಅಂಗಡಿ ಮಾಲೀಕಗೆ ಚಾಕು ತೋರಿಸಿ ಹಣ ಕದ್ದವ ಸೆರೆ
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಟ್ಟೆಅಂಗಡಿಗೆ ತೆರಳಿ ಮಾಲಿಕನಿಗೆ ಚಾಕು ತೋರಿಸಿ .8 ಸಾವಿರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆಯ ಅಯಾಜ್ ಚೌಧರಿ (43) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ .1.40 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಜೂ.21ರಂದು ‘ಬಾಲಾಜಿ ಹೊಸೈರಿ’ ಬಟ್ಟೆಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅಯಾಜ್ ಚೌಧರಿ ಮತ್ತು ಸದ್ದಾಂ ಖಾನ್, ಗಲ್ಲಾ ಪೆಟ್ಟಿಗೆಯಲ್ಲಿದ್ದ .8 ಸಾವಿರ ಎಗರಿಸಲು ಮುಂದಾಗಿದ್ದರು. ಈ ವೇಳೆ ಅಂಗಡಿ ಮಾಲಿಕ ಪ್ರತಿರೋಧ ತೋರಿದಾಗ ಚಾಕು ತೋರಿಸಿ ಬೆದರಿಸಿದ್ದರು.
ಬಳಿಕ ಹಣದೊಂದಿಗೆ ಪರಾರಿಯಾಗುವಾಗ ಸ್ಥಳೀಯರು ಬೆನ್ನಟ್ಟಿಆರೋಪಿ ಸದ್ದಾಂ ಖಾನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಂದು ತಪ್ಪಿಸಿಕೊಂಡಿದ್ದ ಮತ್ತೊಬ್ಬ ಆರೋಪಿ ಅಯಾಜ್ ಚೌಧರಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇವರ ವಿರುದ್ಧ ಸಿಟಿ ಮಾರ್ಕೆಟ್, ಸಿ.ಕೆ.ಅಚ್ಚುಕಟ್ಟು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದ ಬಳಿಕವೂ ತಮ್ಮ ಹಳೇ ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.