Karnataka Rain:ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ, ಬೆಂಗಳೂರು ಸೇರಿ 5 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ!

Published : Nov 19, 2021, 04:06 AM IST
Karnataka Rain:ಮಳೆಗೆ ತತ್ತರಿಸಿದ ದಕ್ಷಿಣ ಕರ್ನಾಟಕ, ಬೆಂಗಳೂರು ಸೇರಿ 5 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ!

ಸಾರಾಂಶ

ಬೆಂಗಳೂರು, ಕೋಲಾರ, ರಾಮನಗರ ಸೇರಿ 5 ಜಿಲ್ಲೆಗಳಲ್ಲಿ ಭಾರಿ ಮಳೆ 5 ಜಿಲ್ಲೆಗಳಲ್ಲಿ ಇಂದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ,ಹಲವೆಡೆ ಮನೆ, ಕಟ್ಟಡಗಳು ಧರೆಗೆ

ಬೆಂಗಳೂರು(ನ.19): ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮತ್ತಷ್ಟುಅನಾಹುತಗಳನ್ನು ಸೃಷ್ಟಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ(Bengaluru) ಮುಂಜಾನೆಯಿಂದಲೂ ಬಿಟ್ಟು ಬಿಡದೆ ಮಳೆ(Rain) ಸುರಿಯುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ತೀರ, ಬೆಳಗಾವಿ ವ್ಯಾಪ್ತಿಯಲ್ಲಿ ಮಳೆ ಇಳಿಮುಖವಾಗಿದ್ದು, ದಕ್ಷಿಣ ಕರ್ನಾಟಕ(South Karnataka) ವ್ಯಾಪ್ತಿಯಲ್ಲಿ ವರುಣನ ಆರ್ಭಟ ಮುಂದುವರಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಶುಕ್ರವಾರ ಅಂಗನವಾಡಿಗಳು, ಶಾಲಾ-ಕಾಲೇಜುಗಳಿಗೆ(Shool college) ರಜೆ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಭೂಕುಸಿತ, ಕಟ್ಟಡಗಳು ಧರೆಗೆ:
ಕೋಲಾರ ಜಿಲ್ಲೆಯಲ್ಲಿ ಶಾಲೆಯ ಕಟ್ಟಡ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ(Chamundi Hills) ರಸ್ತೆ ಮತ್ತೆ ಕುಸಿದಿದೆ, ಅಲ್ಲದೆ ಹಳೆಯ ಕಟ್ಟಡ ನೆಲಕ್ಕುರುಳಿದೆ. ರಾಮನಗರ ಜಿಲ್ಲೆಯಲ್ಲಿ ಸೇತುವೆ ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಹೆಚ್ಚಾಗಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟೆಗೆ(KRS Dam) ಒಳ ಹರಿವು ಹೆಚ್ಚಿದೆ. ಈಗಾಗಲೇ ತುಂಬಿರುವ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಕೋಡಿ ಬಿದ್ದ ಕೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲಾಗಿದೆ. ಹಲವು ನಗರಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

ಕೋಲಾರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್‌ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಥಿಲಗೊಂಡಿದ್ದ ಶಾಲೆಯು ಮಧ್ಯಾಹ್ನ ಏಕಾಏಕಿ ಕುಸಿದಿದೆ. ಘಟನಾ ಸಂದರ್ಭದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು. ಕೊಠಡಿಯ ಗೋಡೆ ಕುಸಿಯಲಾರಂಭಿಸುತ್ತಿದ್ದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದರು.

ಕಲಬುರಗಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣವಿತ್ತು. ಕೋಲಾರ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಶಾಲೆಗಳ ಚಾವಣಿಯಲ್ಲಿ ಮಳೆ ನೀರು ನಿಂತು ಕಟ್ಟಡಗಳು ಸೋರುತ್ತಿವೆ. ರಾಮನಗರ ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗದಗಯ್ಯನದೊಡ್ಡಿ ಗ್ರಾಮದ ಬಳಿ ಅರ್ಕಾವತಿ ನದಿಗೆ ನಿರ್ಮಿಸಿದ್ದ ಸೇತುವೆ ಹಾನಿಯಾಗಿ, ಗ್ರಾಮಸ್ಥರು ಪರದಾಡುವಂತಾಗಿದೆ. ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದೆ. ಜಿಲ್ಲೆಯ ಜೀವನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

4 ದಿನ ರಾಜ್ಯದಲ್ಲಿ ಭಾರೀ ಮಳೆ : ಎಚ್ಚರ

ಕಾವೇರಿ ನದಿಗೆ 18 ಸಾವಿರ ಕ್ಯುಸೆಕ್‌ ನೀರು
ಕೊಡಗು ಸೇರಿದಂತೆ ಕಾವೇರಿ(Kaveri River) ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚು ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ಸುಮಾರು 18 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ 17 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್‌ ನೀರು ಬರುತ್ತಿದೆ. ಈಗಾಗಲೇ ಅಣೆಕಟ್ಟೆಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕಾವೇರಿ ನದಿಗೆ 18 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಬಿಡಿಲಾಗುತ್ತಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ದಿಢೀರ್‌ ಮಳೆ ಸುರಿದು ಕೆರೆ-ಕಟ್ಟೆ, ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಸೇರಿದೆ. ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ ಮಳೆ ಅಭಾವ ಎದುರಿಸುತ್ತಿದ್ದ ಪಾವಗಡ ಸೇರಿದಂತೆ ತುಮಕೂರು, ಶಿರಾ, ಮಧುಗಿರಿ, ಕುಣಿಗಲ್‌, ಕೊರಟಗೆರೆ, ಗುಬ್ಬಿ, ತಿಪಟೂರು, ಚಿ.ನಾ. ಹಳ್ಳಿ ಹೀಗೆ ಎಲ್ಲ ತಾಲೂಕುಗಳಲ್ಲೂ ವರ್ಷಧಾರೆಯಾಗಿದೆ. ಹಲವು ವರ್ಷಗಳಿಂದ ಬರಿದಾಗಿದ್ದ ಕೆರೆ-ಕಟ್ಟೆಗಳೂ ಕೂಡ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ.

ಇನ್ನು ಕೊರಟಗೆರೆ ತಾಲೂಕಿನ ತುಂಬಾಡಿಯ ಹೊಸಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬಾಲಕಿಯರ ರಕ್ಷಣೆ ಮಾಡಲಾಗಿದೆ. ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಇಬ್ಬರು ಬಾಲಕಿಯರು ಆಟವಾಡಲು ಇಳಿದ ವೇಳೆ ನೀರಿನ ರಭಸ ಹೆಚ್ಚಾಗಿರುವುದು ಅವರ ಗಮನಕ್ಕೆ ಬರಲಿಲ್ಲ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ