
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೇ ಸುಮಾರು 40 ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಸಾವಿರಾರು ಮರಗಳನ್ನು ಜೆಸಿಬಿ ಮೂಲಕ ಕಡಿದು ನಾಶಪಡಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ನಡೆದ ಈ ಅಕ್ರಮ ಮರಕಟಾವು ಪರಿಸರ ಪ್ರೇಮಿಗಳು, ರೈತ ಸಂಘಟನೆಗಳು ಹಾಗೂ ಗ್ರಾಮಸ್ಥರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರವು 2025ರ ಸೆಪ್ಟೆಂಬರ್ 17ರಂದು ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನನ್ನು ಇಂಧನ ಇಲಾಖೆಗೆ ಹಸ್ತಾಂತರಿಸಿ, ಸೌರ ವಿದ್ಯುತ್ ಘಟಕ ಸ್ಥಾಪನೆಗಾಗಿ ಲೀಸ್ ನೀಡಲು ಅನುಮೋದನೆ ನೀಡಿತ್ತು. ಆದರೆ ಈ ಯೋಜನೆಯ ಅನುಷ್ಠಾನದ ವೇಳೆ ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೇ ಗುಡ್ಡ ಪ್ರದೇಶದಲ್ಲಿದ್ದ ಸಾವಿರಾರು ಮರಗಳನ್ನು ನಿರ್ದಯವಾಗಿ ನೆಲಸಮಗೊಳಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೌರಿಗುಡ್ಡ ಪ್ರದೇಶದಲ್ಲಿ ಶ್ರೀಗಂಧ ಸೇರಿದಂತೆ ಅನೇಕ ಮೌಲ್ಯಯುತ ಹಾಗೂ ಪರಿಸರ ಸಮತೋಲನಕ್ಕೆ ಅತ್ಯಂತ ಅಗತ್ಯವಿರುವ ಮರಗಳು ಇದ್ದವು. ಅವುಗಳನ್ನು ಯಾವುದೇ ನಿಯಮಾನುಸರಣೆ ಇಲ್ಲದೇ ಬುಡಸಮೇತ ಕಿತ್ತುಹಾಕಲಾಗಿದೆ. ಬರಡು ಗುಡ್ಡಗಳು ಸಾಕಷ್ಟು ಇರುವುದರ ನಡುವೆ, ಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡವನ್ನೇ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಆಯ್ಕೆ ಮಾಡಿರುವುದು ಏಕೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಎತ್ತಿದ್ದಾರೆ. ಈ ಮರಗಳ ಮಾರಣಹೋಮದ ವಿರುದ್ಧ ರೈತ ಸಂಘಟನೆಗಳು ಹಾಗೂ ಸ್ಥಳೀಯರು ಸಿಡಿದೆದ್ದಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಂಧನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ರೈತ ತನ್ನ ಜಮೀನಿನಲ್ಲಿ ಒಂದು ಮರ ಕಡಿದರೂ ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತದೆ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಬಡಾಲ ಅಂಕಲಗಿ ಗ್ರಾಮದಲ್ಲಿ ಸಾವಿರಾರು ಮರಗಳು ನಾಶವಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ಯಾವ ನ್ಯಾಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈಗಾಗಲೇ 40 ಎಕರೆ ಪ್ರದೇಶ ಸಂಪೂರ್ಣ ನಾಶವಾಗಿದ್ದು, ಮುಂದಿನ ದಿನಗಳಲ್ಲಿ 500 ಎಕರೆ ಜಮೀನಿನವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಇದು ಕೇವಲ ಅಕ್ರಮವಲ್ಲ, ಇದು ಪರಿಸರದ ಹತ್ಯೆ. ತಕ್ಷಣ ಮರ ಕತ್ತರಿಸುವುದನ್ನು ನಿಲ್ಲಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ” ಎಂದು ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.
ಬಡಾಲ ಅಂಕಲಗಿ ಗ್ರಾಮದ ಗಾಯರಾಣ ಜಮೀನಿನ ಸರ್ವೇ ನಂ. 359ರ ಒಟ್ಟು 67.10 ಎಕರೆ ಪೈಕಿ 40 ಎಕರೆ ಸರ್ಕಾರಿ ಭೂಮಿಯನ್ನು ಪ್ರಧಾನಮಂತ್ರಿ ಕುಸುಮ್ (PM-KUSUM) ಪೀಡರ್ ಲೆವೆಲ್ ಸೋಲರೈಸೇಷನ್ ಯೋಜನೆಯಡಿ ಸೌರ ವಿದ್ಯುತ್ ಘಟಕ ಸ್ಥಾಪನೆಗಾಗಿ ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಒಂದು ಎಕರೆಗೆ ವರ್ಷಕ್ಕೆ ₹25,000 ಲೀಸ್ ಶುಲ್ಕ ನಿಗದಿಯಾಗಿದ್ದು, ಒಟ್ಟು ₹10 ಲಕ್ಷ ಮೊತ್ತವನ್ನು ಸೌರ ಅಭಿವೃದ್ಧಿದಾರರಿಂದ ಸಂಗ್ರಹಿಸಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಲೀಸ್ ದರಕ್ಕೆ ಶೇ.5ರಷ್ಟು ಏರಿಕೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಾಧ್ಯಮಗಳಲ್ಲಿ ಪ್ರಕರಣ ವ್ಯಾಪಕವಾಗಿ ವರದಿಯಾಗುತ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಕೊನೆಗೂ ಕ್ರಮ ಕೈಗೊಂಡಿದೆ. ಶ್ರೀನಿವಾಸ ಕನ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೌರ ಘಟಕ ನಿರ್ಮಾಣದ ನೆಪದಲ್ಲಿ ಶ್ರೀಗಂಧ ಮರಗಳನ್ನು ಬುಡಸಮೇತ ಕತ್ತರಿಸಲಾಗಿದೆ ಎಂಬ ಆರೋಪದಡಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 82, 84 ಮತ್ತು 86 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 35.148 ಕೆಜಿ ಹಸಿ ಶ್ರೀಗಂಧವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗ್ರಾಮದ ರೈತ ರಾಮನಗೌಡ ಪಾಟೀಲ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಎಸಿಎಫ್ ನಾಗರಾಜ್ ಬಾಳೇಹೊಸುರ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಡಿಸಿಎಫ್ ಮೂಲಕ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲ್ಯಾಂಡ್ ಕ್ಲಿಯರನ್ಸ್ ವೇಳೆ ಮರ ಕಟಾವಿಗೆ ಅನುಮತಿ ಪಡೆಯಲಾಗಿಲ್ಲ ಎಂಬುದು ದೃಢಪಟ್ಟಿದೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆ ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿದ್ದು, ಯಾವುದೇ ರಾಜಕೀಯ ಒತ್ತಡವಿಲ್ಲ. ಸಂರಕ್ಷಿತ ಶ್ರೀಗಂಧ ಮರಗಳನ್ನು ಕತ್ತರಿಸಿರುವುದು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಲ್ಯಾಂಡ್ ಕ್ಲಿಯರನ್ಸ್ ವೇಳೆ ಮೂಲ ಗುತ್ತಿಗೆ ಪಡೆದವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಅಂತಿಮ ವರದಿ ಸಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸುಮಾರು 600 ಎಕರೆ ಸರ್ಕಾರಿ ಜಮೀನನ್ನು ಸೌರ ಘಟಕ ನಿರ್ಮಾಣಕ್ಕಾಗಿ ಇಂಧನ ಇಲಾಖೆಗೆ ನೀಡಲಾಗಿದ್ದು, ರಾಜ್ಯ ಮಟ್ಟದಲ್ಲಿ ಇದು 3,000 ಎಕರೆಗೆ ತಲುಪಿದೆ. ಸಂರಕ್ಷಿತ ಮರಗಳಿಗೆ ಹಾನಿಯಾಗದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ