
ಬಳ್ಳಾರಿ (ಫೆ.3): ಬಳ್ಳಾರಿಯ ರಾಜಕೀಯದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ನಡುವಿನ ಗಲಾಟೆ ತಣ್ಣಗಾಯಿತು ಎನ್ನುವಷ್ಟರಲ್ಲೇ ಹೊಸ ಸಂಘರ್ಷ ಶುರುವಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಹಾಗೂ ಶಾಸಕ ನಾಗೇಂದ್ರ ಅವರ ಬೆಂಬಲಿಗ, ಕಾರ್ಪೊರೇಟರ್ ಅಸೀಫ್ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದೆ.
'ರೈಸ್ ಆಫ್ ಹ್ಯುಮಾನಿಟಿ' (Rise of Humanity) ಎನ್ನುವ ಟ್ರಸ್ಟ್‌ಗೆ ಸಂಸ್ಥೆಯವರು ಅಸೀಫ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಈ ಜಗಳಕ್ಕೆ ಮೂಲ ಕಾರಣ ಎನ್ನಲಾಗಿದೆ. ಅಸೀಫ್ ಅಧ್ಯಕ್ಷರಾದದ್ದನ್ನು ಸಹಿಸದ ಅಲಿಖಾನ್, ವಿವಿಧ ಸೋಷಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಅಸೀಫ್ ಅವರು ಕೌಲ್‌ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇವಲ ಮಾತುಗಳಿಗೆ ಸೀಮಿತವಾಗದ ಈ ಜಗಳ ದೈಹಿಕ ಸಂಘರ್ಷಕ್ಕೆ ತಿರುಗಿದೆ. ಮೊನ್ನೆಯಷ್ಟೇ ಅಲಿಖಾನ್ ಬೆಂಬಲಿಗರು ಟ್ರಸ್ಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ದಾಂದಲೆಯ ದೃಶ್ಯಗಳು ಕಚೇರಿಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ದಾಂಧಲೆ ಬಳಿಕ ಅಲಿಖಾನ್ ಬೆಂಬಲಿಗರು ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ.
ಹಣಕಾಸು ವ್ಯವಹಾರದ ಗುಮಾನಿ
ಮೇಲ್ನೋಟಕ್ಕೆ ಟ್ರಸ್ಟ್ ಅಧ್ಯಕ್ಷ ಪಟ್ಟದ ಜಗಳ ಎಂದು ಕಾಣುತ್ತಿದ್ದರೂ, ಇದರ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರವಿದೆ ಎನ್ನಲಾಗುತ್ತಿದೆ. ಕಾರ್ಪೊರೇಟರ್ ಅಸೀಫ್ ಅವರು ಅಲಿಖಾನ್ ಅವರಿಗೆ ಹಣ ನೀಡಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಹಣಕಾಸಿನ ವಿಚಾರವನ್ನು ಅಸೀಫ್ ನಿರಾಕರಿಸುತ್ತಿದ್ದಾರೆ. ಈ ಜಗಳ ಬಳ್ಳಾರಿಯ ಉಭಯ ನಾಯಕರಿಗೂ ಈಗ ಇರಿಸುಮುರಿಸು ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ