
ಬೆಂಗಳೂರು (ಜ.29): ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆ ಆರಂಭಿಸಿದ್ದಾರೆ. ಲಂಚ ಪಡೆಯುವಾಗ ಪೊಲೀಸ್ ಅಧಿಕಾರಿಯೊಬ್ಬರು ಬಲೆಗೆ ಬಿದ್ದ ಬೆನ್ನಲ್ಲೇ, ಇದೀಗ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಕಡು ಚಳಿಯಲ್ಲೂ ಭ್ರಷ್ಟ ಅಧಿಕಾರಿಗಳು ಬೆವರುವಂತೆ ಮಾಡಿರುವ ಈ ದಾಳಿಗಳು, ಯಾವಾಗ ಯಾರ ಮನೆ ಬಾಗಿಲು ತಟ್ಟುತ್ತವೋ ಎಂಬ ಭಯ ಹುಟ್ಟಿಸಿವೆ.
ಅರಣ್ಯ ಇಲಾಖೆಯ ಸಹಾಯಕ ಆಯುಕ್ತ ತೇಜಸ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ಅಧಿಕಾರಿ ಕೇವಲ ಮನೆ ಮಾತ್ರವಲ್ಲದೆ, ರೆಸಾರ್ಟ್ ಸೇರಿದಂತೆ ಬೃಹತ್ ಪ್ರಮಾಣದ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗದಲ್ಲಿರುವ ಇವರಿಗೆ ಸೇರಿದ ರೆಸಾರ್ಟ್ ಸೇರಿದಂತೆ ಒಟ್ಟು ಐದು ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ.
ದಾಳಿಯ ವೇಳೆ ಅಧಿಕಾರಿಗಳೇ ಬೆಚ್ಚಿಬೀಳುವಂತಹ ದಾಖಲೆಗಳು ಸಿಕ್ಕಿವೆ. ಬರೋಬ್ಬರಿ 26.55 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರಲ್ಲಿ 4 ನಿವೇಶನಗಳು, 8 ಐಷಾರಾಮಿ ಮನೆಗಳು ಮತ್ತು 16 ಎಕರೆ ಕೃಷಿ ಜಮೀನಿನ ದಾಖಲೆಗಳು ಸೇರಿವೆ. ಇದರೊಂದಿಗೆ 92 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಹಾಗೂ 50 ಸಾವಿರ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವರ್ಗಾವಣೆ ಬೆನ್ನಲ್ಲೇ ಬಿದ್ದ ಲೋಕಾಯುಕ್ತ ಬಲೆ
ವಿಶೇಷ ಎಂದರೆ, ಈ ಭ್ರಷ್ಟಾಧಿಕಾರಿ ತೇಜಸ್ ಕುಮಾರ್ ಸದ್ಯ ವರ್ಗಾವಣೆ ಆದೇಶದ ಮೇಲಿದ್ದರು. ಶಿವಮೊಗ್ಗ ಅರಣ್ಯ ಇಲಾಖೆಯ ಮ್ಯಾನೇಜರ್ ಆಗಿ ವರ್ಗಾವಣೆಯಾಗಿದ್ದ ಇವರು, ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮೊದಲೇ ಲೋಕಾಯುಕ್ತರ ಅತಿಥಿಯಾಗಿದ್ದಾರೆ. ಸದ್ಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮುಖ್ಯಾಂಶಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ