Belagavi Assembly Session ಉ.ಕ. ಸಮಸ್ಯೆಗಳ ಚರ್ಚೆ, ಎಲ್ಲಾ ಬಾಕಿ ಯೋಜನೆ ಕೈಗೆತ್ತಿಕೊಳ್ಳಲು ಪಕ್ಷಾತೀತವಾಗಿ ಸದಸ್ಯರ ಆಗ್ರಹ!

By Suvarna NewsFirst Published Dec 22, 2021, 1:20 AM IST
Highlights
  • ಮಹದಾಯಿ, ಕೃಷ್ಣಾ ಮೇಲ್ದಂಡೆ, ಸ್ಮಾರ್ಟ್‌ಸಿಟಿ ಯೋಜನೆಗಳಿಗೆ ಆದ್ಯತೆಗೆ ಒತ್ತಾಯ
  • ಮೇಲ್ಮನೆಯಲ್ಲಿ ಉ.ಕ. ಸಮಸ್ಯೆಗಳ ಚರ್ಚೆ, ಸರ್ಕಾರಕ್ಕೆ ಎಚ್ಚರಿಕೆ
  • ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಮಸ್ಸೆಗೆ ಉತ್ತರ
     

ಬೆಳಗಾವಿ(ಡಿ.22):  ಮಹದಾಯಿ, ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಸೇರಿದಂತೆ ಪ್ರಮುಖ ನೀರಾವರಿ ಯೋಜನೆ(Water Project), ಸ್ಮಾರ್ಟ್‌ ಸಿಟಿ (Smart City) ಯೋಜನೆ ಸೇರಿದಂತೆ ವಿಳಂಬವಾಗಿರುವ ಎಲ್ಲ ಅಭಿವೃದ್ಧಿ ಯೋಜನೆ, ಕಾಮಗಾರಿಗಳನ್ನೂ ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಪಕ್ಷಾತೀತವಾಗಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಉತ್ತರ ಕರ್ನಾಟಕ(North Karnataka) ಅಭಿವೃದ್ಧಿಗೆ ಅಗತ್ಯ ಯೋಜನೆಗಳ ಬಗ್ಗೆ ಉಭಯ ಸದನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಕೂಡ ವಿವಿಧ ಸದಸ್ಯರು ಪ್ರತಿಪಾದಿಸಿದರು.

ಕಿತ್ತೂರು ಕರ್ನಾಟಕ(kittur karnataka) ಹಾಗೂ ಕಲ್ಯಾಣ ಕರ್ನಾಟಕದ(Kalyana Karnataka) ವಿವಿಧ ಸಮಸ್ಯೆಗಳ ಕುರಿತು ಮಂಗಳವಾರ ಸದನದಲ್ಲಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಕೆ.ಎ.ತಿಪ್ಪೇಸ್ವಾಮಿ, ಮರಿತಿಬ್ಬೇಗೌಡ, ಬಿಜೆಪಿಯ ಹಣಮಂತ ನಿರಾಣಿ, ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ , ಸಿ.ಎಂ. ಇಬ್ರಾಹಿಂ ಸೇರಿದಂತೆ ಅನೇಕ ಸದಸ್ಯರು ಸುದೀರ್ಘವಾಗಿ ಮಾತನಾಡಿದರು. ವಿಳಂಬವಾಗಿರುವ ಎಲ್ಲ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವ ಜೊತೆಗೆ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಇಚ್ಛಾಶಕ್ತಿ ತೋರಿಸಬೇಕೆಂದು ಒತ್ತಾಯಿಸಿದರು.

Hubballi| ಉತ್ತರ ಕರ್ನಾಟಕದ ಮೊದಲ ವೈಮಾನಿಕ ಕಾರ್ಗೋ ಸೇವೆ ಆರಂಭ

ಕೃಷ್ಣಾ ಮೇಲ್ದಂಡೆ ಪೂರ್ಣಗೊಳಿಸಿ:
ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಮಾತನಾಡಿ, ರಾಜ್ಯಕ್ಕೆ ಕೃಷ್ಣಾ ನದಿಯಿಂದ(Krishna River) ಹೆಚ್ಚುವರಿಯಾಗಿ ಲಭ್ಯವಾಗಿರುವ 130 ಟಿಎಂಸಿ ನೀರನ್ನು ಬಳಸುವ ಸಂಬಂಧ ನ್ಯಾಯಾಧಿಕರಣದ ತೀರ್ಪು ಬಂದು 11 ವರ್ಷವಾದರೂ ಕೈಗೆತ್ತಿಕೊಳ್ಳಲಾಗಿಲ್ಲ. ತೆಲಂಗಾಣ ರಾಜ್ಯ ಜಗತ್ತಿನಲ್ಲೇ ಅತಿ ದೊಡ್ಡದಾದ ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು 2016ರಲ್ಲಿ ಆರಂಭಿಸಿ 2019ರೊಳಗೆ ಮುಗಿಸಿದೆ. ಇಂತಹ ಬದ್ಧತೆ ನಮ್ಮ ಸರ್ಕಾರಗಳಿಗೆ ಏಕಿಲ್ಲ. ಕೃಷ್ಣಾ ಮೇಲ್ದಂಡೆಯ ಮೊದಲ ಎರಡು ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ರಾಜ್ಯ ಸರ್ಕಾರ ಮೂರನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಕೇಂದ್ರದಿಂದ ಅನುದಾನ ನೀಡುವಂತೆ ಕಾಯುತ್ತಿರುವುದು ಯಾಕೆ, ಸುಮಾರು 15 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ 65 ಸಾವಿರ ಕೋಟಿ ರು. ಅಂದಾಜು ವೆಚ್ಚದ ಈ ಯೋಜನೆಯಿಂದ ಮುಳುಗಡೆಯಾಗುವ 22 ಹಳ್ಳಿಗಳ ಲಕ್ಷಾಂತರ ಎಕರೆ ಜಮೀನು ಭೂಸ್ವಾಧೀನವಾಗಬೇಕಿದೆ. ಕೂಡಲೇ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರದ ನಾಯಕರು ಒತ್ತಡ ತಂದು ಇರುವ ಸಣ್ಣ ಪುಟ್ಟಕಾನೂನು ತೊಡಕು ಬಗೆಹರಿಸಿಕೊಂಡು ಕೂಡಲೇ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರದ ಅನುದಾನ ದೊರೆಯದಿದ್ದರೆ ರಾಜ್ಯದ ಬೊಕ್ಕಸದಿಂದಲೇ ಯೋಜನೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಲಿ ಐಟಿ-ಬಿಟಿ ಕೇಂದ್ರ ತೆರೆಯಲು ಪ್ರಯತ್ನ: ಸಚಿವ ಅಶ್ವತ್ಥ ನಾರಾಯಣ

ಅಮರಣಾಂತರ ಉಪವಾಸ ಎಚ್ಚರಿಕೆ:
ಆಲಮಟ್ಟಿಜಲಾಶಯ ಎತ್ತರಿಸಿದಾಗ ಮುಳುಗಡೆಯಾಗಿರುವ ಬಬಲೇಶ್ವರ ತಾಲ್ಲೂಕಿನ 14 ಹಳ್ಳಿಗಳು ಸೇರಿದಂತೆ ಇನ್ನೂ ಅನೇಕ ಹಳ್ಳಿಗಳ ಜನರಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಈ ಅನ್ಯಾಯ ಸರಿಪಡಿಸಲು ಆ ಜನರ ಭೂಮಿಯ ಮಾರ್ಗಸೂಚಿ ದರ ಹೆಚ್ಚಿಸಬೇಕು. ಸರ್ಕಾರ ಈ ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುತ್ತೇನೆ. ಅಗತ್ಯ ಬಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಎಸ್‌.ಆರ್‌.ಪಾಟೀಲ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಮತೋಲನ ಜಲಾಶಯ:
ಜೆಡಿಎಸ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಆಂಧ್ರ ಪ್ರದೇಶದ ಜೊತೆ ಚರ್ಚೆ ನಡೆಸಿ ನವಿಲೆಯಲ್ಲಿ ಸಮತೋಲನ ಜಲಾಶಯ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಬಿಜೆಪಿಯ ಹಣಮಂತ ನಿರಾಣಿ ಮಾತನಾಡಿ, ಕಾಳಿನದಿ ನೀರನ್ನು ಮಲಪ್ರಭಾ, ಘಟಪ್ರಭಾ ನದಿಗಳಿಗೆ ಜೋಡಿಸಿದರೆ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ 25 ಟಿಎಂಸಿ ನೀರು ದೊರೆಯಲಿದೆ. ಹೈಡ್ರಾಲಿಕ್‌ ಲಿಫ್ಟ್‌ ಮೂಲಕ ಈ ನೀರನ್ನು ಬಳಸಿಕೊಳ್ಳಬಹುದು. ಈ ಯೋಜನಾ ವೆಚ್ಚ 5500 ಕೋಟಿ ರು. ಆಗುತ್ತದೆ. ಇದರಿಂದ ಬೆಳಗಾವಿ, ಗದಗ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಡಿಪಿಆರ್‌ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಈ ಯೋಜನೆಯ ಜಾರಿ ಬಗ್ಗೆ ಗಮನ ಹರಿಸಬೇಕು ಎಂದರು.

ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌, ವಿಜಯಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿದರು.
 

click me!