
ವಿಧಾನಸಭೆ (ಜ.29): ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳ ಹಾವಳಿ ಮಿತಿಮೀರಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದ ಗಮನ ಸೆಳೆದಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸುಮಾರು 25 ಲಕ್ಷ ಅಕ್ರಮ ನುಸುಳುಕೋರರು ಬೀಡುಬಿಟ್ಟಿದ್ದು, ನಕಲಿ ಆಧಾರ್ ಮತ್ತು ರೇಷನ್ ಕಾರ್ಡ್‌ಗಳನ್ನು ಪಡೆದು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಈ ನುಸುಳುಕೋರರಿಂದಾಗಿ ರಾಜ್ಯದಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿದೆ ಎಂದು ಯತ್ನಾಳ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಯತ್ನಾಳ್ ಕಿಡಿಕಾರಿದರು. ಪೊಲೀಸರ ನಿರ್ಲಕ್ಷ್ಯದಿಂದಲೇ ನುಸುಳುಕೋರರು ದರೋಡೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಲ್ಲಿನ ಏಜೆಂಟರೇ ಬಾಂಗ್ಲಾದಿಂದ ನುಸುಳುಕೋರರನ್ನು ಕರೆತರಲು ನೆರವಾಗುತ್ತಿದ್ದಾರೆ. ಅಕ್ರಮ ನುಸುಳುಕೋರರಿಂದ ಭದ್ರತೆಗೆ ಆಪಾಯವಿದೆ. ಇತ್ತೀಚಿನ ಬೆಂಗಳೂರಿನ ದರೋಡೆ ಪ್ರಕರಣವೇ ಇದಕ್ಕೆ ಸಾಕ್ಷಿ. ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕವು ಪಶ್ಚಿಮ ಬಂಗಾಳದಂತಾಗಲಿದೆ. ಭವಿಷ್ಯದಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಲಿದೆ ಎಂದು ಅವರು ಎಚ್ಚರಿಸಿದರು.
ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಿದ ಕನ್ನಡಿಗರನ್ನೇ ಪೊಲೀಸರು ಬಂಧಿಸುತ್ತಿರುವುದು ದೊಡ್ಡ ದುರಂತ ಎಂದು ಯತ್ನಾಳ್ ಕಿಡಿಕಾರಿದರು. 'ಪತ್ತೆ ಹಚ್ಚಿದವರನ್ನು ಜೈಲಿಗಟ್ಟುವ ಬದಲು, ಸರ್ಕಾರವೇ ವಿಶೇಷ ತಂಡವನ್ನು ರಚಿಸಲಿ. ತಕ್ಷಣವೇ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಅವರನ್ನು ಗಡಿಪಾರು ಮಾಡಬೇಕು' ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಕೇಂದ್ರದತ್ತ ಬೆರಳು ತೋರಿಸಿದ ರಾಮಲಿಂಗಾರೆಡ್ಡಿ!
ಯತ್ನಾಳ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಅಕ್ರಮ ವಲಸಿಗರ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ಆದರೆ, ಬಾಂಗ್ಲಾದಿಂದ ನುಸುಳುಕೋರರು ಐದಾರು ರಾಜ್ಯಗಳಿಂದ ಗಡಿ ದಾಟಿ ಇಲ್ಲಿಗೆ ಬರುತ್ತಿದ್ದಾರೆ. ಇಂತಹ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಯಾಕೆ ನುಸುಳುಕೋರರನ್ನು ತಡೆಯುತ್ತಿಲ್ಲ? ಎಂದು ಮರುಪ್ರಶ್ನಿಸಿದರು. ಗಡಿ ಭದ್ರತೆಯ ಜವಾಬ್ದಾರಿ ಇರುವ ಕೇಂದ್ರ ಸರ್ಕಾರ ಈ ನುಸುಳುವಿಕೆಯನ್ನು ತಡೆಯಬೇಕು ಎನ್ನುವ ಮೂಲಕ ಕೇಂದ್ರದತ್ತ ಬೊಟ್ಟು ತೋರಿಸಿದರು.
ವಿಶೇಷ ತಂಡ ರಚನೆಯ ಭರವಸೆ
ಸದನದಲ್ಲಿ ಸದಸ್ಯರ ಆತಂಕಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸುವ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ಹೊರಗೆ ಕಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ