
ಬೆಂಗಳೂರು (ಜು.1): ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ನೀಡಿದ ಆದೇಶ ಪಾಲಿಸದ ರಾಜ್ಯ ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿರುವ ಹೈಕೋರ್ಟ್ , ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ, ಹೀಗಾದರೆ ನ್ಯಾಯಾಲಯ ಇರುವುದು ಏತಕ್ಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ತೀವ್ರ ಬೇಸರ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರ ಹೆಚ್ಚುವರಿ ಅಡ್ವೋಕೇಟ್ ಜನರಲ್ (ಎಎಜಿ) ಸುಬ್ರಹ್ಮಣ್ಯ ಹಾಜರಾಗಿ, ಬಹುತೇಕ ಕಡೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ. ಹಲವು ಕಡೆ ಸರ್ಕಾರದ ಜಾಗವಿಲ್ಲ. ಕರಾಬು ಭೂಮಿಯಿದ್ದರೂ ಅದನ್ನು ನೀಡಲಾಗದು. ಭೂಮಿ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ಒದಗಿಸಲು ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಹಾಗಾಗಿ, ಅರ್ಜಿ ಸಂಬಂಧ ಹೈಕೋರ್ಟ್ ನ ನೀಡಿರುವ ಆದೇಶ ಪಾಲನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಅದಕ್ಕೆ ಅತೃಪ್ತರಾದ ನ್ಯಾಯಮೂರ್ತಿ ವೀರಪ್ಪ ಅವರು, ನ್ಯಾಯಾಲಯ ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಿಲ್ಲ. ಕೋರ್ಚ್ ಆದೇಶ ಉಲ್ಲಂಘಿಸಿದರೆ ಸಹಿಸಲಾಗದು. ಸ್ಮಶಾನಕ್ಕೆ ಜಾಗ ಒದಗಿಸಲು ಆರು ತಿಂಗಳು ಸಾಕಾಗುವುದಿಲ್ಲ ಎನ್ನುವುದಾರೆ ಆದೇಶ ಪ್ರಕಟವಾದ ದಿನವೇ ಹೆಚ್ಚಿನ ಸಮಯವನ್ನು ಸರ್ಕಾರ ಕೋರಬಹುದಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ನಂತರ ಸಬೂಬು ಹೇಳಿ ಸಮಯ ಕೇಳಿದರೆ ಒಪ್ಪಲಾಗದು. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
MONEY LAUNDERING CASE: ದೆಹಲಿಯ ಇ.ಡಿ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರ್
ಜೂನ್ 23 ರಂದು ಕೂಡ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈ ವೇಳೆ ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 29,076 ಗ್ರಾಮಗಳಿವೆ. ಅದರಲ್ಲಿ ಒಟ್ಟು 27,648 ಗ್ರಾಮ ಮತ್ತು 299 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗಿದೆ. ಇನ್ನೂ 1,428 ಗ್ರಾಮಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದೆ. ಅದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಜಮೀನು ಅಗತ್ಯವಿದೆ ಎಂದು ವಿವರಿಸಿದ್ದರು
ಅಲ್ಲದೆ, ಸರ್ಕಾರಿ ಜಮೀನು ಸಿಗುತ್ತಿಲ್ಲ. ಹಾಗಾಗಿ ಖಾಸಗಿಯವರ ಜಮೀನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಸ್ಮಶಾನಕ್ಕೆ ಭೂಮಿ ನೀಡಲು ಜನ ಮುಂದೆ ಬರುತ್ತಿಲ್ಲ. ಹಾಗೆಯೇ, ಪ್ರತಿ ಹಳ್ಳಿಯಲ್ಲೂ ವಿವಿಧ ಧರ್ಮ-ಜಾತಿಯ ಜನರು ತಮ್ಮದೇ ಆದ ವಿಭಿನ್ನ ಆಚರಣೆ ಮತ್ತು ಸಂಪ್ರದಾಯ ಹೊಂದಿದ್ದಾರೆ. ಇದರಿಂದ ಸ್ಮಶಾನಕ್ಕೆ ಜಾಗ ಒದಗಿಸಲು ಕಷ್ಟವಾಗಿದೆ. ಎರಡು ವರ್ಷ ಕಾಲಾವಕಾಶ ನೀಡಿದರೆ 1,428 ಗ್ರಾಮಗಳಿಗೆ ಮತ್ತು ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಲಾಗುವುದು ಎಂದು ಸರ್ಕಾರಿ ವಕೀಲರು ಮನವಿ ಮಾಡಿದ್ದರು.
ಕಟ್ಟಡ ಕಾರ್ಮಿಕರಿದ್ದಲ್ಲಿಗೇ ತೆರಳಿ ಉಚಿತ ಚಿಕಿತ್ಸೆ: ಸಂಚಾರಿ ಕ್ಲಿನಿಕ್ ಆರಂಭ
ಈ ಮನವಿಗೆ ಒಪ್ಪದ ನ್ಯಾಯಪೀಠ, ರಾಜ್ಯದ ಎಲ್ಲ ಗ್ರಾಮಗಳಿಗೂ ಸ್ಮಶಾನ ಒದಗಿಸಲು ಸರ್ಕಾರ ಈಗ ವರ್ಷ ಕಾಲಾವಕಾಶ ಕೋರಿದೆ. ಆದರೆ, ಏಕ ಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿಯೇ ಮೂರು ವರ್ಷ ಕಳೆದಿವೆ. ಆದರೂ ಹೈಕೋರ್ಟ್ ಆದೇಶವನ್ನು ಈವರೆಗೂ ಪಾಲಿಸಿಲ್ಲ. ಈ ವಿಚಾರದಲ್ಲಿ ಸರ್ಕಾರ ಈಗಲೂ ಕಣ್ತೆರೆದಿಲ್ಲ. ಹೈಕೋರ್ಟ್ ಮೌನವಾಗಿದ್ದರೆ ಸರ್ಕಾರ 20 ವರ್ಷ ಸಮಯ ಕೇಳುತ್ತದೆ. ಹಾಗಾಗಿ, ಮುಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ