
ಬೆಂಗಳೂರು (ಡಿ.24): ರಾಜಧಾನಿಯ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ (ACP) ಕೃಷ್ಣಮೂರ್ತಿ ಅವರು ಹೋಟೆಲ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಎಸಿಪಿ ಕಚೇರಿಯಲ್ಲೇ ಈ ಕಾರ್ಯಾಚರಣೆ ನಡೆದಿದ್ದು, ಭ್ರಷ್ಟ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸಾಗರ್ ಹೋಟೆಲ್ ಮಾಲೀಕರಿಗೆ ಎಸಿಪಿ ಕೃಷ್ಣಮೂರ್ತಿ ಅವರು ಪ್ರತಿ ತಿಂಗಳು ಹಣ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಹೋಟೆಲ್ ಸುಗಮವಾಗಿ ನಡೆಯಬೇಕೆಂದರೆ ತಿಂಗಳಿಗೆ 32 ಸಾವಿರ ರೂಪಾಯಿ 'ಮಾಮೂಲಿ' ನೀಡಬೇಕು ಎಂದು ಎಸಿಪಿ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಎಸಿಪಿ ಮತ್ತು ಹೋಟೆಲ್ ಮಾಲೀಕರ ನಡುವೆ ನಡೆದ ಸಂಭಾಷಣೆಯ ಆಡಿಯೋ ತುಣುಕು ಲಭ್ಯವಾಗಿತ್ತು. ಲಂಚದ ಹಣ ನೀಡಲು ಇಚ್ಛಿಸದ ಹೋಟೆಲ್ ಮಾಲೀಕರು ಕೂಡಲೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಹೋಟೆಲ್ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ, ಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು. ಬುಧವಾರ ಎಸಿಪಿ ಕಚೇರಿಯಲ್ಲಿ ಹೋಟೆಲ್ ಮಾಲೀಕರು 30 ಸಾವಿರ ರೂಪಾಯಿ ನಗದನ್ನು ಎಸಿಪಿ ಕೃಷ್ಣಮೂರ್ತಿ ಅವರಿಗೆ ನೀಡುತ್ತಿದ್ದಾಗ, ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ದಾಳಿಯ ವೇಳೆ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಎಸಿಪಿ ಕೃಷ್ಣಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಚೇರಿಯಲ್ಲಿದ್ದ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡು ಹಫ್ತಾ ವಸೂಲಿಗೆ ಇಳಿದ ಅಧಿಕಾರಿಯ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ