ಬೆಂಗಳೂರಿನಲ್ಲಿ ನಿವೃತ್ತ ಎಂಜಿನಿಯರ್‌ಗೆ ತಿರುಚಿದ ವಿಡಿಯೋ ತೋರಿಸಿ ₹2 ಕೋಟಿ ಸುಲಿಗೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ₹40 ಲಕ್ಷ ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಬೆದರಿಸಿದ್ದರು.
ಬೆಂಗಳೂರು (ಏ.5): ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ತಿರುಚಿದ ವಿಡಿಯೋ ತೋರಿಸಿ ₹2 ಕೋಟಿ ಸುಲಿಗೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಅಜಯ್ ಮತ್ತು ಅಭಿ ಬಂಧಿತರು. ಆರೋಪಿಗಳು 68 ವರ್ಷದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ಗೆ ಈ ₹2 ಕೋಟಿಗೆ ಬೇಡಿಕೆ ಇರಿಸಿದ್ದರು. ಕೊನೆಗೆ ₹40 ಲಕ್ಷ ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ದಾವಣಗೆರೆ ಮೂಲದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಕೋರಮಂಗಲದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ನಿವೃತ್ತ ಎಂಜಿನಿಯರ್‌ಗೆ ಕರೆ ಮಾಡಿದ್ದ ಆರೋಪಿ ಅಜಯ್, ನೀವು 25 ವರ್ಷದ ಯುವತಿ ಜತೆಗೆ ಇರುವ ಅಶ್ಲೀಲ ವಿಡಿಯೋಗಳು ನಮ್ಮ ಬಳಿ ಇವೆ. ಈ ವಿಡಿಯೋಗಳನ್ನು ಡಿಲೀಟ್ ಮಾಡಲು ₹2 ಕೋಟಿ ನೀಡಬೇಕು ಎಂದು ಬೆದರಿಸಿದ್ದಾರೆ.
ದಾವಣಗೆರೆಯ ಜಿಲ್ಲಾ ಕೋರ್ಟ್ ಬಳಿಗೆ ಕರೆಸಿಕೊಂಡಿದ್ದ ಆರೋಪಿಗಳು ತಿರುಚಿದ ಅಶ್ಲೀಲ ವಿಡಿಯೋಗಳನ್ನು ತೋರಿಸಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ದಾವಣಗೆರೆಯ ಹದಡಿ ರಸ್ತೆಯ ಹೋಟೆಲ್‌ವೊಂದರ ಬಳಿ ಕರೆಸಿಕೊಂಡಿದ್ದ ಆರೋಪಿಗಳು ಅಶ್ಲೀಲ ವಿಡಿಯೋ ವಿಚಾರ ಪ್ರಸ್ತಾಪಿಸಿದ್ದರು. ಬಳಿಕ ಈ ತಿರುಚಿದ ವಿಡಿಯೋಗಳನ್ನು ವಾಟ್ಸಾಪ್‌ಗೆ ಕಳುಹಿಸಿ ನಂತರ ಡಿಲೀಟ್ ಮಾಡಿದ್ದರು.
ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಆರಂಭ
ಮಾ.16ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿಗಳು ₹2 ಕೋಟಿ ನೀಡಬೇಕು. ಇಲ್ಲವಾದರೆ, ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಮಾ.17ರಂದು ಕೋರಮಂಗಲದ ಕಾಫಿ ಬಾರ್ ಬಳಿ ನಿವೃತ್ತ ಎಂಜಿನಿಯರ್‌ನನ್ನು ಭೇಟಿಯಾಗಿದ್ದ ಆರೋಪಿಗಳು ₹2 ಕೋಟಿ ಬದಲು ₹40 ಲಕ್ಷ ಕೊಟ್ಟರೆ ವಿಡಿಯೋ ಡಿಲೀಟ್ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕದ್ದು ಮುಚ್ಚಿ ವ್ಯಾಟ್ಸಾಪ್ ಖಾತೆ ನೋಡಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ
ಆರೋಪಿಗಳ ಕಾಟ ತಾಳಲಾರದೆ ನಿವೃತ್ತ ಎಂಜಿನಿಯರ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.