ಖಾಸಗಿ ಕೋವಿಡ್‌ ಆಸ್ಪತ್ರೆಗಳು ತೊಂದರೆ ಕೊಟ್ರೆ ಕಠಿಣ ಕ್ರಮ: ಕಮಲ್‌ ಪಂತ್‌

By Kannadaprabha NewsFirst Published Aug 28, 2020, 8:30 AM IST
Highlights

ಲಿಖಿತ ದೂರು ಕೊಟ್ರೆ ಕ್ರಮ| ಕೋವಿಡ್‌ ಆಸ್ಪತ್ರೆಗಳಲ್ಲಿ ತೊಂದರೆಯಾದ್ರೆ ದೂರು ಕೊಡಿ: ಆಯುಕ್ತ| ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ಸಂವಾದ| ಕೋವಿಡ್‌-19ಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು| 

ಬೆಂಗಳೂರು(ಆ.28): ಸರ್ಕಾರ ನಿಗದಿಪಡಿಸಿದ ಖಾಸಗಿ ಕೋವಿಡ್‌ ಆಸ್ಪತ್ರೆಗಳಲ್ಲಿ ತೊಂದರೆಯಾಗಿದೆ ಎಂದು ಸಾರ್ವಜನಿಕರು ಲಿಖಿತ ದೂರು ನೀಡಿದರೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.

‘ನಮ್ಮ ಬೆಂಗಳೂರು ಫೌಂಡೇಷನ್‌’ ಗುರುವಾರ ಏರ್ಪಡಿಸಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಪರಿಶೀಲನೆಗಾಗಿ ಹಿರಿಯ ಐಎಎಸ್‌ ಮತ್ತು ಐಪಿಎಸ್‌ ಮಟ್ಟದ ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ. ಈ ಅಧಿಕಾರಿಗಳು ನಿರಂತರವಾಗಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಸ್ತುತ ಯಾವುದೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಕಂಡು ಬರುತ್ತಿಲ್ಲ. ಒಂದು ವೇಳೆ ಯಾರಿಗಾದರೂ ತೊಂದರೆಯಾದರೆ ಬಿಬಿಎಂಪಿ ನಿಯಂತ್ರಣ ಕೊಠಡಿ ಅಥವಾ ಪೊಲೀಸ್‌ ನಿಯಂತ್ರಣ ಕೊಠಡಿಗೆ (ಡಯಲ್‌-100) ಸಂಪರ್ಕ ಮಾಡಬಹುದು. ಲಿಖಿತ ದೂರು ನೀಡಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಯಚೂರು: ಕೋವಿಡ್‌ ಆಸ್ಪತ್ರೆಯಲ್ಲಿ ಹಂದಿಗಳದ್ದೇ ದರ್ಬಾರ್‌, ಸೋಂಕಿತರ ಗೋಳಾಟ..!

ನಗರ ಪೊಲೀಸರಿಗೆ ಕೋವಿಡ್‌ ಸೋಂಕು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರಲ್ಲೂ ವಲಸೆ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡುವ ಜತೆಗೆ ಅವರ ತವರು ರಾಜ್ಯಗಳಿಗೆ ಕಳುಹಿಸಿ ಕೊಡುವಲ್ಲಿ ಪೊಲೀಸ್‌ ಇಲಾಖೆ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದೆ. ಕೋವಿಡ್‌ ವಿರುದ್ಧ ಹೋರಾಟ ಮಾಡಿದ್ದ ನಗರ ಪೊಲೀಸರ ಪೈಕಿ 1501 ಮಂದಿ ಸೋಂಕಿಗೆ ತುತ್ತಾಗಿದ್ದರು. ಎಲ್ಲರೂ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ವಾಪಸ್‌ ಮರಳಿದ್ದಾರೆ. ಸೋಂಕಿಗೆ ಒಳಗಾಗಿದ್ದ ಬಹುತೇಕ ಪೊಲೀಸರು ಪ್ಲಾಸ್ಮಾ ದಾನ ಮಾಡಿದ್ದು, ಇದರಿಂದ ಹಲವರಿಗೆ ಉಪಯೋಗವಾಗಿದೆ. ಪ್ರತಿಯೊಬ್ಬ ಸಾರ್ವಜನಿಕರು ಪ್ಲಾಸ್ಮಾ ದಾನ ಮಾಡುವಂತಾಗಬೇಕು. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.

ಸಾರ್ವಜನಿಕರ ರಕ್ಷಣೆ ನಮ್ಮ ಕರ್ತವ್ಯ:

ಮೊಬೈಲ್‌ ಕಳ್ಳತನ, ಸರ ಕಳ್ಳತನದಂತಹ ಪ್ರಕರಣ ತಡೆಗೆ ಕ್ರಮಕೈಗೊಳ್ಳಲಾಗಿದ್ದು, ಎಲ್ಲೆಡೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ. ಕೋವಿಡ್‌-19 ತಡೆ ಜತೆಗೆ ಸಾರ್ವಜನಿಕರಿಗೆ ರಕ್ಷಣೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ. ಲಾಕ್‌ಡೌನ್‌ ತೆರವುಗೊಂಡ ಬಳಿಕ ಜನ ಜೀವನ ಸಹಜ ಸ್ಥಿತಿಯತ್ತ ಬಂದಿದೆ. ಅಪರಾಧ ಚಟುವಟಿಕೆ ತಡೆಗೆ ಪೊಲೀಸ್‌ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.

ಬಿಎಂಟಿಸಿ ಬಸ್‌ಗಳಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೇ ಸಂಚಾರ ಮಾಡುತ್ತಿದ್ದಾರೆ ಎಂಬ ಸಂವಾದಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಕೋವಿಡ್‌-19ಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಬಿಎಂಟಿಸಿ ಬಸ್‌ಗಳಲ್ಲಿ ನಿಯಮ ಪಾಲನೆ ಆಗದಿರುವ ಬಗ್ಗೆ ಬಿಎಂಟಿಸಿಯ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡುತ್ತೇನೆ ಎಂದು ಹೇಳಿದರು.

ನಿರ್ಲಕ್ಷ್ಯ ಸಲ್ಲದು:

ನಿಯಮಗಳನ್ನು ವಿಧಿಸಿ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಭ್ಯಾಸದಲ್ಲಿ ತೊಡಗಬೇಕು. ಸಾರ್ವಜನಿಕರಿಗೆ ತೊಂದರೆ ಆಗಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಈ ವಿಚಾರದಲ್ಲಿ ಯಾರೊಬ್ಬರು ನಿರ್ಲಕ್ಷ್ಯ ತೋರಬಾರದು ಎಂದರು.  ಇನ್ನು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಪೊಲೀಸರು ಸಭೆ ನಡೆಸಿ, ಸ್ಥಳೀಯವಾಗಿ ಪರಿಣಾಮಕಾರಿಯಾಗಿ ಕೋವಿಡ್‌ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
 

click me!