4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!

By Kannadaprabha NewsFirst Published Mar 23, 2020, 7:09 AM IST
Highlights

4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!| 1991, 1994, 2000, 2006ರಲ್ಲಿ ವಿವಿಧ ಕಾರಣಗಳಿಗೆ ಬಂದ್‌ ಆಗಿದ್ದ ಬೆಂಗಳೂರು| ಸ್ವಯಂ ಪ್ರೇರಿತ ಬಂದ್‌ ಇದೇ ಮೊದಲು

ಬೆಂಗಳೂರು(ಮಾ. 23): ಮಹಾಮಾರಿ ಕೊರೋನಾ ವೈರಸ್‌ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ ‘ಜನತಾ ಕಫä್ರ್ಯ’ ಕರೆಗೆ ಬೆಂಗಳೂರು ಮಹಾನಗರ ಜನರು ಈ ಮಟ್ಟಿಗೆ ಸ್ಪಂದಿಸಿ ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸಿದ ರೀತಿ ಬಹುಶಃ ಇತಿಹಾಸದಲ್ಲಿ ಮೊದಲು.

ಈವರೆಗೆ ಕೇವಲ ನಗರದ ಪ್ರಮುಖ ವಾಣಿಜ್ಯ ಸ್ಥಳಗಳು, ರಸ್ತೆಗಳು, ವಾಣಿಜ್ಯ ಕೇಂದ್ರಗಳನ್ನು ಬಂದ್‌, ಬಸ್‌, ಲಾರಿ ಇತ್ಯಾದಿಗಳು ರಸ್ತೆಗಳಿಯುತ್ತಿರಲಿಲ್ಲ. ನಗರದ ಜನ ವಸತಿ ಪ್ರದೇಶಗಳಲ್ಲಿ ಮಾತ್ರ ಹೆಚ್ಚು ಕಡಿಮೆ ಬಂದ್‌ ಬಿಸಿ ತಟ್ಟುತ್ತಿರಲಿಲ್ಲ, ಎಂದಿನಂತೆ ಜನ ಜೀವನ ಇರುತ್ತಿತ್ತು. ಆದರೆ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಭಾನುವಾರ ನಡೆದ ‘ಜನತಾ ಕಫä್ರ್ಯ’. ಹಾಗೆಂದು ಬೆಂಗಳೂರಿನ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಬೇರೆ ಬೇರೆ ಕಾರಣಗಳಿಗಾಗಿ ಬಂದ್‌ ನಡೆದಿರುವುದು ದಾಖಲಾಗಿದೆ.

ಕಾವೇರಿ ಜಲ ವಿವಾದ

1991ರಲ್ಲಿ ಕಾವೇರಿ ನೀರು ನ್ಯಾಯಮಂಡಳಿ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಡಿ.11ರಂದು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಡಿ.12 ಮತ್ತು 13ರಂದು ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದವು. ಎಲ್ಲಿವರೆಗೆ ಎಂದರೆ ನಮ್ಮ ನೀರನ್ನು ತಮಿಳುನಾಡು ಕಸಿಯುತ್ತದೆ ಎಂಬ ಸಿಟ್ಟಿನಿಂದ ತಮಿಳರು ವಾಸಿಸುವ ಪ್ರದೇಶಗಳಲ್ಲಿ ಹಿಂಸಾಚಾರ ಘಟನೆಗಳು ನಡೆದವು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ನಡೆಸಿದ ಗೋಲಿಬಾರ್‌ ಹಾಗೂ ಹಿಂಸಾಚಾರದಿಂದ 16 ಜನರು ಮೃತ ಪಟ್ಟರು. ಆ ಸಂದರ್ಭದಲ್ಲಿ ಪೊಲೀಸರು ಒಂದು ವಾರಗಳ ಕಾಲ ಕಫä್ರ್ಯ ಹೇರಿದ್ದರು.

ಉರ್ದು ವಾರ್ತೆ ವಿರುದ್ಧ ಪ್ರತಿಭಟನೆ

1994ರ ಅಕ್ಟೋಬರ್‌ ತಿಂಗಳಲ್ಲಿ ಬೆಂಗಳೂರು ದೂರದರ್ಶನದಲ್ಲಿ 10 ನಿಮಿಷಗಳ ಉರ್ದು ವಾರ್ತೆ ಪ್ರಸಾರ ಮಾಡಲು ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ ನಿರ್ಧರಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಆದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಸತತ ಮೂರು ದಿನಗಳ ಕಾಲ ಹಿಂಸಾಚಾರಕ್ಕೆ ತಿರುಗಿ ಗೋಲಿಬಾರ್‌, ಇರಿತ ಮುಂತಾದ ಕಾರಣಗಳಿಂದ 23 ಜನರು ಮೃತಪಟ್ಟರು. ಈ ಘಟನೆಯಿಂದಾಗಿ ಬೆಂಗಳೂರು ನಗರದಲ್ಲಿ ಭಯದ ವಾತಾವರಣ ಉಂಟಾಗಿತ್ತು, ಪೊಲೀಸರು ಕಫä್ರ್ಯ ವಿಧಿಸಿದ ಪರಿಣಾಮ ಬೆಂಗಳೂರಿನ ಬಹುತೇಕ ಕಡೆ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿತ್ತು.

ಡಾ| ರಾಜ್‌ ಅಪಹರಣ

ಕಳೆದ 2000ರ ಏಪ್ರಿಲ್‌ನಲ್ಲಿ ವರನಟ ಡಾ| ರಾಜಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ ಮಾಡಿದ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚು ಕಡಿಮೆ ಬೆಂಗಳೂರು ನಗರದ ಬಹುತೇಕ ಕಡೆಗೆ ಜನರು ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸಿದರು. ನಗರದ ಪ್ರಮುಖ ವ್ಯಾಪಾರಿ ಸ್ಥಳಗಳು, ಸಿನಿಮಾ ಮಂದಿರಗಳು ಬಂದ್‌ ಮಾಡಲಾಯಿತು. ಎಂ.ಜಿ.ರಸ್ತೆ, ಮೆಜೆಸ್ಟಿಕ್‌ ಪ್ರದೇಶ, ಕೆ.ಆರ್‌. ಮಾರುಕಟ್ಟೆಪ್ರದೇಶ ಸೇರಿದಂತೆ ಅನೇಕ ಕಡೆ ವ್ಯಾಪಾರ ವಹಿವಾಟುಗಳು, ಆಟೋ ರಿಕ್ಷಾ, ನಗರ ಸಾರಿಗೆ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ಡಾ| ರಾಜ್‌ ನಿಧನ ಘಟನೆ

ಹಲವು ದಶಕಗಳ ಕಾಲ ನಾಡಿನ ಕಲಾರಸಿಕರ ಮನಗೆದ್ದ ಡಾ| ರಾಜಕುಮಾರ್‌ ಅವರು 2006ರಲ್ಲಿ ಹೃದಯಾಘಾತದಿಂದ ನಿಧನರಾದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಹೆಚ್ಚಿನ ಅವಕಾಶ ಸಿಗಲಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದ ಪರಿಣಾಮ ನಡೆದ ಹಿಂಸಾಚಾರ, ಗೋಲಿಬಾರ್‌ ಘಟನೆಯಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದರು.

click me!