
ಬೆಂಗಳೂರು (ಮಾ.02): 'ಛಲವೊಂದಿದ್ದರೆ ಸಾಕು, ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗದು' ಎಂಬ ಮಾತಿಗೆ ಆನೇಕಲ್ ತಾಲ್ಲೂಕಿನ ಈ ಸಾಧಕಿ ಜೀವಂತ ಉದಾಹರಣೆಯಾಗಿದ್ದಾರೆ. ಹಗಲಿರುಳು ಆಟೋ ಓಡಿಸಿ ಮಗಳನ್ನು ಓದಿಸಿದ ತಂದೆ, ಮಾರುಕಟ್ಟೆಯಲ್ಲಿ ಹೂವು ಮಾರುತ್ತಾ ಮಗಳ ಕನಸಿಗೆ ನೀರೆರೆದ ತಾಯಿ - ಇಂದು ಇವರಿಬ್ಬರ ಶ್ರಮ ಸಾರ್ಥಕವಾಗಿದೆ. ಅವರ ಮುದ್ದಿನ ಮಗಳು ನಾಗಿಣಿ ಎಲ್. ಈಗ ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಇಡೀ ನಾಡೇ ಹೆಮ್ಮೆಪಡುವಂತೆ ಮಾಡಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ನಾಗಿಣಿ ಅವರ ಜೀವನ ಕಥೆ ಸಿನಿಮಾ ಕಥೆಗಿಂತಲೂ ರೋಚಕವಾಗಿದೆ. ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಕುಟುಂಬದ ಹೊರೆ ಹೊತ್ತಿದ್ದರೆ, ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವು ಮಾರಿ ಸಂಸಾರಕ್ಕೆ ಆಸರೆಯಾಗಿದ್ದರು. ಇನ್ನು ಅಮ್ಮ ಕಟ್ಟಿಕೊಡುತ್ತಿದ್ದ ಹೂವನ್ನು ಚಿಕ್ಕವಳಾಗಿದ್ದಾಗ ನಾಗಿಣಿ ಹೂವು ಮಾರಲು ಸಹಾಯ ಮಾಡುತ್ತಿದ್ದಳು. ಇಂತಹ ಅತ್ಯಂತ ಕಡು ಬಡತನದ ನಡುವೆಯೂ ನಾಗಿಣಿಯ ಶಿಕ್ಷಣಕ್ಕೆ ಪೋಷಕರು ಯಾವುದೇ ಕೊರತೆ ಮಾಡಲಿಲ್ಲ. ತಮ್ಮ ಕಷ್ಟದ ಬದುಕಿನ ನಡುವೆಯೇ ಮಗಳ ವಿದ್ಯಾಭ್ಯಾಸಕ್ಕಾಗಿ ಕನಸು ಕಂಡಿದ್ದರು.
ನಾಗಿಣಿ ಅವರ ಈ ಯಶಸ್ಸಿನ ಹಿಂದೆ ದೊಡ್ಡ ಹೋರಾಟವೇ ಇದೆ. ಬಾಲ್ಯದಿಂದಲೂ ತಾಯಿಗೆ ಹೂವಿನ ವ್ಯಾಪಾರದಲ್ಲಿ ನೆರವಾಗುತ್ತಿದ್ದ ಇವರು, ಒಂದು ಕೈಯಲ್ಲಿ ಒಂದೆಡೆ ಕಟ್ಟುತ್ತಲೇ ಮತ್ತೊಂದು ಕಡೆಗೆ ಪುಸ್ತಕ ಹಿಡಿದು ಓದುತ್ತಿದ್ದರು. 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದು ಇವರ ಮತ್ತೊಂದು ವಿಶೇಷ. 'ಬಡತನ ಎಂಬುದು ಕೇವಲ ಆರ್ಥಿಕ ಸ್ಥಿತಿಯೇ ಹೊರತು, ಅದು ಮೆದುಳಿನ ಸಾಮರ್ಥ್ಯವನ್ನಲ್ಲ' ಎಂಬುದನ್ನು ನಾಗಿಣಿ ಸಾಬೀತುಪಡಿಸಿದ್ದಾರೆ.
ವಕೀಲ ವೃತ್ತಿಯನ್ನು ಆರಂಭಿಸಿದ ಬಳಿಕವೂ ನಾಗಿಣಿ ಅವರು ತಮ್ಮ ಗುರಿಯನ್ನು ಮರೆಯಲಿಲ್ಲ. ನ್ಯಾಯಾಧೀಶೆಯಾಗಬೇಕೆಂಬ ಹಂಬಲದಿಂದ ಹಗಲಿರುಳು ಪರಿಶ್ರಮಪಟ್ಟರು. ಮಗಳ ಈ ಜಯದ ಬಗ್ಗೆ ತಾಯಿ ಮಂಜುಳಾ ಸಂತಸ ಹಂಚಿಕೊಂಡಿದ್ದು, 'ಬೆಳಿಗ್ಗೆ ನಾನು ಕಟ್ಟಿಕೊಡುತ್ತಿದ್ದ ಹೂವನ್ನು ಮಾರಿ ಮಗಳು ಶಾಲೆಗೆ ಹೋಗುತ್ತಿದ್ದಳು. ಇಂದು ಅವಳು ಜಡ್ಜ್ ಆಗಿರುವುದು ನಮಗೆ ಅತೀವ ಸಂತೋಷ ತಂದಿದೆ' ಎಂದಿದ್ದಾರೆ. ತಂದೆ ಲಕ್ಷ್ಮಣ್ ಅವರು ಕೂಡ ಮಗಳ ಸಾಧನೆ ಕಂಡು ಭಾವುಕರಾಗಿದ್ದಾರೆ. 'ನಿತ್ಯ ಆಟೋದಲ್ಲಿ ಮಗಳನ್ನು ಕಾಲೇಜಿಗೆ ಬಿಟ್ಟು ಬರುತ್ತಿದ್ದೆ. ನಮ್ಮ ಕಷ್ಟವನ್ನು ಅರಿತಿದ್ದ ಮಗಳು ಇಂದು ಇಡೀ ಊರು ಹೆಮ್ಮೆ ಪಡುವಂತೆ ಮಾಡಿದ್ದಾಳೆ. ನ್ಯಾಯಪೀಠದಲ್ಲಿ ಕುಳಿತು ನೊಂದವರಿಗೆ ದನಿಯಾಗಲಿ ಎಂಬುದೇ ನನ್ನ ಹಾರೈಕೆ' ಎಂದು ಹಾರೈಸಿದ್ದಾರೆ.
ಇಂದಿನ ಕಾಲದಲ್ಲಿ ಸಣ್ಣಪುಟ್ಟ ಕಷ್ಟಗಳಿಗೂ ಎದೆಗುಂದಿ ಹಾದಿ ತಪ್ಪುವ ಯುವ ಸಮುದಾಯಕ್ಕೆ ನಾಗಿಣಿ ಅವರು ದೊಡ್ಡ ಸ್ಪೂರ್ತಿ. ಸರ್ಕಾರಿ ಶಾಲೆಯಲ್ಲಿ ಓದಿ, ತಂದೆ-ತಾಯಿಯ ಕಾಯಕದಲ್ಲಿ ನೆರವಾಗುತ್ತಾ, ಬಡತನದ ಬೇಗೆಯಲ್ಲೂ ಕಮಲದಂತೆ ಅರಳಿದ ನಾಗಿಣಿ ಅವರ ಈ ಯಶಸ್ಸು ಕೋಟ್ಯಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ