
ಚಿಕ್ಕೋಡಿ (ಕಾಗವಾಡ) (ನ.22): ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಮತದಾರರನ್ನು ಸ್ಥಳೀಯ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಬರೋಬ್ಬರಿ ಒಂದು ತಿಂಗಳಿನಿಂದ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಪ್ರತಿಭಟನಾ ನಿರತರ ಸಮಸ್ಯೆಯನ್ನು ಸೌಜನ್ಯಕ್ಕೂ ಆಲಿಸದ ಶಾಸಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಗವಾಡ ಪಟ್ಟಣದ ನಿವಾಸಿಗಳು ತಮ್ಮ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಸ್ವಚ್ಛತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ತಿಂಗಳ 27 ರಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಗವಾಡ ಪಟ್ಟಣ ಪಂಚಾಯಿತಿ ಎದುರು ಹಗಲು ರಾತ್ರಿ, ಚಳಿ, ಬಿಸಿಲು ಎನ್ನದೆ ತಮ್ಮ ಅಹವಾಲನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳ ಮುಂದೆ ಇಡುತ್ತಿದ್ದಾರೆ.
ಸ್ಥಳೀಯ ಸಮಸ್ಯೆ ಬಗೆಹರಿಸುವ ಬದಲು, ಶಾಸಕ ರಾಜು ಕಾಗೆ ಅವರ ನಡೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ಪ್ರತಿಭಟನಾ ಸ್ಥಳಕ್ಕಾಗಮಿಸಿದರೂ ಸಹ ಅವರು ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸದೇ ನಿರ್ಲಕ್ಷ್ಯ ಮಾಡಿದ್ದಲ್ಲದೇ ಅದೇ ಪ್ರತಿಭಟನಾ ಸ್ಥಳದ ಎದುರಲ್ಲೇ ಆಯೋಜಿಸಲಾಗಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಹಾರ ತುರಾಯಿಗಳನ್ನು ಹಾಕಿಸಿಕೊಂಡು, ಸನ್ಮಾನ ಮಾಡಿಸಿಕೊಂಡು ತೆರಳಿದ್ದಾರೆ.
ತಾವು ಕಷ್ಟಪಟ್ಟು ಗೆಲ್ಲಿಸಿದ ಶಾಸಕರೇ ಇಂದು ತಮ್ಮ ಸಮಸ್ಯೆಯನ್ನೇ ಕಡೆಗಣಿಸಿ, ಕಣ್ಣ ಮುಂದೆಯೇ ಸತ್ಕಾರ ಸ್ವೀಕರಿಸಿದ ಈ ನಡೆ ಮತದಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. 'ಮತ ಹಾಕಿ ಗೆಲ್ಲಿಸಿದ ಮತದಾರರ ಸಮಸ್ಯೆಯನ್ನೇ ಮರೆತ ಶಾಸಕ' ಎಂದು ರಾಜು ಕಾಗೆ ಅವರ ನಡೆಗೆ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಕೂಡಲೇ ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ