ರಾಜ್ಯದಲ್ಲಿ 70312 ಅರಣ್ಯ ಅಪರಾಧ ಪ್ರಕರಣ ಇತ್ಯರ್ಥಕ್ಕೆ ಬಾಕಿ, ವರ್ಷಕ್ಕೆ 5 ಸಾವಿರ ಪ್ರಕರಣ ದಾಖಲು

ಕರ್ನಾಟಕದಲ್ಲಿ ಅರಣ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, 2023-24ನೇ ಸಾಲಿನಲ್ಲಿ 5,866 ಪ್ರಕರಣಗಳು ದಾಖಲಾಗಿವೆ. 70,000 ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಅರಣ್ಯ ಭೂಮಿ ಒತ್ತುವರಿ ಪ್ರಮುಖ ಸಮಸ್ಯೆಯಾಗಿದೆ.


ವರದಿ: ಗಿರೀಶ್‌ ಗರಗ

ಬೆಂಗಳೂರು (ಸೆ.1) : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ, 2023-24ನೇ ಸಾಲಿನಲ್ಲಿಯೇ 5,866 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 2024ರ ಮಾರ್ಚ್ ಅಂತ್ಯದ ವೇಳೆಗೆ 70 ಸಾವಿರಕ್ಕೂ ಹೆಚ್ಚಿನ ಅರಣ್ಯ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

Latest Videos

ಅರಣ್ಯ ಸಂರಕ್ಷಣೆಗೆ ಧಕ್ಕೆ, ವನ್ಯಜೀವಿಗಳಿಗೆ ಹಾನಿ ಮಾಡುವವರ ವಿರುದ್ಧ ಅರಣ್ಯ ಇಲಾಖೆ ಭದ್ರತಾ ಪಡೆ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳುತ್ತದೆ. ಅಲ್ಲದೆ, ಆ ಪ್ರಕರಣಗಳಲ್ಲಿ ತಪ್ಪಿತಸ್ಥರಾದವರಿಗೆ ನಿಯಮದಂತೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಸದ್ಯ ಹಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, 2023-24ನೇ ಸಾಲಿನ ಅಂತ್ಯದ ವೇಳೆಗೆ 70,312 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅದರಲ್ಲಿ ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳೇ ಹೆಚ್ಚಾಗಿದ್ದು, ಅದರಿಂದಾಗಿ ಆ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಸಾಕಷ್ಟು ವಿಳಂಬವಾಗುತ್ತಿದೆ. ಅದರ ಜತೆಗೆ ಶ್ರೀಗಂಧ ಮರಗಳು, ಬೀಟೆ, ರಕ್ತ ಚಂದನ ಮರಗಳ ಕಳ್ಳ ಸಾಗಣೆ, ವನ್ಯಜೀವಿಗಳಿಗೆ ಸುರಕ್ಷತೆಗೆ ಧಕ್ಕೆಯನ್ನುಂಟು ಮಾಡಿದ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.

ದರ್ಶನ್ ಸಿನಿ ಜೀವನ 2027ಕ್ಕೆ ಅಂತ್ಯ ಎಂದ ಜೋತಿಷ್ಯ ಶಾಸ್ತ್ರ! ಸಿನೆಮಾ ಬಿಟ್ಟು ದಾಸನ ಹೊಸ ಜರ್ನಿ ಆರಂಭ!

ವರ್ಷದಲ್ಲಿ 5866 ಪ್ರಕರಣಗಳು ದಾಖಲು: ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 4,500ರಿಂದ 5 ಸಾವಿರ ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಅದರಂತೆ 2022-23ನೇ ಸಾಲಿನಲ್ಲಿ 5,808 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2023-24ನೇ ಸಾಲಿಗೆ ಆ ಸಂಖ್ಯೆ 5,866ಕ್ಕೆ ಏರಿಕೆಯಾಗುವಂತಾಗಿತ್ತು. ಅದರಲ್ಲಿ ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು 2022-23ರಲ್ಲಿ 992 ಅರಣ್ಯ ಅತಿಕ್ರಮಣ ಪ್ರಕರಣ ದಾಖಲಾಗಿತ್ತು. ಅದೇ 2023-24ನೇ ಸಾಲಿನಲ್ಲಿ 1,385 ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡ ಕುರಿತು ಪ್ರಕರಣವನ್ನು ಅರಣ್ಯ ಇಲಾಖೆ ದಾಖಲಿಸಿದೆ.

ಅರಣ್ಯ ಭೂಮಿ ಒತ್ತುವರಿ ಪ್ರಕರಣ: ಅರಣ್ಯ ಇಲಾಖೆ ದಾಖಲೆ ಪ್ರಕಾರ, 2023-24ನೇ ಸಾಲಿನ ಅಂತ್ಯದ ವೇಳೆಗೆ ಒಟ್ಟು 70,312 ಅರಣ್ಯ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಅದರಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಕ್ಕೆ ದಾಖಲಿಸಲಾದ ಪ್ರಕರಣಗಳ ಸಂಖ್ಯೆಯೇ 44,608ರಷ್ಟಿದೆ. ಇದರಲ್ಲಿ ಬಹುತೇಕ ಪ್ರಕರಣಗಳು ನ್ಯಾಯಾಲಯದಲ್ಲಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಅವುಗಳನ್ನು ವಿಲೇವಾರಿ ಅಥವಾ ಇತ್ಯರ್ಥಗೊಳಿಸುವುದು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ಏಷ್ಯಾದ ಮೊದಲ ಜಟಾಯು ಬ್ರೀಡಿಂಗ್‌ ನೆಲೆ ಯುಪಿಯಲ್ಲಿ ಆರಂಭ, ರಾಮಾಯಣ ಸಂಬಂಧದ ಬಗ್ಗೆ ನಿಮಗೆ ಗೊತ್ತಾ?

ಉಳಿದಂತೆ 2,840 ಶ್ರೀಗಂಧ ಮರದ ತುಂಡು ಕಳ್ಳಸಾಗಣೆ, 63 ರಕ್ತಚಂದನ, 1,544 ಬೀಟೆ ಮರ ತುಂಡು ಕಳ್ಳಸಾಗಣೆ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಹಾಗೆಯೇ, ವನ್ಯಜೀವಿ ಬೇಟೆ ಸೇರಿದಂತೆ ವನ್ಯಜೀವಿಗಳಿಗೆ ಸಮಸ್ಯೆಯನ್ನುಂಟು ಮಾಡಿದ 3,593 ಪ್ರಕರಣಗಳು ಹಾಗೂ ಅರಣ್ಯ ಕಾಯ್ದೆ ಉಲ್ಲಂಘಿಸಿದ ಕುರಿತಂತೆ 17,664 ಪ್ರಕರಣಗಳು ಬಾಕಿ ಉಳಿದಿವೆ.

6,773 ಪ್ರಕರಣಗಳು ಕೋರ್ಟಲ್ಲಿ: ಅರಣ್ಯ ಅಪರಾಧಗಳನ್ನು ಹೊರತುಪಡಿಸಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 6,773 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿವೆ. ಅದರಲ್ಲಿ ಸುಪ್ರೀಂಕೋರ್ಟ್‌ನಲ್ಲಿ 27, ಹೈಕೋರ್ಟ್‌ನಲ್ಲಿ 1,140, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ 1, ಕೆಎಟಿಯಲ್ಲಿ 59 ಹಾಗೂ ಕೆಳಹಂತದ ನ್ಯಾಯಾಲಯಗಳಲ್ಲಿ 5,546 ಮೊಕದ್ದಮೆಗಳಿವೆ. ಹೈಕೋರ್ಟ್‌ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳ ಪೈಕಿ 1,899 ಮೊಕದ್ದಮೆಗಳು ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿದ್ದಾಗಿದ್ದರೆ, 4,787 ಮೊಕದ್ದಮೆಗಳು ಕ್ರಿಮಿನಲ್‌ ಪ್ರಕರಣಗಳಾಗಿವೆ. ಅದೇ 2022-23ನೇ ಸಾಲಿನ ಅಂತ್ಯಕ್ಕೆ ಒಟ್ಟಾರೆ ವಿವಿಧ ನ್ಯಾಯಾಲಯ ಮತ್ತು ನ್ಯಾಯಾಧಿಕರಣದಲ್ಲಿ 6,068 ಮೊಕದ್ದಮೆಗಳಿದ್ದವು. ಅದನ್ನು ಗಮನಿಸಿದರೆ ಒಂದೇ ವರ್ಷದಲ್ಲಿ 705 ಮೊಕದ್ದಮೆಗಳು ಹೆಚ್ಚಾಗುವಂತಾಗಿದೆ.

2023-24ನೇ ಸಾಲಿನಲ್ಲಿ ದಾಖಲಾದ ಅರಣ್ಯ ಅಪರಾಧ ಪ್ರಕರಣಗಳು

ಅರಣ್ಯ ಭೂಮಿ ಒತ್ತುವರಿ: 1,385ಶ್ರೀಗಂಧ ಕಳ್ಳಸಾಗಣೆ: 237

ರಕ್ತಚಂದನ ಕಳ್ಳಸಾಗಣೆ: 07

ಬೀಟೆ ಕಳ್ಳಸಾಗಣೆ: 1,326

ವನ್ಯಜೀವಿ ಸಂಬಂಧಿತ ಪ್ರಕರಣ: 429

ಇತರ: 2,482

ಒಟ್ಟು: 5,866 

 
 

click me!