
Beary Koota 2026 Bengaluru: ಕರಾವಳಿ ಭಾಗದಿಂದ ಉದ್ಯೋಗ, ವ್ಯಾಪಾರ ಹಾಗೂ ಶಿಕ್ಷಣಕ್ಕಾಗಿ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವ ಬ್ಯಾರಿ ಸಮುದಾಯದವರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ‘ಬ್ಯಾರಿಸ್ ಸೆಂಟ್ರಲ್ ಕಮಿಟಿ’ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ‘ಬ್ಯಾರಿ ಕೂಟ’ವನ್ನು ಆಯೋಜಿಸಲಾಗಿದೆ. 2026ರ ಫೆಬ್ರವರಿ 1ರ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‌ನಲ್ಲಿ ಈ ಬೃಹತ್ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ‘ಬ್ಯಾರಿ ಕೂಟ’ವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ ಕಳಕಳಿಗೂ ಸಾಕ್ಷಿಯಾಗಲಿದೆ. ಈ ಬಾರಿಯ ವಿಶೇಷತೆ ಎಂದರೆ ಇಂಪೀರಿಯೋ ಗ್ರೂಪ್ ಆಫ್ ಹೋಟೆಲ್ ಸಂಸ್ಥೆಯ ಮಾಲೀಕರ ಸಹಕಾರದೊಂದಿಗೆ ಹೊಸ ಆ್ಯಂಬ್ಯುಲೆನ್ಸ್ ಒಂದನ್ನು ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ಭಾರತ್ ಕನ್ಸ್‌ಟ್ರಕ್ಷನ್ ಮಾಲೀಕರಾದ ಮುಸ್ತಫಾ ಅವರ ನೆರವಿನಿಂದ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಅರ್ಹ ಹಾಗೂ ಬಡ ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಇದೇ ಸಂದರ್ಭದಲ್ಲಿ ಸಮಿತಿಯ ನೂತನ ವೆಬ್‌ಸೈಟ್ ಕೂಡ ಉದ್ಘಾಟನೆಗೊಳ್ಳಲಿದೆ.
ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ರಾಜ್ಯದ ಪ್ರಮುಖ ಸಚಿವರು ಹಾಗೂ ಶಾಸಕರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರಾವಳಿಯ ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬ್ಯಾರಿ ಒಪ್ಪನೆ ಪಾಟ್, ಕವಿಗೋಷ್ಠಿ, ಕಲಾ ಎಕ್ಸ್‌ಪೋ ಮತ್ತು ಬಾಯಲ್ಲಿ ನೀರೂರಿಸುವ ಕರಾವಳಿ ಖಾದ್ಯಗಳ ಆಹಾರ ಮಳಿಗೆಗಳು ಈ ಕೂಟದ ವಿಶೇಷ ಆಕರ್ಷಣೆಯಾಗಿರಲಿವೆ.
ವಿವಿಧ ಸ್ಪರ್ಧೆಗಳು ಮತ್ತು ಉದ್ಯಮ ತರಬೇತಿ
ಸಮುದಾಯದ ಯುವ ಜನತೆ ಮತ್ತು ಮಹಿಳೆಯರಿಗಾಗಿ ಹಲವಾರು ಆಸಕ್ತಿದಾಯಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಯುವ ಉದ್ಯಮಿಗಳಿಗೆ ಸ್ಫೂರ್ತಿ ನೀಡಲು 'ಬಿಝ್ ಟೆಕ್' ಸಮಾವೇಶ, ಮಹಿಳೆಯರಿಗೆ ಮದರಂಗಿ ಹಾಗೂ ಅಡುಗೆ ಸ್ಪರ್ಧೆಗಳು ನಡೆಯಲಿವೆ. ಮಕ್ಕಳಿಗೆ ಫ್ಯಾನ್ಸಿ ಡ್ರೆಸ್, ಕ್ಲೇ ಮಾಡೆಲಿಂಗ್ ಹಾಗೂ 'ಲಿಟಲ್ ಸ್ಟಾರ್ಸ್ ಎಂಜಿನಿಯರಿಂಗ್ ಮೈಂಡ್ಸ್' ಎಂಬ ವಿನೂತನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮುಖಂಡರಾದ ಕಲಂದರ್ ಕೊಯಿಲ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರ ಉಪಸ್ಥಿತಿ
ಪ್ರೆಸ್ ಕ್ಲಬ್‌ನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ, ಸುದ್ದಿಗೋಷ್ಠಿಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ, ಉಪಾಧ್ಯಕ್ಷರಾದ ಗಫೂರ್, ಮುಖಂಡರಾದ ಸವಾದ್ ಆರ್ ಟಿ ನಗರ, ಸಂಶುದ್ದೀನ್ ಕುಕ್ಕಾಜೆ, ರಿಫಾಯಿ, ಮಾಧ್ಯಮ ಕಾರ್ಯದರ್ಶಿ ಬಶೀರ್ ಅಡ್ಯನಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ