ಸಾರಿಗೆ ನೌಕರರಿಗೆ ಹೊಸ ವರ್ಷದ ಬಂಪರ್ ಗಿಫ್ಟ್: ಅಂತರ ನಿಗಮ ವರ್ಗಾವಣೆಗೆ ಜ.1 ರಿಂದ ಅರ್ಜಿ ಸಲ್ಲಿಕೆ ಆರಂಭ!

Published : Dec 24, 2025, 12:18 PM IST
KSRTC menstrual leave

ಸಾರಾಂಶ

ರಾಜ್ಯ ಸಾರಿಗೆ ನಿಗಮಗಳ 'ಅಂತರ ನಿಗಮ ವರ್ಗಾವಣೆ'ಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಜನವರಿ 1 ರಿಂದ 31ರ ವರೆಗೆ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಇದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನೌಕರರ ದಶಕದ ಬೇಡಿಕೆಯನ್ನು ಈಡೇರಿಸಿದೆ.

ಬೆಂಗಳೂರು (ಡಿ.24): ದೀರ್ಘಕಾಲದಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಸಾವಿರಾರು ನೌಕರರಿಗೆ ರಾಜ್ಯ ಸರ್ಕಾರವು ಹೊಸ ವರ್ಷದ ಸಿಹಿ ಸುದ್ದಿ ನೀಡಿದೆ. ಸಾರಿಗೆ ನಿಗಮಗಳಲ್ಲಿ 'ಅಂತರ ನಿಗಮ ವರ್ಗಾವಣೆ'ಗೆ (Inter-Corporation Transfer) ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಜನವರಿ 1 ರಿಂದ ನೌಕರರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ದಶಕದ ಬೇಡಿಕೆಗೆ ಮನ್ನಣೆ

ಈ ಮೊದಲು ಸಾರಿಗೆ ನೌಕರರಿಗೆ ತಾವು ಕೆಲಸ ಮಾಡುವ ನಿಗಮದ ವ್ಯಾಪ್ತಿಯಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿತ್ತು. ಅಂದರೆ, ಕೆಎಸ್‌ಆರ್‌ಟಿಸಿ ನೌಕರರು ಕೆಎಸ್‌ಆರ್‌ಟಿಸಿಯಲ್ಲೇ ಇರಬೇಕಿತ್ತು, ಬಿಎಂಟಿಸಿಯಿಂದ ಕೆಎಸ್‌ಆರ್‌ಟಿಸಿಗೆ ಅಥವಾ ಇತರೆ ನಿಗಮಗಳಿಗೆ ಹೋಗಲು ತಾಂತ್ರಿಕ ಅಡೆತಡೆಗಳಿದ್ದವು. ಇದರಿಂದಾಗಿ ನೂರಾರು ಕಿಲೋಮೀಟರ್ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ತಮ್ಮ ಸ್ವಗ್ರಾಮಗಳಿಗೆ ಮರಳಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಹಲವು ವರ್ಷಗಳ ನೌಕರರ ಹೋರಾಟ ಮತ್ತು ಬೇಡಿಕೆಗೆ ಮನ್ನಣೆ ಸಿಕ್ಕಿದೆ.

ಜನವರಿ 31ರ ವರೆಗೆ ಅರ್ಜಿ ಸಲ್ಲಿಕೆ

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ನಿಗಮಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಜನವರಿ 1 ರಿಂದ ಜನವರಿ 31ರ ವರೆಗೆ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅರ್ಹ ನೌಕರರು 'ಸಾಮಾನ್ಯ ವರ್ಗಾವಣೆ' (General Transfer) ಅಥವಾ 'ಪರಸ್ಪರ ವರ್ಗಾವಣೆ' (Mutual Transfer) ಅಡಿಯಲ್ಲಿ ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ವರ್ಗಾವಣೆ ಪ್ರಕ್ರಿಯೆಯ ವಿಶೇಷತೆ

ಈ ವರ್ಗಾವಣೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ಜೇಷ್ಠತೆ (Seniority) ಮತ್ತು ಮಾನವೀಯ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮಗಳ ನಡುವೆ ನೌಕರರು ಅದಲಿಬದಲಿ ಆಗಲು ಇದು ಸುವರ್ಣಾವಕಾಶವಾಗಿದೆ. ವರ್ಷದ ಮೊದಲ ದಿನವೇ ಈ ಪ್ರಕ್ರಿಯೆ ಆರಂಭವಾಗುತ್ತಿರುವುದು ಸಾರಿಗೆ ನೌಕರರ ಕುಟುಂಬಗಳಲ್ಲಿ ಸಂತಸ ತಂದಿದೆ. ನೌಕರರು ತಮ್ಮ ಹತ್ತಿರದ ನಿಗಮಗಳಿಗೆ ವರ್ಗಾವಣೆ ಪಡೆಯುವುದರಿಂದ ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಕಾರ್ಯಕ್ಷಮತೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲಲ್ಲಿ ಬ್ಯಾಗ್‌ ಮರೆವವರ ನೆರವಿಗೆ 'ಆಪರೇಷನ್‌ ಅಮಾನತ್‌': 2.25 ಕೋಟಿ ಮೌಲ್ಯದ ವಸ್ತುಗಳನ್ನು ರಕ್ಷಿಸಿದ ಆರ್‌ಪಿಎಫ್‌
Bengaluru 2ನೇ ಏರ್‌ಫೋರ್ಟ್‌ಗೆ ಡಿಎಫ್‌ಆರ್‌ ಸಿದ್ಧತೆಗೆ ಟೆಂಡರ್‌: ವನ್ಯಜೀವಿ ಪರಿಣಾಮಕ್ಕೂ ಅಧ್ಯಯನ