
ಬೆಳಗಾವಿ (ಸೆ.01): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ವಿಚಾರಣಾಧೀನ ಬಂಧಿ ನಟ ದರ್ಶನ್ ಸಿಗರೇಟ್ ಸೇದಿದ ಫೊಟೋ ವೈರಲ್ ಆದ ಬೆನ್ನಲ್ಲಿಯೇ ಆತನ ಗ್ಯಾಂಗ್ ಅನ್ನು ರಾಜ್ಯದ ವಿವಿಧ ಜಿಲ್ಲೆಗಳ ಜೈಲಿಗೆ ದಿಕ್ಕಾಪಾಲು ಮಾಡಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ತಮಗೂ ಬೀಡಿ ಸಿಗರೇಟ್ ಬೇಕೆಂದು ಪ್ರತಿಭಟನೆ ಆರಂಭಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ವೈರಲ್ ಆಗಿತ್ತು. ಇಲ್ಲಿ ರೌಡಿಗಳು ರಾಜರಂತೆ ಮೆರೆಯಲು ಜೈಲಿನ ಸಿಬ್ಬಂದಿಯೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಈಗಾಗಲೇ 7 ನ ಸಿಬ್ಬಂದಿ ಅಮಾನತ್ತಾಗಿದ್ದಾರೆ. ಇದರಿಂದಾಗಿ ರಾಜ್ಯದ ಬಂದಿಖಾನೆ ಇಲಾಖೆ ಸಾರ್ವಜನಿಕರು ಹಾಗೂ ನ್ಯಾಯಾಲಯದ ಮುಂದೆ ಮುಜುಗರಕ್ಕೀಡಾಗಿದೆ. ಈ ಘಟನೆಯ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 13 ಜನರ ಪೈಕಿ 10 ಜನರನ್ನು ರಾಜ್ಯದ ವಿವಿಧ ಜೈಲುಗಳಿಗೆ ರವಾನಿಸಲಾಗಿದೆ. ಇದರಲ್ಲಿ ಎ2 ಆರೋಪಿ ನಟ ದರ್ಶನ್‌ನನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ರವಾನಿಸಲಾಗಿದೆ.
ಮೊಬೈಲಲ್ಲಿ ಮಾತಾಡಿದ್ದು ತಪ್ಪೊಪ್ಪಿಕೊಂಡ ದರ್ಶನ್: ಸಿಗರೇಟು, ಚಹಾ ಸೇವನೆಗೆ ನಾಗ ಕರೆಯುತ್ತಿದ್ದ ಎಂದ ನಟ
ದರ್ಶನ್‌ನ ಆಪ್ತ ಸ್ನೇಹಿತ ಪ್ರದೂಶ್‌ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ, ಬೆಂಗಳೂರಿನ ಪರಪ್ಪನ ಅಗ್ರಹಾರದ ಅವಾಂತರ ಬೆಳಕಿಗೆ ಬಂದ ಬೆನ್ನಲ್ಲೇ ಬೆಳಗಾವಿ ಹಿಂಡಲಗಾ ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಜೈಲಿನೊಳಗೆ ಬೀಡಿ, ಸಿಗರೇಟ್, ತಂಬಾಕು ಸೇರಿದಂತೆ ಎಲ್ಲ ಧೂಮಪಾನ ಮತ್ತು ಗುಟ್ಕಾ ವಸ್ತುಗಳನ್ನು ನಿಷೇಧಿಸಲಾಗಿದೆ. ಆದರೆ, ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳ ಖಡಕ್ ನಿರ್ಧಾರದಿಂದ ಕಂಗೆಟ್ಟ ಕೈದಿಗಳು ತಮಗೆ ಗುಟ್ಕಾ, ತಂಬಾಕು, ಬೀಡಿ, ಸಿಗರೇಟ್ ಬೇಕೇ ಬೇಕು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕಿಲ ಕಿಲ ಕೋಮಲ ಆಂಟಿ ಕಣ್ಸನ್ನೆಗೆ ಅಂಕಲ್‌ಗಳೆಲ್ಲಾ ಫ್ಲ್ಯಾಟ್: ಲಕ್ಷ ಲಕ್ಷ ವಂಚಿಸಿ ಸಿಕ್ಕಿಬಿದ್ದಳು!
ಜೈಲಿನ ಕೈದಿಗಳ ಪೈಕಿ ಬಹುತೇಕರು ತಮಗೆ ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದ್ದಾರೆ. ನಾವು ಹಣ ಕೊಟ್ಟು ಮನೆಯವರಿಂದ ಗುಟ್ಕಾ, ಸಿಗರೇಟ್, ಬೀಡಿ ತರಿಸಿಕೊಳ್ಳುತ್ತೇವೆ. ಇದನ್ನು ನಿಯಂತ್ರಣ ಮಾಡುವುದು ಬೇಡ. ನಮ್ಮ ಚಟಗಳನ್ನು ನಾವು ಬಿಟ್ಟಿರಲು ಸಾಧ್ಯವಿಲ್ಲ. ನೀವು ನಮಗೆ ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ, ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಕುಳಿತಿದ್ದಾರೆ. ಉಪಹಾರ, ಊಟ ಬಿಟ್ಟು ಪ್ರತಿಭಟನೆ ಮಾಡುತ್ತಿರುವ ಕೈದಿಗಳ ಮನವೊಲಿಕೆಗೆ ಪ್ರಯತ್ನಿಸಿ ಜೈಲಾಧಿಕಾರಿಗಳು ಹೈರಾಣು ಆಗಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳಿಗೆ ಇದೀಗ ತಂಬಾಕು, ಬೀಡಿ ಜೈಲಿನೊಳಗೆ ತರಲು ಅನುಮತಿ ನೀಡಬೇಕೋ? ಬೇಡವೋ ಎಂಬುದು ಹೊಸ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ