
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉದ್ದೇಶಿತ 17 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆಯನ್ನು ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ (ಎಇಎಲ್‌ಗೆ) ವಹಿಸಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ (ಬಿ-ಸ್ಮೈಲ್) ರಾಜ್ಯ ಸರ್ಕಾರಕ್ಕೆ ಕಡತ ರವಾನಿಸಲಾಗಿದೆ.
ಯೋಜನೆ ಅನುಷ್ಠಾನಗೊಳಿಸುತ್ತಿರುವ ಬಿ ಸ್ಮೈಲ್ ಕಳೆದ ವಾರ ಅದಾನಿ ಸಂಸ್ಥೆಗೆ ವಹಿಸುವ ಕುರಿತಾದ ಕಡತವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಅತಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿರುವ ಸಂಸ್ಥೆಯ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿರುವುದನ್ನು ಉನ್ನತ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.
ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳವರೆಗಿನ 16.75 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ ಮಾಡಿತ್ತು. ಯೋಜನೆಗೆ 17,698 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿತ್ತು. ಆದರೆ, ಟೆಂಡರ್‌ನಲ್ಲಿ 22,267 ಕೋಟಿ ರು.ಗೆ ಅದಾನಿ ಸಂಸ್ಥೆ ಬಿಡ್ ಮಾಡಿದೆ. ಸರ್ಕಾರದ ಅಂದಾಜಿಗಿಂತ 4,600 ಕೋಟಿ ರು. ಹೆಚ್ಚು ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ ಮಾಡಿದೆ.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅದಾನಿ ಸಂಸ್ಥೆಯಿಂದ ಮಣ್ಣು ಪರೀಕ್ಷೆ, ಭೂಮಿಯ ಮೇಲ್ಮೈ ಸಮೀಕ್ಷೆ, ಕಟ್ಟಡಗಳು ಸೇರಿದಂತೆ ಒಟ್ಟಾರೆ ಸುರಂಗ ನಿರ್ಮಾಣಕ್ಕೆ ಅಗತ್ಯವಿರುವ ವೈಜ್ಞಾನಿಕ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸುರಂಗ ರಸ್ತೆಗೆ ಬಿ-ಸ್ಮೈಲ್ ಕಳುಹಿಸಿರುವ ಕಡತವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ‘ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ’ ಮಾದರಿಯಲ್ಲಿ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ.
ಇದನ್ನೂ ಓದಿ: ಟೆಕ್ಕಿಯನ್ನು ಬಲಿ ಪಡೆದುಕೊಂಡಿದ್ದ ಅಂಡರ್‌ಪಾಸ್‌ಗೆ 3 ವರ್ಷಗಳ ಬಳಿಕ ದುರಸ್ತಿ ಕಾರ್ಯ
ಒಂದು ವೇಳೆ ಸುರಂಗ ರಸ್ತೆ ನಿರ್ಮಾಣ ಯೋಜನೆ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡುವುದು ಅಂತಿಮಗೊಂಡರೆ ಸುರಂಗ ರಸ್ತೆಯನ್ನು ನಿರ್ಮಾಣ ಮಾಡಿ 30 ವರ್ಷಗಳವರೆಗೆ ಅದಾನಿ ಸಂಸ್ಥೆಯೇ ನಿರ್ವಹಣೆ ಮಾಡುತ್ತದೆ. ಯೋಜನೆ ನಿರ್ಮಾಣದ ಶೇ.40ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ.
ಇದನ್ನೂ ಓದಿ: GBA ವಿರುದ್ಧ 1 ಕಿ.ಮೀ ಚಾಲೆಂಜ್ ಆರಂಭಿಸಿದ ಬೆಂಗಳೂರಿಗರು: ಫುಟ್‌ಪಾತ್‌ಗಾಗಿ ಹುಡುಕಾಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ