
ಗಿರೀಶ್ ಗರಗ
ಬೆಂಗಳೂರು: ಮೂರೂವರೆ ದಶಕಗಳ ಹಿಂದಿನಿಂದ ಚರ್ಚೆಯಲ್ಲಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಮರುಜೀವ ನೀಡಿರುವ ರಾಜ್ಯ ಸರ್ಕಾರ, ಯೋಜನೆ ಜಾರಿಯಾಗುವ ಪ್ರದೇಶದ ಟೋಪೋಗ್ರಾಫಿಕಲ್ (ಸ್ಥಳಾಕೃತಿ) ಡ್ರೋನ್ ಸರ್ವೇಗೆ ಮುಂದಾಗಿದೆ. ಆ ಮೂಲಕ ರಾಜ್ಯ ಎರಡು ಪ್ರಮುಖ ನದಿ ಜೋಡಣೆಗೆ ಪ್ರಾಥಮಿಕ ಹೆಜ್ಜೆಯನ್ನಿಡಲಾಗುತ್ತಿದೆ.
ಪಶ್ಚಿಮಘಟ್ಟದ ಎರಡು ಪ್ರಮುಖ ನದಿಗಳನ್ನು ಒಂದೆಡೆ ಸೇರಿಸುವ ಉದ್ದೇಶದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕೂ ಮುನ್ನ ಯೋಜನೆಗೆ ಸಂಬಂಧಿಸಿದಂತೆ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ ಟೋಪೋಗ್ರಾಫಿಕ್ ಸರ್ವೇ ನಡೆಸಲು ಜಲಸಂಪನ್ಮೂಲ ಇಲಾಖೆ ಅಧೀನದ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಎಸ್) ಮುಂದಾಗಿದೆ. ಈ ಟೋಪೋಗ್ರಾಫಿಕಲ್ ಸರ್ವೇ ಪೂರ್ಣಗೊಂಡ ನಂತರ ಅದನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ಆಧಾರದಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತದೆ.
ಸದ್ಯ ಕೆಇಆರ್‌ಎಸ್ ಸಿದ್ಧಪಡಿಸಿರುವ ದಾಖಲೆಯಂತೆ ಡ್ರೋನ್ ಮೂಲಕ ಟೋಪೋಗ್ರಾಫಿಕಲ್ ಸರ್ವೇ ನಡೆಸಲಾಗುತ್ತದೆ. ಈ ಸರ್ವೇಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ನಡೆಯುವ ಸಾಧ್ಯತೆಯಿರುವ ಭೂಮಿಯ ಗುರುತ್ವಾಕರ್ಷಣೆಯ ಪೈಪ್‌ಗಳ ಅಳವಡಿಕೆ, ಟಿಬಿಎಂ ಕಂಬಗಳ ನಿರ್ಮಾಣ, ಎಲ್ಲೆಲ್ಲಿ ಸುರಂಗ ಕೊರದು ಪೈಪ್ ಅಳವಡಿಸಬಹುದು ಎಂಬುದರ ಬಗ್ಗೆ ಸರ್ವೇ ಮಾಡಲಾಗುತ್ತದೆ. ಜತೆಗೆ, ಯೋಜನೆ ಕಾಮಗಾರಿ ಅನುಷ್ಠಾನಗೊಳ್ಳಲಿರುವ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತಂತೆಯೂ ಸರ್ವೇ ಮೂಲಕ ಪರಿಶೀಲಿಸಲಾಗುತ್ತದೆ ಎಂದು ಕೆಇಆರ್‌ಎಸ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟೋಪೋಗ್ರಾಫಿಕಲ್ ಸರ್ವೇ ನಡೆಸಲು ಖಾಸಗಿ ಎಂಜಿನಿಯರಿಂಗ್ ಸಂಸ್ಥೆಗೆ ಗುತ್ತಿಗೆ ನೀಡಲು ಕೆಇಆರ್‌ಎಸ್ ಮುಂದಾಗಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಕಾರ್ಯಾದೇಶ ನೀಡಿದ ಮೂರು ತಿಂಗಳಲ್ಲಿ ಸರ್ವೇ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದೂ ಸಂಸ್ಥೆಗೆ ಸೂಚಿಸಲಾಗುತ್ತಿದೆ.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ಹಣ ಹೂಡಿಕೆ ಮಾಡಲಿವೆ. ಅದರಂತೆ ಈ ಹಿಂದೆಯೇ ಕೇಂದ್ರ ಸರ್ಕಾರ ₹9000 ಕೋಟಿ ನೀಡುವುದಾಗಿ ಘೋಷಿಸಿದೆ. ರಾಜ್ಯ ಸರ್ಕಾರ ₹1000 ಸಾವಿರ ಕೋಟಿ ನೀಡುವ ಭರವಸೆ ನೀಡಿದೆ. ಅಲ್ಲದೆ, ಈ ಹಿಂದೆ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ, ಯೋಜನೆ ಅನುಷ್ಠಾನಕ್ಕೆ ಇನ್ನೂ ಚಾಲನೆ ನೀಡದ ಕಾರಣ ಹೊಸದಾಗಿ ಡಿಪಿಆರ್ ಸಿದ್ಧಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯ ನಡೆಸಲಾಗುವ ಟೋಪೋಗ್ರಾಫಿಕಲ್ ಸರ್ವೇಯು ಹೊಸದಾಗಿ ಡಿಪಿಆರ್ ಸಿದ್ಧಪಡಿಸಲು ಅನುಕೂಲವಾಗಲಿದೆ.
ಹೊಸದಾಗಿ ಡಿಪಿಆರ್ ಸಿದ್ಧವಾದ ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಆನಂತರ ಕೇಂದ್ರ ಮತ್ತು ರಾಜ್ಯದ ಅರಣ್ಯ ಇಲಾಖೆ, ನೀರು ಹಂಚಿಕೆಗಾಗಿ ನ್ಯಾಯಮಂಡಳಿಗಳ ಅನುಮೋದನೆ, ಕೇಂದ್ರ ಜಲ ಆಯೋಗದ ಅನುಮತಿಗಳನ್ನು ಪಡೆಯಬೇಕಿದೆ. ಆನಂತರವಷ್ಟೇ ಯೋಜನೆ ಜಾರಿಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯು 1992ರಿಂದಲೂ ಚರ್ಚೆಯಲ್ಲಿದೆ. ಬೇಡ್ತಿ ನದಿಯು ಪಶ್ಚಿಮಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ವರದಾ ನದಿ ಕೂಡ ಪಶ್ಚಿಮಘಟ್ಟದಲ್ಲಿಯೇ ಹುಟ್ಟಿ ಪೂರ್ವಕ್ಕೆ ಹರಿದು ತುಂಗಭದ್ರಾ ನದಿಗೆ ಸೇರುತ್ತದೆ. ಬೇಡ್ತಿ ನದಿಯಿಂದ ಪ್ರತಿ ವರ್ಷ 242 ಟಿಎಂಸಿಗಳಷ್ಟು ನೀರು ಅರಬ್ಬಿ ಸಮುದ್ರಕ್ಕೆ ಸೇರುತ್ತಿದೆ. ಅದೇ ವರದಾ ನದಿಯು ವರ್ಷದ ಆರು ತಿಂಗಳು ಮಾತ್ರ ಹರಿದು, ಬೇಸಿಗೆಯಲ್ಲಿ ನೀರು ಕಡಿಮೆಯಿರುತ್ತದೆ. ಅರಬ್ಬಿ ಸಮುದ್ರಕ್ಕೆ ಸೇರುವ 242 ಟಿಎಂಸಿ ನೀರಿನಲ್ಲಿ 18 ಟಿಎಂಸಿ ನೀರನ್ನು ವರದಾ ನದಿಗೆ ಹರಿಸಿ ವರ್ಷಪೂರ್ತಿ ವರದಾ ನದಿಯಲ್ಲಿ ನೀರಿರುವಂತೆ ಮಾಡುವುದು ಯೋಜನೆ ಉದ್ದೇಶವಾಗಿದೆ. ಅದರಿಂದಾಗಿ ಹಾವೇರಿ, ಗದಗ ಮತ್ತು ರಾಯಚೂರು ಜಿಲ್ಲೆಗಳ ಕುಡಿಯುವ ಮತ್ತು ಕೃಷಿ ಚಟುವಟಿಕೆಗಿರುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.
ಉತ್ತರ ಕನ್ನಡ ಜನರ ವಿರೋಧ
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಉತ್ತರ ಕನ್ನಡ ಜಿಲ್ಲೆ ಜನರಿಂದ ವಿರೋಧವಿದೆ. ಯೋಜನೆ ಜಾರಿಯಿಂದ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಪಶ್ಚಿಮಘಟ್ಟದ ಪರಿಸರ ಹಾಳಾಗುತ್ತದೆ ಮತ್ತು ಪರಿಸರ ಸಮತೋಲನ ತಪ್ಪಲಿದೆ. ಜೀವವೈಧ್ಯಕ್ಕೂ ಧಕ್ಕೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ