ಎಸ್‌ಸಿ ಮೀಸಲಿಗೆ ಬೇಡ ಜಂಗಮರ ಹೋರಾಟ, ಹೋರಾಟಗಾರರನ್ನು ತಡೆದಿದ್ದಕ್ಕೆ ಟ್ರಾಫಿಕ್‌ ಜಾಮ್‌

By Kannadaprabha News  |  First Published Jul 1, 2022, 10:18 AM IST

ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಮೀಸಲಾತಿ ಸೌಲಭ್ಯ ನೀಡಬೇಕೆಂದು ಹೋರಾಟ ನಡೆಸಿದೆ. ಈ ನಡುವೆ ಉತ್ತರ ಕರ್ನಾಟಕದ ಭಾಗದಿಂದ ನೂರಾರು ಬಸ್‌ಗಳಲ್ಲಿ ಆಗಮಿಸುತ್ತಿದ್ದ ಪ್ರತಿಭಟನಾಕಾರರನ್ನು ಬೆಂಗಳೂರಿಗೆ ಬರುವ ಮುನ್ನವೇ ತಡೆದಿರುವ ಘಟನೆ ಕೂಡ  ನಡೆದಿದೆ.


ಬೆಂಗಳೂರು (ಜು.1): ‘ಬೇಡ ಜಂಗಮ’ ಸಮುದಾಯದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದು, ನ್ಯಾಯಯುತವಾಗಿ ಪರಿಶಿಷ್ಟಜಾತಿ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಒಕ್ಕೂಟ ಹಮ್ಮಿಕೊಂಡಿದ್ದ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ’ದಲ್ಲಿ ಭಾಗಿಯಾಗಿದ್ದ ಸಮುದಾಯದ ಸ್ವಾಮೀಜಿಗಳು, ಹೋರಾಟಗಾರರು, ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟಜಾತಿ ಮೀಸಲಾತಿ ಸೌಲಭ್ಯ ಕೊಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

Tap to resize

Latest Videos

ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರದ ಪರಿಶಿಷ್ಟಜಾತಿ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಬೇಡಜಂಗಮ ಕುರಿತು ವಿಧಾನಸಭೆಯಲ್ಲಿ ಅನಗತ್ಯ, ಅಸಂಬದ್ಧ ಹಾಗೂ ಅಸಂವಿಧಾನಕವಾಗಿ ಚರ್ಚೆ ನಡೆಯುತ್ತಿದೆ. ನಮ್ಮ ಕುಲವನ್ನೇ ನಾಶಪಡಿಸಲು ಸದನ ಸಮಿತಿಯ ಕೆಲ ಶಾಸಕರು ಪ್ರಯತ್ನಿಸಿದ್ದಾರೆ. ಕುಲದ ಮರಣ ಶಾಸನ ಬರೆಯುವ ಯತ್ನ ಮಾಡಲಾಗಿದೆ. ಹೀಗಾಗಿ, ಸತ್ಯಪ್ರತಿಪಾದನೆಗಾಗಿ ಹೋರಾಟ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ವಲಸಿಗರಿಗೆ 4ನೇ ಅತಿ ದುಬಾರಿ ನಗರ..!

ಜಾತಿ ಪ್ರಮಾಣ ಪತ್ರ ನೀಡಿ: ಕೇಂದ್ರ ಸರ್ಕಾರದ ಪರಿಶಿಷ್ಟಜಾತಿಯಲ್ಲಿ ಇರುವ ಬೇಡ ಜಂಗಮರು ಬೇರೆ, ರಾಜ್ಯದಲ್ಲಿರುವ ಬೇಡ ಜಂಗಮರು ಬೇರೆ ಎಂದು ಬಿಂಬಿಸಲಾಗುತ್ತಿದೆ. ವೀರಶೈವ ಲಿಂಗಾಯತ ಪಂಥದ ಅನುಯಾಯಿಗಳೇ ಬೇಡ ಜಂಗಮರು. ಇದಕ್ಕೆ ನ್ಯಾಯಾಲಯ ತೀರ್ಪು ಮತ್ತು ಆದೇಶಗಳಿವೆ. ಆದರೂ, ನಮ್ಮನ್ನು ಪರಿಶಿಷ್ಟಜಾತಿಯಿಂದ ದೂರ ಮಾಡುವ ಯತ್ನ ನಡೆಯುತ್ತಿವೆ. ಸರ್ಕಾರ ಕೂಡಲೇ ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ನೀಡಬೇಕು. ಪ್ರಮಾಣ ಪತ್ರ ಕೊಡದೇ ತೊಂದರೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಗಮೇಶ್ವರ ಸ್ವಾಮೀಜಿ, ಗುಹೇಶ್ವರ ಸ್ವಾಮೀಜಿ, ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ರವಿಶಂಕರ ಸ್ವಾಮೀಜಿ ಗೋಕಾಕ್‌, ಚನ್ನಬಸವ ಸ್ವಾಮೀಜಿ, ಅಡವಿ ಸಿದ್ದೇಶ್ವರ ಸ್ವಾಮೀಜಿ, ಗಂಗಾಧರ ಮಹಾಸ್ವಾಮಿ, ಗುರು ಮಡಿವಾಳೇಶ್ವರ ಸ್ವಾಮೀಜಿ, ಕಲ್ಯಾಣ ಮಹಾಸ್ವಾಮಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಸಂವಿಧಾನದಲ್ಲಿ ಉಲ್ಲೇಖಿಸಿರುವ 101 ಪರಿಶಿಷ್ಟರ ಪಟ್ಟಿಯಲ್ಲಿ ಬೇಡ ಜಂಗಮ ಹೆಸರು 19ನೆ ಸ್ಥಾನದಲ್ಲಿದೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದಿರುವ ಬೇಡ ಜಂಗಮ ಸಮುದಾಯದ ಅಭಿವೃದ್ಧಿಗೆ ನಿಗಮ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

KONKANI SIGN BOARD CONTROVERSY; ಕೊಂಕಣಿ ಬೋರ್ಡ್ ವಿವಾದ ಹುಟ್ಟು ಹಾಕಿದ ಕಾರವಾರ ನಗರಸಭೆ!

ಪ್ರತಿಭಟನಾಕಾರರನ್ನು ತಡೆದಿದ್ದಕ್ಕೆ ಟ್ರಾಫಿಕ್‌ ಜಾಮ್‌: ಬೇಡ ಜಂಗಮ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಉತ್ತರ ಕರ್ನಾಟಕದ ಭಾಗದಿಂದ ನೂರಾರು ಬಸ್‌ಗಳಲ್ಲಿ ಆಗಮಿಸುತ್ತಿದ್ದ ಪ್ರತಿಭಟನಾಕಾರರನ್ನು ಬೆಂಗಳೂರಿಗೆ ಬರುವ ಮುನ್ನವೇ ಮಾರ್ಗ ಮಧ್ಯೆ ಶಿರಾ ಸಮೀಪದ ಕರೇಜವನಹಳ್ಳಿ ಟೋಲ್‌ಗೇಟ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೊಲೀಸರು ತಡೆದ ಪರಿಣಾಮ ಸುಮಾರು 10 ಕಿಮೀ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಟ್ರಾಫಿಕ್‌ ಜಾಮ್‌ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

ಪೊಲೀಸರು ಪ್ರತಿಭಟನಾಕಾರರ ವಾಹನಗಳನ್ನು ತಡೆದಿದ್ದರಿಂದ ಆಕ್ರೋಶ ಭರಿತರಾದ ಸಾವಿರಾರು ಮಂದಿ ಕರೇಜವನಹಳ್ಳಿ ಟೋಲ್‌ ಬಳಿ ಪ್ರತಿಭಟನೆಗಿಳಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೇಡ ಜಂಗಮ ಸತ್ಯಪ್ರತಿಪಾದನ ಸತ್ಯಾಗ್ರಹ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ನಿನ್ನೆ ರಾತ್ರಿಯೇ ಜಮಖಂಡಿ, ರಾಯಚೂರು, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕ ಭಾಗದಿಂದ ಬಸ್‌ಗಳಲ್ಲಿ ಹೊರಟಿದ್ದರು. ತುಮಕೂರಿನ ಕಳ್ಳಂಬೆಳ್ಳ ಟೋಲ್‌ ಬಳಿ ಹೋರಾಟಗಾರರಿದ್ದ 80ಕ್ಕೂ ಹೆಚ್ಚು ಬಸ್‌, ನೂರಾರು ಕ್ರೂಸರ್‌ ವಾಹನಗಳನ್ನು ತಡೆದ ಪೊಲೀಸರು, ಬೆಂಗಳೂರಿಗೆ ಹೋಗದಂತೆ ಬಂದೋಬಸ್ತ್ ಮಾಡಿದ್ದರು.

ಪೊಲೀಸರ ವರ್ತನೆಗೆ ಆಕ್ರೋಶಗೊಂಡ ಜನರು, ತಮ್ಮ ವಾಹನಗಳನ್ನ ಬಿಡುವಂತೆ ಕಳ್ಳಂಬೆಳ್ಳ ಟೋಲ್‌ ಬಳಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬೆಳಗಿನ ಜಾವದಿಂದಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ವಾಹನಗಳನ್ನು ಅಲ್ಲಿಯೇ ಬಿಟ್ಟು ಪ್ರತಿಭಟನಾಕಾರರು ಪಾದಯಾತ್ರೆ ಹೊರಟರು. ತಕ್ಷಣ ಎಚ್ಚೆತ್ತ ಪೊಲೀಸರು ಕಳ್ಳಂಬೆಳ್ಳದಿಂದ ಪಾದಯಾತ್ರೆ ಹೊರಟ ಬೇಡ ಜಂಗಮರನ್ನು ಕಂಟ್ರಿ ಕ್ಲಬ್‌ನಲ್ಲಿ ಕೂಡಿ ಹಾಕಿದರು. ಈ ಹಂತದಲ್ಲಿ ತೀವ್ರ ಸಿಟ್ಟಿಗೆದ್ದ ಪ್ರತಿಭಟನಾಕಾರರು ಪೊಲೀಸರನ್ನು ಧಿಕ್ಕರಿಸಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಪಾದಯಾತ್ರೆ ಆರಂಭಿಸಿದರು.

ಇನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್‌ ಟೋಲ್‌ ಬಳಿಯೂ ಹುಬ್ಬಳ್ಳಿ, ಧಾರಾವಾಡ, ವಿಜಯಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ 10 ಬಸ್‌ ಹಾಗೂ 10ಕ್ಕೂ ಹೆಚ್ಚು ಕ್ರೂಸರ್‌ ವಾಹನಗಳನ್ನು ವಾಹನಗಳನ್ನು ಪೊಲೀಸರು ತಡೆದಿದ್ದರು. ಹಾಗೆಯೇ ಕ್ಯಾತ್ಸಂದ್ರ ಸಿದ್ದಗಂಗಾ ಮಠದ ಬಳಿಯೂ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರು.

ಬೆಳಿಗ್ಗೆ 10.30ರ ವೇಳೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ನೇತೃತ್ವದಲ್ಲಿ ಪೊಲೀಸರು ತಡೆದಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ರಾಹುಲ್‌ ಕುಮಾರ್‌ ಶಹಪುರ ವಾಡ್‌ ಅವರು ಗುರುವಾರ ಬೆಳಗ್ಗೆ ಸುಮಾರು ಎರಡೂವರೆ ಗಂಟೆಯಿಂದ ಟ್ರಾಫಿಕ್‌ ಜಾಮ್‌ ಆಗಿತ್ತು. ಬಹಳಷ್ಟುಬೆಂಗಳೂರಿಗೆ ಹೋಗುವಂತಹವರನ್ನು ತಡೆಯುವ ವ್ಯವಸ್ಥೆ ಮಾಡಿದ್ದೆವು. ಅವರೆಲ್ಲ ಪ್ರತಿಭಟನೆಗೆ ಮುಂದಾದರು. ಮತ್ತೆ ಅವರ ಮನವೊಲಿಸಿ ಈಗ ಟ್ರಾಫಿಕ್‌ ಕ್ಲಿಯರ್‌ ಮಾಡಿದ್ದೇವೆ ಎಂದರು.

click me!